Advertisement

ಮಹಾರಾಷ್ಟ್ರದ ಕನೇರಿ ಮಠದಲ್ಲಿ ಪಂಚಮಹಾಭೂತ ಉತ್ಸವ

01:18 PM Sep 06, 2022 | Team Udayavani |

ಹುಬ್ಬಳ್ಳಿ: ಇಡೀ ಜಗತ್ತು ಪಂಚಭೂತಗಳ ಮೇಲೆ ನಿಂತಿದ್ದು, ಅದರಿಂದಲೇ ಬದುಕುತ್ತಿದೆ. ಆದರೆ, ಮನುಷ್ಯನ ದುರಾಸೆ, ಆಕ್ರಮಣ ನೀತಿಯಿಂದಾಗಿ ಪಂಚಭೂತಗಳು ಕಲುಷಿತಗೊಂಡಿವೆ, ವಿನಾಶದತ್ತ ಹೆಜ್ಜೆ ಹಾಕುವ ಆತಂಕಕ್ಕೆ ಸಿಲುಕಿವೆ. ಪಂಚಭೂತಗಳ ಸಂರಕ್ಷಣೆ ಜವಾಬ್ದಾರಿ-ಕರ್ತವ್ಯದ ಅರಿವು, ಸುಂದರ ಭವಿಷ್ಯ, ಸುಸ್ಥಿರ ಬದುಕಿನ ಜಾಗೃತಿ ಹಾಗೂ ಮನನಕ್ಕೆ ಮಹತ್ವದ ಯತ್ನವೊಂದಕ್ಕೆ ಮಹಾರಾಷ್ಟ್ರದ ಕನೇರಿಮಠ ಮುನ್ನುಡಿ ಬರೆಯುತ್ತಿದ್ದು, ದೇಶದಲ್ಲೇ ಮೊದಲೆನ್ನುವ “ಪಂಚಮಹಾಭೂತ ಉತ್ಸವ’ಕ್ಕೆ ಮುಂದಡಿ ಇರಿಸಿದೆ.

Advertisement

ಭಾರತೀಯ ಸಂಸ್ಕೃತಿ ಉತ್ಸವ, ರಾಷ್ಟ್ರೀಯ ಕರಕುಶಲ ಕರ್ಮಿಗಳ ಉತ್ಸವ ಅರ್ಥಪೂರ್ಣ ಹಾಗೂ ಪರಿಣಾಮ ಕಾರಿ ಯಶಸ್ವಿಯ ನಂತರ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠ ಇದೀಗ ಮತ್ತೂಂದು ಉತ್ಸವದ ಮೂಲಕ ಮಹ ತ್ವದ ಸಂದೇಶಕ್ಕೆ ಮುಂದಾಗಿದೆ. ಮುಂದಿನ ವರ್ಷದ ಫೆಬ್ರವರಿ ಎರಡನೇ ವಾರದಲ್ಲಿ ಪಂಚಮಹಾಭೂತ ಉತ್ಸವ ಆಯೋಜಿಸಲು ನಿರ್ಧರಿಸಿದ್ದು, ಉತ್ಸವದಲ್ಲಿ ಸುಮಾರು 40-45 ದೇಶಗಳ ರಾಯಭಾರಿಗಳು, ದೇಶದ ಸುಮಾರು 600ಕ್ಕೂ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆಯಿದೆ.

