ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ನೀಡುವ ವಿಚಾರದಲ್ಲಿ ಸಂಪೂರ್ಣ ಬೆಂಬಲ ಕೊಟ್ಟ ವ್ಯಕ್ತಿ ನಾನು. ಹೀಗಿರುವಾಗ ನಾನು ಇದಕ್ಕೆ ವಿರೋಧ ಮಾಡುವ ಪ್ರಶ್ನೆಯೇ ಬರುವದಿಲ್ಲ. ಚುನಾವಣೆಯ ವೇಳೆ ಇಂತಹ ಆಪಪ್ರಚಾರಗಳು ನಡೆಯುತ್ತಲೇ ಇರುತ್ತವೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಜಗದೀಶ ಶೆಟ್ಟರ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಎಲ್ಲರೂ ಇದಕ್ಕೆ ಬೆಂಬಲ ಸೂಚಿಸಿದ್ದೆವು. ಯಾವತ್ತೂ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಚಾರಧಾರೆಗಳ ಮೇಲೆ ನಡೆಯುವ ಚುನಾವಣೆ. ಇಲ್ಲಿ ರಾಷ್ಟ್ರಮಟ್ಟದ ವಿಚಾರಗಳು ಚರ್ಚೆಯಾಗಬೇಕು. ಆದರೆ ಕಾಂಗ್ರೆಸ್‌ನವರಿಗೆ ಯಾವುದೇ ವಿಷಯ ಇಲ್ಲ. ಹೀಗಾಗಿ ಅವರು ಸಣ್ಣಪುಟ್ಟ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ನಿರಾಧಾರ ಆರೋಪ ಮಾಡುತ್ತಾರೆ. ಅವರ ಟೀಕೆ ಟಿಪ್ಪಣಿಗಳಿಗೆ ಪ್ರತಿಕ್ರಿಯೆ ಕೊಡುವದಿಲ್ಲ. ಅವರ ಹಾಗೆ ಕೆಳಹಂತಕ್ಕೆ ಹೋಗಿ ಟೀಕೆ ಮಾಡುವ ವ್ಯಕ್ತಿ ನಾನಲ್ಲ ಎಂದು ತಿರುಗೇಟು ನೀಡಿದರು.
ಪಕ್ಷದ ವರಿಷ್ಠರ ನಿರ್ಧಾರದಂತೆ ನಾನು ಬೆಳಗಾವಿಯಿಂದ ಸ್ಪರ್ಧೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಎಲ್ಲರ ಸಹಕಾರ ಸಿಗುತ್ತಿದೆ. ಯಾರಲ್ಲೂ ಅಸಮಾಧಾನ ಇಲ್ಲ. ಜಾರಕಿಹೊಳಿ ಸಹೋದರರು ಪ್ರಚಾರಕ್ಕೆ ಬಂದಿದ್ದಾರೆ. ಗೋಕಾಕ, ಅರಭಾವಿ, ಸವದತ್ತಿ ಮೊದಲಾದ ಕಡೆಗಳಲ್ಲಿ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗಿದೆ. ಎಲ್ಲರೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹರಸಿದ್ದಾರೆ ಎಂದು ಜಗದೀಶ ಶೆಟ್ಟರ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಬಗ್ಗೆ ದಾಖಲೆ ಕೊಡುತ್ತಿದ್ದೇವೆ. ನಮ್ಮ ಶಾಸಕರು, ಸಂಸದರು ಏನು ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ವಿನಾಕಾರಣ ರಾಜಕೀಯ ಮಾಡುವದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.