ಬೆಂಗಳೂರು: ರಾಜ್ಯಪಾಲರು ಹಾಗೂ ಸರಕಾರದ ನಡುವಣ ಸಂಘರ್ಷ ಈಗ ಆಡಳಿತಾತ್ಮಕ ಸ್ವರೂಪಕ್ಕೆ ವಿಸ್ತರಣೆಗೊಂಡಿದೆ. ವಿಶ್ವವಿದ್ಯಾನಿಲಯ ಗಳಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಪ್ರಯತ್ನಕ್ಕೆ ಸರಕಾರ ಮುಂದಾಗಿದ್ದು, ಪಂಚಾಯತ್ ರಾಜ್ ವಿ.ವಿ.ಗೆ ರಾಜ್ಯಪಾಲರ ಬದಲು ಮುಖ್ಯ ಮಂತ್ರಿಯನ್ನೇ ಕುಲಾಧಿಪತಿಯನ್ನಾಗಿ ಮಾಡುವ ವಿವಾದಾತ್ಮಕ ನಿರ್ಣಯಕ್ಕೆ ಗುರುವಾರದ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ.
ಸಭೆ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಈ ವಿಷಯ ತಿಳಿಸಿದ್ದು, ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮಸೂದೆಗೆ ತಿದ್ದುಪಡಿ ತಂದು ಈ ಬದಲಾವಣೆ ಮಾಡಲಾಗುವುದು ಎಂದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಉಭಯ ಸದನ ಗಳಲ್ಲಿ ಈ ತಿದ್ದುಪಡಿ ಮಸೂದೆ ಯನ್ನು ಮಂಡಿಸಲಾಗುವುದು. ಗ್ರಾಮೀ ಣಾಭಿವೃದ್ಧಿ ವಿಶ್ವವಿದ್ಯಾ ನಿಲಯ ಹಾಗೂ ಇತರ ವಿ.ವಿ.ಗಳ ಕಾಯಿದೆಯ ಸ್ವರೂಪ ಬೇರೆ ಬೇರೆ ಇದೆ. ವಿ.ವಿ.ಯ ಕಾರ್ಯವೈಖರಿಯನ್ನು ಇನ್ನಷ್ಟು ಕ್ರಿಯಾಶೀಲವಾಗಿಸಲು ಹಾಗೂ ನಿರ್ಣಯವನ್ನು ಬೇಗ ತೆಗೆದುಕೊಳ್ಳು ವುದಕ್ಕಾಗಿ ಆಡಳಿತಾತ್ಮಕ ಅಧಿಕಾರ ಸರಕಾರದ ಬಳಿಯೇ ಇರುವುದು ಸೂಕ್ತ ಎಂದು ಭಾವಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿಯನ್ನು ಕುಲಪತಿ ಎಂದು ನಿರ್ಣಯಿಸಲಾಗಿದೆ ಎಂದರು.
ಸಂಘರ್ಷವೇ?
ರಾಜ್ಯಪಾಲರ ಜತೆಗಿನ ಸಂಘರ್ಷದ ಭಾಗವಾಗಿ ಅವರ ಅಧಿಕಾರ ಮೊಟಕುಗೊಳಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಪಾಟೀಲ್, ಗುಜರಾತ್ನಲ್ಲೂ ಕೆಲವು ವಿವಿಗಳಿಗೆ ಸಿಎಂ ಕುಲಪತಿಯಾಗಿ ದ್ದಾರೆ. ಇಲ್ಲಿ ಯಾವುದೇ ಸಂಘರ್ಷದ ಪ್ರಶ್ನೆ ಬರುವುದಿಲ್ಲ ಎಂದರು.
ವಿ.ವಿ.ಗಳಲ್ಲಿ ರಾಜ್ಯಪಾಲರ ಅಧಿಕಾರಕ್ಕೆ ಕಡಿತ ಹಾಕಲು ಆಡಳಿತಾರೂಢ ಕಾಂಗ್ರೆಸ್ ಸರಕಾರ ಮುಂದಾಗಿದ್ದರ ಬಗ್ಗೆ “ಉದಯವಾಣಿ’ಯಲ್ಲಿ ಈ ಹಿಂದೆ ವರದಿ ಪ್ರಕಟವಾಗಿತ್ತು.
ವಿ.ವಿ. ಕಾರ್ಯವೈಖರಿಯನ್ನು ಇನ್ನಷ್ಟು ಕ್ರಿಯಾಶೀಲವಾಗಿಸಲು ಆಡಳಿತಾತ್ಮಕ ಅಧಿಕಾರ ಸರಕಾರದ ಬಳಿಯೇ ಇರುವುದು ಸೂಕ್ತ. ಇಲ್ಲಿ ಸಂಘರ್ಷದ ಪ್ರಶ್ನೆ ಇಲ್ಲ.
– ಎಚ್.ಕೆ. ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