ಸ್ವಾರ್ಥ, ಲಾಭ, ಪ್ರತಿಷ್ಠೆ, ಸಂಪತ್ತುಗಳಿಕೆ ಬಿಸಿಲ್ಗುದುರೆ ಬೆನ್ನೇರಿರುವ ಮನುಷ್ಯ ನಿಸರ್ಗವನ್ನು ಕಡೆಗಣಿಸಿದ್ದಾನೆ ಇಲ್ಲವೆ ಅದರ ಮೇಲೆ ನಿರಂತರ ದೌರ್ಜನ್ಯಕ್ಕೆ ಮುಂದಾಗಿ ದ್ದಾನೆ. ಅತಿವೃಷ್ಟಿ, ಬರ, ಅಕಾಲಿಕ ಮಳೆ, ಬಿರುಬಿಸಿಲು ಇನ್ನಿತರ ಪ್ರಕೃತಿ ವಿಕೋಪಗಳ ಫಲಗಳನ್ನು ಉಣ್ಣುವಂತಾ ಗಿದ್ದು, ಭವಿಷ್ಯದಲ್ಲಿ ಇಂತಹ ಗಂಡಾಂತರ ಹೆಚ್ಚಳ ತಡೆಯುವ, ಉತ್ತಮ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ, ಯತ್ನ, ಅನುಷ್ಠಾನ, ಪ್ರದರ್ಶನದಂತಂಹ ಕಾಯಕದಲ್ಲಿ ತೊಡಗಿರುವ ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪಂಚಮಹಾಭೂತ ಉತ್ಸವಕ್ಕೆ ನೀಲನಕ್ಷೆ ರೂಪುಗೊಳ್ಳುತ್ತಿದೆ.

ಐದು ತತ್ವಗಳಡಿ ಉತ್ಸವ: ಪಂಚಮಹಾಭೂತ ಉತ್ಸವವನ್ನು ಪ್ರಮುಖವಾಗಿ ಐದು ತತ್ವಗಳಡಿ ಕೈಗೊಳ್ಳಲಾಗುತ್ತಿದ್ದು, ಪ್ರತಿಯೊಂದು ತತ್ವಕ್ಕೂ ಪ್ರತ್ಯೇಕ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುತ್ತಿದೆ. ಭೂಮಿ, ನೀರು, ವಾಯು, ಅಗ್ನಿ ಹಾಗೂ ಬಾಹ್ಯಾಕಾಶದ ಸಂರಕ್ಷಣೆ ಜಾಗೃತಿಯ ಮಹದುದ್ದೇಶವನ್ನು ಉತ್ಸವ ಹೊಂದಿದೆ.

ಗಿಡ-ಮರ, ಬೆಟ್ಟ, ನದಿ, ಹಳ್ಳ-ಕೊಳ್ಳಗಳು, ಜೀವ ಸಂಕುಲಕ್ಕೆ ನೆಲೆಯಾದ ಭೂಮಿ ಇಂದು ಹಲವು ರೂಪ ದಲ್ಲಿ ಕಲುಷಿತಗೊಳ್ಳುತ್ತಿದೆ. ಮನುಷ್ಯನ ಅತಿಯಾಸೆಗೆ ಸಿಲುಕಿ ನಲುಗುವಂತಾಗಿದೆ. ಅತಿಯಾದ ಕ್ರಿಮಿನಾಶ, ರಸಗೊಬ್ಬರ, ಮಿತಿಮೀರಿದ ನೀರು ಬಳಕೆಯಿಂದ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರ ಸುಧಾರಣೆ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿಯೇ ಉತ್ಸವದಲ್ಲಿ ಮಣ್ಣಿನ ಪ್ರಕಾರಗಳು, ಬಳಕೆ, ಮಣ್ಣಿನ ಇಂದಿನ ಸ್ಥಿತಿ, ಅದರಿಂದಾಗುವ ದುಷ್ಪರಿಣಾಮ, ಮಣ್ಣು ಸುಧಾರಣೆಗೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳು ನಮ್ಮ ಜವಾಬ್ದಾರಿ ಏನೆಂಬುದರ ಮನವರಿಕೆ ಮಾಡುವ ಉದ್ದೇಶದೊಂದಿಗೆ ಸುಮಾರು 4 ಎಕರೆ ಜಮೀನಿನಲ್ಲಿ ಗ್ಯಾಲರಿ ಮಾಡಲಾಗುತ್ತಿದೆ.

