ಯೋಗರಾಜ್ ಭಟ್ ನಿರ್ದೇಶನದ “ಪಂಚತಂತ್ರ’ ಚಿತ್ರ ಇಂದು ತೆರೆಕಾಣುತ್ತಿದೆ. ಹೊಸ ನಾಯಕ- ನಾಯಕಿಯನ್ನಿಟ್ಟು ಕೊಂಡು ಭಟ್ಟರು ಈ ಚಿತ್ರ ಮಾಡಿದ್ದು, ಈಗಾಗಲೇ ಹಾಡುಗಳು ಹಿಟ್ ಆಗಿವೆ. ಆಮೆ ಹಾಗೂ ಮೊಲದ ಹಿನ್ನೆಲೆಯಲ್ಲಿ ಹಿರಿಯರ ಹಾಗೂ ಕಿರಿಯರ ನಡುವಿನ ಕಥೆಯನ್ನು ಹೇಳಲು ಹೊರಟಿದ್ದಾರೆ ಭಟ್ಟರು. ಈ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ನಿಮ್ಮ ನಿರ್ದೇಶನದ “ಪಂಚತಂತ್ರ’ ಸಿನಿಮಾ ನೋಡಲು ಪ್ರೇಕ್ಷಕರಿಗೆ ಐದು ಕಾರಣ ಕೊಡಿ ಎಂದರೆ ಭಟ್ಟರು ಈ ಮೇಲಿನ ಪಂಚ ಕಾರಣ ನೀಡುತ್ತಾರೆ. ಹೌದು, ಯೋಗರಾಜ್ ಭಟ್ ನಿರ್ದೇಶನದ “ಪಂಚತಂತ್ರ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ಭಟ್ಟರು ಮಾಡಿದ ಸಿನಿಮಾಗಳಿಗೆ ಹೋಲಿಸಿದರೆ ಸ್ವತಃ ಭಟ್ಟರಿಗೆ “ಪಂಚತಂತ್ರ’ ಹೊಸ ಅನುಭವ ಕೊಟ್ಟ ಸಿನಿಮಾ. ಹಾಗಾಗಿ, ಪ್ರೇಕ್ಷಕರಿಗೂ ಸಿನಿಮಾ ಹೊಸ ಅನುಭವ ಕಟ್ಟಿಕೊಡುತ್ತದೆ ಎಂಬ ವಿಶ್ವಾಸ ಅವರಿಗಿದೆ.
“ನನಗೆ ಸಂಪೂರ್ಣವಾಗಿ ಇದು ಹೊಸ ಬಗೆಯ ಸಿನಿಮಾ. ಈ ಕ್ಷಣದವರೆಗೂ ಕೆಲಸ ಮಾಡಿಸಿಕೊಳ್ಳುತ್ತಿದೆ. ಮಾನಸಿಕ ಕಲಹ, ಬ್ರೇಕಪ್‌ನ್ನು ಹೇಗೋ ಸುಲಭವಾಗಿ ಹ್ಯಾಂಡಲ್ ಮಾಡಿಬಿಡಬಹುದು. ಹೀರೋ ನೂರಾರು ಜನಕ್ಕೆ ಹೊಡೆಯೋದನ್ನೂ ಹೇಗೋ ತೆಗೆಯಬಹುದು. ಆದರೆ, ಆಮೆ ಮತ್ತು ಮೊಲ ಗ್ಲೋಬಲ್ ಕಂಟೆಂಟ್. ಯುವಕರು ಹಾಗೂ ವೃದ್ಧರು. ಎಲ್ಲಾ ಭಾಷೆಗೂ ಹೊಂದಿಕೆಯಾಗುವಂಥದ್ದು. ಅದನ್ನು ಕ್ಲೈಮ್ಯಾಕ್ಸ್‌ಗೆ ಅಳವಡಿಸೋದು ಕಷ್ಟದ ಕೆಲಸ. ವಯಸ್ಸಾದವರು ರಾಜಬೀದಿಯಲ್ಲಿ ನಡೆದರೆ, ಯುವಕರು ಶಾರ್ಟ್‌ಕಟ್ ಹುಡುಕುತ್ತಾರೆ … ಈ ತರಹದ ಸಣ್ಣ ಸಣ್ಣ ಅಂಶಗಳನ್ನು ಅಳವಡಿಸಿ ಈ ಸಿನಿಮ ಮಾಡಲಾಗಿದೆ. ಇದು ಎರಡು ಜನರೇಶನ್‌ನ ಕಥೆ ಎನ್ನಬಹುದು’ ಎಂದು ಚಿತ್ರದ ಬಗ್ಗೆ ಮಾತನಾಡುತ್ತಾರೆ ಯೋಗರಾಜ್ ಭಟ್.
