ವಾರಾಣಸಿ: ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಜನರ ಕೆಮಿಸ್ಟ್ರಿ ಬುಡಮೇಲು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ ತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2019ರ ಲೋಕಸಭೆ ಚುನಾವಣೆಯಲ್ಲಿ ರಾಜ ಕೀಯ ಪಂಡಿತರ ಅಂಕಿಸಂಖ್ಯೆಯನ್ನು ಜನರ ಕೆಮಿಸ್ಟ್ರಿ ಸೋಲಿಸಿದೆ. ಇಷ್ಟಾದರೂ ರಾಜಕೀಯ ಪಂಡಿತರು ಕಣ್ಣು ಮುಚ್ಚಿ ಕುಳಿತಿದ್ದರೆ, ಅವರು ಇನ್ನೂ 20ನೇ ಶತಮಾನದ ಲ್ಲಿದ್ದಾರೆ ಎಂದೇ ಅರ್ಥ ಎಂದು ಹೇಳಿದ್ದಾರೆ. ಜತೆಗೆ, ಈ ಚುನಾವಣೆಯಲ್ಲಿ ರಾಜಕೀಯ ಅಸ್ಪೃಶ್ಯತೆ ಮತ್ತು ಹಿಂಸೆಯನ್ನೂ ನಾವು ಎದುರಿಸಬೇಕಾಯಿತು ಎಂದೂ ಮೋದಿ ಹೇಳಿದ್ದಾರೆ. ಎರಡನೇ ಬಾರಿಗೆ ಲೋಕಸಭೆಗೆ ಆರಿಸಿ ಕಳುಹಿಸಿದ ವಾರಾಣಸಿಯ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಧನ್ಯವಾದ ಅರ್ಪಿಸಿ ದ್ದಾರೆ. ರವಿವಾರ ಸಂಜೆ ಗುಜರಾತ್‌ಗೆ ತೆರಳಿ ತಾಯಿಯ ಆಶೀರ್ವಾದ ಪಡೆದ ಮೋದಿ, ಸೋಮವಾರ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ಕೆಲವು ರಾಜ್ಯಗಳಲ್ಲಿ ನಮ್ಮ ನೂರಾರು ಕಾರ್ಯ ಕರ್ತರನ್ನು ಅವರ ರಾಜಕೀಯ ನಿಲುವುಗಳ ಕಾರಣದಿಂದ ಹತ್ಯೆಗೈಯಲಾಗಿದೆ. ದಿನದಿಂದ ದಿನಕ್ಕೆ ರಾಜಕೀಯ ಅಸ್ಪೃಶ್ಯತೆ ಹೆಚುತ್ತಿದೆ. ಕೆಲವು ಕಡೆಗಳಲ್ಲಂತೂ ಬಿಜೆಪಿಯ ಹೆಸರು ಕೇಳಿದರೇ ಅಸ್ಪೃಶ್ಯತೆಯ ವಾತಾವರಣ ನಿರ್ಮಾಣವಾಗುತ್ತದೆ. ಕಾಶ್ಮೀರ, ಕೇರಳ ಮತ್ತು ಪ.ಬಂಗಾಲದಲ್ಲಿ ಯಾಕೆ ನಮ್ಮ ಕಾರ್ಯಕರ್ತರ ಮೇಲೆ ದಾಳಿ ಅಥವಾ ಹತ್ಯೆ ನಡೆಯುತ್ತದೆ? ಇದು ನಾಚಿಕೆಗೇಡು ಮತ್ತು ಪ್ರಜಾಪ್ರಭುತ್ವ ವಿರೋಧಿ. ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿ ಉಸಿರಿನಲ್ಲೂ ಹೊತ್ತಿರುವುದು ನಮ್ಮ ಪಕ್ಷ ಮಾತ್ರ ಎಂದು ಮೋದಿ ಹೇಳಿದ್ದಾರೆ.
ವಾರಾಣಸಿಯ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶಕ್ಕೆ ನಾನು ಪ್ರಧಾನಿಯಾಗಿರಬಹುದು, ಆದರೆ ನಿಮಗೆ ನಾನು ಸಂಸದ. ನಿಮ್ಮ ಸೇವಕ. ನನ್ನ ಈ ಗೆಲುವಿಗೆ ಕಾರ್ಯಕರ್ತರ ಶ್ರಮವೇ ಮುಖ್ಯ. ಬೇರು ಮಟ್ಟ ದಲ್ಲಿ ಕೆಲಸ ಮಾಡಿದವರು ಜನರಲ್ಲಿ ಸರಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದಿದ್ದಾರೆ.