Advertisement

ಜಲ ಜಾಗೃತಿ: ನೀರಿಲ್ಲದೆ ಬದುಕು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಭೂಮಂಡಲದಲ್ಲಿ ಮನುಷ್ಯ ಬಳಕೆಗೆಂದು ಇರುವುದು ಶೇ.4ರಷ್ಟು ಮಾತ್ರ ನೀರು. ಅದರಲ್ಲಿ ಶೇ.2 ಅಂತರ್ಜಲ ರೂಪದಲ್ಲಿದ್ದರೆ, ಶೇ.1 ನೀರು ಕೆರೆ-ಕಟ್ಟೆ ಗಳಲ್ಲಿ ಇದೆ. ವಿವಿಧ ರೂಪದಲ್ಲಿ ನೀರು ಕಲುಷಿತವಾಗು ತ್ತಿದೆ. ನೀರಿನ ದುರ್ಬಳಕೆ ಹೆಚ್ಚುತ್ತಿದೆ. ಜಲಚರಪ್ರಾಣಿ ಗಳಿಗೆ ಕಂಟಕ ತಂದೊಡುತ್ತಿದೆ. ಅದೇಷ್ಟೋ ಕಡೆ ನೀರು ಮಾಯವಾಗುತ್ತಿದೆ. ಹಳ್ಳ-ನದಿಗಳು ಬತ್ತುತ್ತಿವೆ. ಕೆಲವೊಂದು ನದಿಗಳು ಬತ್ತಿದ ಮಾಹಿತಿಯನ್ನು ಇತಿಹಾಸದ ಪುಟಗಳು ಹೇಳುತ್ತಿವೆ. ನೀರಿನ ಮಹತ್ವ, ಜಲಸಂರಕ್ಷಣೆ ಅನಿವಾರ್ಯತೆ ಕುರಿತ ಮಾಹಿತಿ ಹಾಗೂ ಜಾಗೃತಿಗೆ ಸುಮಾರು ಒಂದು ಎಕರೆ ಜಾಗದಲ್ಲಿ ಪ್ರದರ್ಶನ-ಪ್ರಾತ್ಯೆಕ್ಷಿಕ ಉತ್ಸವದಲ್ಲಿ ಕಾಣಸಿಗಲಿದೆ.

ಪ್ರಾಣವಾಯು ಸಂರಕ್ಷಣೆ: ಕೈಗಾರಿಕೆಗಳಿಂದ ಹೊರ ಸೂಸುವ ಹೊಗೆ, ಯಂತ್ರಗಳು, ಹವಾ ನಿಯಂತ್ರಣ ವ್ಯವಸ್ಥೆ ಇನ್ನಿತರ ಮನುಷ್ಯನ ದಬ್ಟಾಳಿಕೆಗೆ ಸಿಲುಕಿ ಗಾಳಿ ಕಲುಷಿತಗೊಂಡಿದೆ. ಆಕ್ಸಿಜನ್‌ ಖರೀದಿಸಿ ಮನುಷ್ಯರು ಬದುಕುವಂತಹ ಸ್ಥಿತಿ ಬಂದೊದಗಿದೆ. ಗಾಳಿಯನ್ನು ಶುದ್ಧೀರಿಸುವ ಅನಿವಾರ್ಯತೆ, ಪ್ರಾಣ ವಾಯು ಸಂರಕ್ಷಣೆಗೆ ನಮ್ಮೆಲ್ಲರ ಹೊಣೆ ಏನೆಂಬುದರ ಕುರಿತಾಗಿ ಗ್ಯಾಲರಿಯಲ್ಲಿ ಮನವರಿಕೆ ಮಾಡಿಕೊಡಲಾಗುತ್ತದೆ.

ಅದೇ ರೀತಿ ಅಗ್ನಿ (ಊರ್ಜ) ನೀರು, ಸೋಲಾರ, ಗಾಳಿ, ಕಲ್ಲಿದ್ದಲು ಹಾಗೂ ಯುರೇನಿಯಂನಿಂದ ಇಂಧನ ತಯಾರಾಗುತ್ತಿದೆ. ಇದರ ಸೋರಿಕೆ ಜತೆಗೆ ನಾವು ಯಾವ ಯಾವ ರೂಪದಲ್ಲಿ ಇದನ್ನು ಪೋಲು ಇಲ್ಲವೇ ಹಾಳು ಮಾಡುತ್ತಿದ್ದೇವೆ. ಅದರ ದುರ್ಬಳಕೆ ಹೇಗಾಗುತ್ತಿದೆ ಎಂಬುದರ ಮಾಹಿತಿ ಜತೆಗೆ ಇದರ ಸುಧಾರಣೆ, ಸದ್ಬಳಕೆ ಹೇಗೆ ಎಂಬ ಮನವರಿಕೆ ಗ್ಯಾಲರಿ ಉತ್ಸವದಲ್ಲಿ ಇರಲಿದೆ.