ಚಿತ್ರದಲ್ಲಿ ಕಾರ್‌ರೇಸ್ ಕೂಡಾ ಪ್ರಮುಖ ಪಾತ್ರವಹಿಸುತ್ತದೆ. ಚಿತ್ರದಲ್ಲಿ ಸುಮಾರು 25 ನಿಮಿಷ ರೇಸ್ ಬರುತ್ತದೆ. ಭಟ್ಟರಿಗೆ ಅದನ್ನು ಚಿತ್ರೀಕರಿಸೋದು ಸವಾಲಿನ ಕೆಲಸವಾಗಿತ್ತಂತೆ. ಇದೇ ಕಾರಣದಿಂದ ಸಿನಿಮಾ ಚಿತ್ರೀಕರಣ ಕೂಡಾ ತಡವಾಯಿತಂತೆ. “ಚಿತ್ರದಲ್ಲಿ ರೇಸ್ ಇದೆ. ಅದನ್ನು ಇಂಟರ್‌ನ್ಯಾಶನಲ್ ಸ್ಟಾಂಡರ್ಡ್‌ನಲ್ಲಿ ತೆಗೆಯಬೇಕೆಂದು ಯೋಚಿಸಿದೆವು. ಆ ಚಿತ್ರಕ್ಕೆ ಎಂಟೆಂಟು ಕ್ಯಾಮರಾ ಬೇಕೆಂದು ತಿಳಿದುಕೊಳ್ಳಲು ನಮಗೆ ಮೂರು ದಿನ ಬೇಕಾಯಿತು. ಆ ನಂತರ ಇಂಟರ್‌ನ್ಯಾಶನಲ್ ರೇಸ್ ಟೀಂನ ಕರೆಸಿ, ಅವರಿಂದಲೇ ರೇಸ್ ಶೂಟಿಂಗ್ ಮಾಡಿಸಿದ್ದಾಯಿತು. ಕೇವಲ ರೇಸ್ ಚಿತ್ರೀಕರಣದ ಫೂಟೇಜ್ 5 ಗಂಟೆ ಬಂದಿದೆ. ಅದನ್ನು 25 ನಿಮಿಷಕ್ಕೆ ಇಳಿಸಬೇಕಾಯಿತು. ಇದರ ಎಡಿಟಿಂಗ್ ಕೂಡಾ ಕಷ್ಟ. ರೇಸ್‌ಗೆ ಬೇಕಾದ ಸೌಂಡ್ ಹಾಕೋದು, ಅದನ್ನು ಮ್ಯಾಚ್ ಮಾಡೋದು … ಹೀಗೆ ಎರಡೂರು ತಿಂಗಳು ಅದಕ್ಕೆ ಹೋಯಿತು’ ಎಂದು ಚಿತ್ರದ ರೇಸ್ ಅನುಭವವನನ್ನು ಹಂಚಿಕೊಂಡರು ಭಟ್ರಾ.