ಕಾಶಿ ವಿಶ್ವನಾಥನಿಗೆ ನಮನ: ಸೋಮವಾರ ಕಾಶಿಗೆ ಆಗಮಿಸಿದ ಪ್ರಧಾನಿ ಮೋದಿ ಜೊತೆಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಕೂಡ ಇದ್ದರು. ವಿಮಾನ ನಿಲ್ದಾಣದಿಂದ ಕಾಪ್ಟರ್ ಮೂಲಕ ಆಗಮಿಸಿದ್ದ ಮೋದಿ, ಬನ್ಸ್‌ಪಾಠಕ್‌ಗೆ ರಸ್ತೆ ಮಾರ್ಗವಾಗಿ ದೇಗುಲಕ್ಕೆ ಆಗಮಿಸಿದ್ದರು. ಈ ವೇಳೆ ದಾರಿಗುಂಟ ಮೋದಿ ವೀಕ್ಷಿಸಲು ಜನರು ಸೇರಿದ್ದರು. ಮೋದಿಯನ್ನು ಪುಷ್ಪಾರ್ಚನೆ ಮೂಲಕ ಕಾಶಿ ಜನರು ಸ್ವಾಗತಿಸಿದರು. ಇದೊಂದು ಚುನಾವಣಾ ರ್ಯಾಲಿಯಂತೆಯೇ ಕಾಣುತ್ತಿತ್ತು.
ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಮೋದಿ, ಇಲ್ಲಿನ ದೇಗುಲದ ಅಭಿವೃದ್ಧಿ ಕಾಮಗಾರಿಗಳ ಮರು ಪರಿಶೀಲನೆಯನ್ನೂ ಮಾಡಿದರು. ಮೋದಿ ಆಗಮನಕ್ಕೂ ಮುನ್ನವೇ ಸಿಎಂ ಯೋಗಿ ಆದಿತ್ಯನಾಥ ಭಾರಿ ಸಿದ್ಧತೆ ನಡೆಸಿದ್ದರು. ಇಡೀ ನಗರವನ್ನು ಸ್ವಚ್ಛಗೊಳಿಸಲಾಗಿತ್ತು. ಅಷ್ಟೇ ಅಲ್ಲ, ನಗರದ ಎಲ್ಲೆಡೆ ಬಿಜೆಪಿಯ ಬಾವುಟಗಳು ರಾರಾಜಿಸುತ್ತಿದ್ದವು.
ಕಾಶಿಯನ್ನು ಮೋದಿ ರೂಪಾಂತರಿಸಿದ್ದಾರೆ: ಶಾ
ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ವಾರಾಣಸಿಯನ್ನು ರೂಪಾಂತರಗೊಳಿಸಿದ್ದಾರೆ ಎಂದು ಶಾ ಹೇಳಿದ್ದಾರೆ. ಜನರು ಮೋದಿಯನ್ನು ಬೆಂಬಲಿಸಿದ್ದಕ್ಕೆ ಹಾಗೂ ಪುನಃ ಆಯ್ಕೆ ಮಾಡಿದ್ದಕ್ಕೆ ಜನರನ್ನು ಶಾ ವಂದಿಸಿದ್ದಾರೆ. ಲೋಕಸಭೆಯಲ್ಲಿ ಮೋದಿಯಂತಹವರಿಂದ ಪ್ರತಿನಿಧಿಸಲ್ಪಡುತ್ತಿರುವುದು ವಾರಾಣಸಿ ಜನರ ಅದೃಷ್ಟ. ಬಹುಶಃ ನಾಮಪತ್ರ ಸಲ್ಲಿಸಿದ ನಂತರ ಮೋದಿ ಕ್ಷೇತ್ರಕ್ಕೆ ಭೇಟಿ ನೀಡದಿದ್ದರೂ ಜನರು ಗೆಲ್ಲಿಸಿದ್ದಾರೆ. ಇದು ಜನರಲ್ಲಿ ಮೋದಿ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಶಾ ಹೇಳಿದ್ದಾರೆ.