ಬಾಹ್ಯಾಕಾಶ ಶುದ್ಧತೆ: ಇನ್ನು ಬಾಹ್ಯಾಕಾಶದಲ್ಲಿ ಮಾನ ವನಿರ್ಮಿತ ಉಪಗ್ರಹಗಳು ವಿವಿಧ ರೀತಿಯ ತ್ಯಾಜ್ಯದ ಮೂಲಕ ಬಾಹ್ಯಾಕಾಶವನ್ನು ಕಲುಷಿತಗೊಳಿಸುತ್ತಿವೆ. ಇದರ ಪರಿಣಾಮ ಬ್ಲಾಕ್‌ಹೋಲ್‌ ಸೃಷ್ಟಿಯಿಂದ ಯಾವ ದೇಶದ ಮೇಲೆ ಯಾವ ಪರಿಣಾಮ-ದುಷ್ಪರಿಣಾಮ ಸೃಷ್ಟಿಸತೊಡಗಿದೆ. ಭವಿಷ್ಯದಲ್ಲಿ ಇದರಿಂದ ತಂದೊಡ್ಡುವ ಗಂಡಾಂತರಗಳು ಏನು, ಮುಂಜಾಗ್ರತಾ ಕ್ರಮವಾಗಿ ನಾವೇನು ಜಾಗೃತಿ ವಹಿಸಬೇಕಾಗಿದೆ ಎಂಬುದರ ಕುರಿತು ಗ್ಯಾಲರಿ ಮಾಹಿತಿ ನೀಡಲಿದೆ. ಒಟ್ಟಾರೆಯಾಗಿ ಪಂಚಮಹಾಭೂತ ಉತ್ಸವಕ್ಕೆ ಸುಮಾರು 20 ಎಕರೆ ಪ್ರದೇಶದಲ್ಲಿ ವೇದಿಕೆಯನ್ನು ರೂಪಿಸಲಾಗುತ್ತದೆ.

ದೇಸಿ ಪ್ರಾಣಿ-ಕಣ್ಮರೆ ಪರಿಕರಗಳ ಪ್ರದರ್ಶನ: ಪಂಚ ಮಹಾಭೂತ ಉತ್ಸವದಲ್ಲಿ ಐದು ತತ್ವಗಳ ಜತೆಗೆ ದೇಸಿ ಪ್ರಾಣಿ-ಪಕ್ಷಿಗಳು, ಕಣ್ಮರೆಯಾಗುತ್ತಿರುವ ಪರಿಕರಗಳ ಬಗ್ಗೆಯೂ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ವಿದೇಶ ಮೋಹಕ್ಕೆ ಸಿಲುಕಿ ದೇಸಿ ಸಾಕು ಪ್ರಾಣಿಗಳ ಸಂತತಿಗೂ ಕುತ್ತುಂಟಾಗುತ್ತಿದೆ. ಮನುಷ್ಯ ತನ್ನ ಸ್ವಾರ್ಥ ಕೇಂದ್ರೀತ ವ್ಯವಸ್ಥೆ ಸೃಷ್ಟಿಸುತ್ತಿದ್ದಾನೆ. ವಿದೇಶಿ ನಾಯಿ, ಬೆಕ್ಕು ಇನ್ನಿತರ ಪ್ರಾಣಿಗಳನ್ನು ಸಾಕುವ ಮೂಲಕ ದೇಸಿಯ ಸಾಕು ಪ್ರಾಣಿಗಳನ್ನು ಕಡೆಗಣಿಸಲಾಗುತ್ತಿದೆ. ವಿದೇಶ ಪ್ರಾಣಿ ಗಳನ್ನು ಸಾಕುವುದು ಪ್ರತಿಷ್ಠೆಯ ಸಂಕೇತ ಎಂದೇ ಭಾವಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ದೇಸಿ ಸಾಕು ಪ್ರಾಣಿಗಳ ಪ್ರದರ್ಶನ ಉತ್ಸವದಲ್ಲಿ ಕೈಗೊಳ್ಳಲಾಗುತ್ತಿದೆ.

