Advertisement
ಪಂಚಮ ಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸುಮಾರು 700 ಕಿ. ಮೀ. ಪಾದಯಾತ್ರೆ ಹಾಗೂ 23 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ, ರಾಜ್ಯ ಬಿಜೆಪಿ ಸರಕಾರಕ್ಕೆ ಪಂಚಮಸಾಲಿ ಸಮುದಾಯದ ತನ್ನ ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶನ ಮಾಡಿತ್ತು. ಅಲ್ಲದೆ, ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ಹಿಂದಿನ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದ ಪಂಚಮಸಾಲಿ ಸಮುದಾ ಯದ ನಾಯಕರಾಗಿರುವ ಬಸನ ಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬಂದಿದ್ದವು.
Related Articles
Advertisement
ಒಂದು ವೇಳೆ ಸಂಪುಟದಲ್ಲಿ ಪಂಚಮಸಾಲಿ ಸಮುದಾಯದ ನಾಯಕರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ, ಬಸನಗೌಡ ಪಾಟೀಲ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂಬ ಬೇಡಿಕೆಯನ್ನಿಡಲು ಸಮುದಾಯದ ಮುಖಂಡರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊನೆಕ್ಷಣದ ಬದಲಾವಣೆಗೆ ಅಸಮಾಧಾನ :
ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹೈಕಮಾಂಡ್ ನಾಯಕರಿಂದ ಅಂತಿಮವಾಗಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಹೆಸರು ಮುಂಚೂಣಿಯಲ್ಲಿತ್ತು ಎಂದು ಹೇಳಲಾಗಿದ್ದು, ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಆಗಮಿಸಿದ್ದ ಕೇಂದ್ರದ ಬಿಜೆಪಿ ವೀಕ್ಷಕರು ರಾಜ್ಯಕ್ಕೆ ಆಗಮಿಸಿದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿದು ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂಬ ಅನುಮಾನ ಪಂಚಮಸಾಲಿ ಸಮುದಾಯದ ನಾಯಕರಲ್ಲಿ ಮೂಡಿದೆ ಎನ್ನಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನವನ್ನೂ ಹೊರ ಹಾಕುತ್ತಿದ್ದಾರೆ.
ಪಂಚಮಸಾಲಿ ಸಮುದಾಯ ಸಿಎಂ, ಡಿಸಿಎಂ, ಯಾವುದೇ ಹುದ್ದೆಗೆ ಆಸೆ ಪಟ್ಟಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಪಂಚಮಸಾಲಿ ಸಮುದಾಯದ ನಾಯಕರನ್ನು ಪರಿಗಣಿಸಿ ಯಾರದೋ ಒತ್ತಡಕ್ಕೆ ಮಣಿದು ಕೈ ಬಿಡುವ ಮೂಲಕ ನಮ್ಮ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ. ಅದನ್ನು ಬಿಜೆಪಿ ಹೈಕಮಾಂಡ್ ಸರಿಪಡಿಸಲಿ. -ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪೀಠಾಧ್ಯಕ್ಷರು, ಪಂಚಮಸಾಲಿ ಪೀಠ, ಕೂಡಲಸಂಗಮ.
– ಶಂಕರ ಪಾಗೋಜಿ