ಹುಮನಾಬಾದ: ತಾಲೂಕಿನ ಮಾಣಿಕನಗರ ಗ್ರಾಮ ಪಂಚಾಯತ್ ವ್ಯಾಪ್ತಿಯ 23 ಸರ್ವೇ ಸಂಖ್ಯೆ ಭೂಮಿಯನ್ನು ಪುರಸಭೆಗೆ ಹತ್ತಾಂತರಿಸಿರುವುದನ್ನು ವಿರೋಧಿಸಿ ಪಂಚಾಯತ್‌ನ ಎಲ್ಲಾ ಸದಸ್ಯರು ಒಂದಾಗಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಮಾಣಿಕನಗರ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರಮುಖ ಸರ್ವೆ ಸಂಖ್ಯೆಗಳು ಪಂಚಾಯತ್‌ನ ಮೂಲ ಆದಾಯವಾಗಿವೆ. ಪಂಚಾಯತ್ ನಡೆಸಲು ತೆರಿಗೆ ಬರುವ ಸರ್ವೇ ಸಂಖ್ಯೆಗಳ ಯಾವ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಹುಮನಾಬಾದ ಪುರಸಭೆಗೆ ನೀಡಲಾಗುತ್ತಿದೆ. ಈ ಕುರಿತು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ಯಾವುದೇ ಮಾಹಿತಿ ಇಲ್ಲದೆ ಅಕ್ರಮವಾಗಿ ವರ್ಗವಣೆ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ, ಸದಸ್ಯರ ಸಮಸ್ಯೆ ಆಲಿಸಿ, ಈ ಕುರಿತು ಸಮಗ್ರವಾಗಿ ಮಾಹಿತಿ ಪಡೆದು ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರು ಮಾತನಾಡಿ, ಮಾತಿನಲ್ಲಿ ಹೇಳುವ ಬದಲಿಗೆ ಲಿಖಿತ ಆಧಾರ ನೀಡಿ. ಪಂಚಾಯತ್ ಅಧಿಕಾರಿಗೆ ಯಾರು ಒತ್ತಡ ಹಾಕುತ್ತಿದ್ದಾರೆ. ಯಾವ ಕಾರಣಕ್ಕೆ ಎಲ್ಲರನ್ನು ಮುಚ್ಚಿಟ್ಟು ಈ ಕೆಲಸ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
Related Articles
ಯಾವುದೇ ಕಾರಣಕ್ಕೂ ಪಂಚಾಯತ್ ವ್ಯಾಪ್ತಿಯ ಒಂದು ಗುಂಟೆ ಭೂಮಿ ಕೂಡ ಪುರಸಭೆಗೆ ಹಸ್ತಾಂತರ ಆಗಬಾರದು. ಒಂದು ವೇಳೆ ವರ್ಗಾವಣೆ ಪ್ರಕ್ರಿಯೆ ಏನಾದರೂ ಆದರೆ ಸರ್ವ ಸದಸ್ಯರು ರಾಜೀನಾಮೆ ನೀಡುತ್ತೇವೆ ಎಂದು ಒಂದೇ ಧ್ವನಿಯಲ್ಲಿ ಸರ್ವ ಸದಸ್ಯರು ಹೇಳಿದರು.