“ಪಂಚತಂತ್ರ’ ಚಿತ್ರದಲ್ಲಿ ನೀತಿಪಾಠ ಇದೆ. ಹಾಗಂತ ಬೋರ್ ಹೊಡೆಸಲ್ಲ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸ ಭಟ್ಟರಿಗಿದೆ. “ಚಿತ್ರದಲ್ಲಿ ತುಂಬಾ ಹ್ಯೂಮರ್ ಇದೆ. ಕಮರ್ಷಿಯಲ್ ಸಿನಿಮಾಗಳ ಮನರಂಜನಾತ್ಮಕ ಅಂಶಗಳಲ್ಲಿ “ಪಂಚತಂತ್ರ’ 10 ಹೆಜ್ಜೆ ಮುಂದಿದೆ’ ಎನ್ನುವ ಭಟ್ಟರು, ಚಿತ್ರದ ಹಾಡುಗಳು ಹಿಟ್ ಆಗಿರುವ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. “ನನ್ನ ಹಾಗೂ ಹರಿಕೃಷ್ಣ ದೋಸ್ತಿ ಚೆನ್ನಾಗಿದೆ. ಎಲ್ಲಿ ದೋಸ್ತಿ ಚೆನ್ನಾಗಿರುತ್ತೋ, ಅಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಚಿತ್ರದ “ಹೊಂಗೆ ಮರ’, “ಬೇಡ ಹೋಗು ಅಂದ್ಬುಟು’ ಸೇರಿದಂತೆ ಎಲ್ಲಾ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ’ ಎಂದು ಖುಷಿಯಿಂದ ಹೇಳುತ್ತಾರೆ.
ಚಿತ್ರದಲ್ಲಿ ವಿಹಾನ್, ಸೋನಾಲ್, ಅಕ್ಷರ, ರಂಗಾಯಣ ರಘು ಸೇರಿದಂತೆ ಅನೇಕರು ನಟಿಸಿದ್ದಾರೆ. ಹೊಸಬರನ್ನಿಟ್ಟುಕೊಂಡು ಹೊಸ ಪ್ರಯೋಗ ಮಾಡುವುದು ಸುಲಭ. ಅವರು ನಿಮ್ಮ ಕಲ್ಪನೆಗೆ ಸಾಥ್ ಕೊಡುತ್ತಾರೆ ಎನ್ನುವುದು ಭಟ್ಟರ ಮಾತು. ಇನ್ನು, ರಂಗಾಯಣ ರಘು ಅವರಿಗೆ ಈ ಚಿತ್ರದ ಮೂಲಕ ದೊಡ್ಡ ಮೆಚ್ಚುಗೆ ಸಿಗುತ್ತದೆ ಎನ್ನಲು ಭಟ್ಟರು ಮರೆಯುವುದಿಲ್ಲ.
ಪಂಚತಂತ್ರಕ್ಕೆ ಪಂಚ ಕಾರಣ
1 ಇದು ಎಲ್ಲರ ಗಮನ ಸೆಳೆಯುವ ಸಾರ್ವಜನಿಕ ಆಸ್ತಿ.
2 ರೇಸ್, ಸ್ಫೋರ್ಟ್ಸ್ ಹಿನ್ನೆಲೆಯ ಸಿನಿಮಾ ಕನ್ನಡಕ್ಕೆ ಹೊಸದು. ಇದು
ಆ ತರಹದ ರೇಸ್ ಸಿನಿಮಾ.
3 ಆಮೆ ಮತ್ತು ಮೊಲದ ಹಿನ್ನೆಲೆಯಲ್ಲಿ ವಯೋ ವೃದ್ಧರು ಹಾಗೂ ಯುವಕರ ಕಥೆ ಇದೆ.
4 ಸಿನಿಮಾ ನೋಡಿ ಹೊರಬಂದಾಗಲೂ ಹೇಳಿರುವ ವಿಷಯ ತುಂಬಾ ಕಾಡುತ್ತದೆ.
5 ಹೊಸ ಕಲಾವಿದರನ್ನು ಹುಟ್ಟು ಹಾಕೋದು ಪ್ರೇಕ್ಷಕರ ಕೆಲಸ. ಆಗ ಅವರು ಜನಕರಾಗತ್ತಾರೆ. ಹೊಸಬರೇ ನಮ್ಮ ಭವಿಷ್ಯ. ಭವಿಷ್ಯ ಗಟ್ಟಿಯಾಗಿರಲು ಹೊಸಬರನ್ನು ಬೆಳೆಸಬೇಕು.
ರವಿಪ್ರಕಾಶ್ ರೈ