Advertisement

ಬೆಳಗಾವಿ: ಪಂಚಮಸಾಲಿ ಸಮಾಜದ ಜನರ ಮೇಲೆ ದಬ್ಬಾಳಿಕೆ, ಡಿ.12 ರಂದು ಹೆದ್ದಾರಿ ತಡೆದು ಪ್ರತಿಭಟನೆ

08:39 PM Dec 10, 2024 | Team Udayavani |

ಬೆಳಗಾವಿ: ಪಂಚಮಸಾಲಿ ಸಮಾಜದ ಜನರ ಮೇಲೆ ಪೊಲೀಸರ ಮೂಲಕ ದಬ್ಬಾಳಿಕೆ ನಡೆಸಿದ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ಡಿಸೆಂಬರ್ 12 ರಂದು ರಾಜ್ಯಾದ್ಯಂತ ಹಳ್ಳಿಗಳು, ತಾಲೂಕು ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Advertisement

ರಸ್ತೆ ಬಂದ್ ಮಾಡುವ ಮೂಲಕ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರಕಾರದಿಂದ ಪಂಚಮಶಾಲಿ ಲಿಂಗಾಯತರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎನ್ನುವುದಾದರೆ ಅದನ್ನಾದರೂ ಸ್ಪಷ್ಟಪಡಿಸಿ.

ಮುಂದೆ ನಮಗೆ ಬೇಕಾದ ಸರಕಾರವನ್ನು ಆಯ್ಕೆ ಮಾಡಿಕೊಂಡು ನಮ್ಮ ಮೀಸಲಾತಿ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.

ನಮ್ಮ ಪ್ರತಿಭಟನೆ ಹತ್ತಿಕ್ಕಲು ನೀವು ಇಷ್ಟೆಲ್ಲ ದಬ್ಬಾಳಿಕೆ ಮಾಡಿದರೂ ಅದಕ್ಕೆ ಪ್ರತ್ಯುತ್ತರ ನೀಡಿದ್ದೇವೆ. ಅದನ್ನು ಸಹಿಸಲಾಗದ ನೀವು ಎಡಿಜಿಪಿ ಹಾಗು ಪೊಲೀಸ್ ಕಮಿಷನರ್ ಸೇರಿಕೊಂಡು ನಮ್ಮ ಸಮುದಾಯದ ರೈತರು, ವಕೀಲರು, ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿ ಹಲ್ಲೆ ಮಾಡಲಾಗಿದೆ. ಕೆಲವರಿಗೆ ಕೈ ಕಾಲು ಸೇರಿದಂತೆ ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು .

Advertisement

ಸ್ವತಂತ್ರ ಬಂದಾಗಿನಿಂದ ಲಿಂಗಾಯತರ ಮೇಲೆ ಯಾರೂ ಕೈಮಾಡಿರಲಿಲ್ಲ ಆದರೆ ಕಾಂಗ್ರೆಸ್ ಸರಕಾರ ಲಿಂಗಾಯತರ ಮೇಲೆ ಮಾಡಿರುವ ಹಲ್ಲೆ ನೋಡಿದರೆ ಬಹಳ ನೋವಾಗುತ್ತಿದೆ. ಪೊಲೀಸರ ದಬ್ಬಾಳಿಕೆ ನೋಡಿದರೆ ಗೋಲಿಬಾರ್ ಮಾಡಲು ಹಿಂಜರಿಯದ ಪರಿಸ್ಥಿತಿ ಎದ್ದು ಕಾಣುತ್ತಿತ್ತು. ಅಷ್ಟರ ಮಟ್ಟಿಗೆ ನಮ್ಮ ಪ್ರತಿಭಟನೆ ಹತ್ತಿಕುವ ಪ್ರಯತ್ನ ನಡೆಯಿತು. ಆದರೆ ನೀವು ಏನೇ ಮಾಡಿದರೂ ನಮ್ಮ ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಸರಕಾರ ಪೊಲೀಸ್ ಇಲಾಖೆ ಮೂಲಕ ನಮ್ಮ ಪ್ರತಿಭಟನೆ ಹತ್ತಿಕುವ ಹುನ್ನಾರ ಮಾಡಿದೆ. ಬೆಳಗ್ಗೆಯಿಂದಲೇ ನಮ್ಮ ವಾಹನಗಳನ್ನು ತಡೆದಿದ್ದರಿಂದ ಇನ್ನೂ ಸಾವಿರಾರು ಜನರು ಬರಲು ಸಾಧ್ಯವಾಗಲಿಲ್ಲ. ಆದರೂ ನಾವು ಸಾವಿರಾರು ಜನರು ಸೇರಿ ಶಾಂತಿಯುತವಾದ ಪ್ರತಿಭಟನೆ ನಡೆಸಿದ್ದೆವು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಪ್ರತಿಭಟನೆ ಸ್ಥಳಕ್ಕೆ ಬಂದು ಮೀಸಲಾತಿ ನೀಡುವುದಾಗಿ ಘೋಷಿಸುತ್ತಾರೆ ಎಂದು ಭರವಸೆ ಇಟ್ಟಿದ್ದೆವು. ಆದರೆ ಮುಖ್ಯಮಂತ್ರಿಗಳು ಬರದ ಕಾರಣ ಶಾಂತಿಯುತವಾಗಿ ಸುವರ್ಣ ವಿಧಾನಸೌಧದ ಬಳಿ ತೆರಳಲು ಮುಂದಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹತಾಶಗೊಂಡು ಈ ಹುನ್ನಾರ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪ.

ಈಗಾಗಲೇ ನಮ್ಮ ಸಮುದಾಯದ ಬಡ ಜನರನ್ನು ಬಂಧಿಸಲಾಗಿದೆ. ಕೂಡಲೆ ಅವರನ್ನು ಬಿಡುಗಡೆ ಗೊಳಿಸಬೇಕು. ಗಾಯಾಳುಗಳಿಗೆ ಸಮುದಾಯದ ವತಿಯಿಂದ ಸಾಧ್ಯವಾದಷ್ಟು ಚಿಕಿತ್ಸೆ ವೆಚ್ಚವನ್ನು ಬರಿಸಲಾಗುವುದು. ಇದಕ್ಕೆ ಕಾರಣವಾದ ಎಡಿಜಿಪಿ ಹಾಗೂ ಕಮಿಷನರ್ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯ.

ಇದನ್ನೂ ಓದಿ: Udupi: ಮೂವರು ಮಕ್ಕಳೊಂದಿಗೆ ದೊಡ್ಡಣಗುಡ್ಡೆಯ ಮಹಿಳೆ ನಾಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next