ಮುದ್ದೇಬಿಹಾಳ: ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜ.21ರ ಶನಿವಾರ ನಡೆಯಬೇಕಿದ್ದ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ಸಿಂದಗಿ ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಅವರ ಹಠಾತ್ ನಿಧನ ಹಿನ್ನೆಲೆ ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ. ಸಿ.ಎಸ್.ಸೋಲಾಪೂರ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷವು ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಗೌರವ ಕೊಡುವಂತಹ ಪಕ್ಷವಾಗಿದೆ. ಇಂಥದ್ದರಲ್ಲಿ ಘೋಷಿತ ಅಬ್ಯರ್ಥಿ ಸಾವಿನ ಮೇಲೆ ರಥಯಾತ್ರೆ ನಡೆಸುವುದು ಸೂಕ್ತವಲ್ಲ. ಹೀಗಾಗಿ ಅವರ ಗೌರವಾರ್ಥ ಇಂದಿನ ರಥಯಾತ್ರೆ ಮುಂದೂಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸೂಚಿಸಿದ ಹಿನ್ನೆಲೆ ಈ ತೀರ್ಮಾನ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.
ಭಾನುವಾರ ಪೂರ್ವ ನಿಗದಿಯಂತೆ ಬಸರಕೋಡ ಮಾರ್ಗವಾಗಿ ಮುದ್ದೇಬಿಹಾಳಕ್ಕೆ ಆಗಮಿಸಿ ನಂತರ ಮಿಣಜಗಿ, ತಾಳಿಕೋಟೆ ಮೂಲಕ ಬಳವಾಟಕ್ಕೆ ಆಗಮಿಸಿ ಅಲ್ಲಿ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ನಡೆಸುವರು ಎಂದು ಅವರು ತಿಳಿಸಿದರು.