ಬೆಕ್ಕು, ನಾಯಿ, ಆಡು, ಕುರಿ, ಕತ್ತೆ, ಕುದುರೆ ಇನ್ನಿತರ ದೇಸಿ ಸಾಕು ಪ್ರಾಣಿಗಳ ಪ್ರದರ್ಶನ ನಡೆಯಲಿದೆ. ಜತೆಗೆ 40-50 ಜಾತಿಯ ಚಿಟ್ಟೆಗಳ ತೋಟ ಉತ್ಸವದಲ್ಲಿ ಕಾಣ ಸಿಗಲಿದೆ. ಜತೆಗೆ ರೇಷ್ಮೆ, ಅಜೋಲಾ, ಜೇನು ಸಾಕಾಣಿಕೆ, ಮಷ್ರುಮ್‌ಗಳ ಪ್ರದರ್ಶನ ನಡೆಯಲಿದೆ. ಅದೇ ರೀತಿ ಕೃಷಿ ಉತ್ಪನ್ನಗಳು, ಧಾನ್ಯಗಳು, ಹಣ್ಣುಗಳು, ತರಕಾರಿ, ಕೊಯ್ಲು ನಂತರ ಕೃಷಿ ಉತ್ಪನ್ನಗಳು ಹಾಗೂ ಅವುಗಳ ಮೌಲ್ಯವರ್ಧನೆ, ಒಂದು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿದ ರೈತರ ಕೃಷಿಗೆ ಸಹಕಾರಿಯಾಗುವ ಸಣ್ಣ, ಸಣ್ಣ ಯಂತ್ರೋಪಕರಣ, ಸಲಕರಣೆಗಳು, ದೇಸಿ ಬೀಜ (ಜವಾರಿ)ಗಳು ಪ್ರದರ್ಶನದಲ್ಲಿರಿಸಲಾಗುತ್ತದೆ.

25-30 ಲಕ್ಷ ಜನ ಭಾಗಿ: ಕನೇರಿಯಲ್ಲಿ 2015ರಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಅಂದಾಜು 18 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ಮೂಲಕ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಹೊಸದೊಂದು ಭಾಷ್ಯ ಬರೆದಿತ್ತು. ಅಷ್ಟೇ ಅಚ್ಚುಕಟ್ಟು, ಶಿಸ್ತುಬದ್ಧ ಸೌಲಭ್ಯ, ನಿರ್ವಹಣೆ ತೋರಲಾಗಿತ್ತು. ಕನೇರಿಮಠ ಫೆಬ್ರವರಿಯಲ್ಲಿ ಆಯೋಜಿಸಲಿರುವ ಏಳು ದಿನಗಳ ಪಂಚಮಹಾಭೂತ ಉತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಯ ಅಂದಾಜು 25-30 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ದೇಶದ 600 ಜಿಲ್ಲೆಗಳಿಂದ 10 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಸುಮಾರು 40-45 ದೇಶಗಳ ರಾಯಭಾರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು. ಕೇಂದ್ರ ಸರ್ಕಾರ, ವಿವಿಧ ರಾಜ್ಯಗಳ ಸರ್ಕಾರಗಳ ಜನ ಪ್ರತಿನಿಧಿಗಳು, ವಿಜ್ಞಾನಿಗಳು, ತಜ್ಞರು, ಉದ್ಯಮಿಗಳು, ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

10 ರಾಜ್ಯಗಳ ಆಹಾರ ಪದ್ಧತಿ ರುಚಿ, ಮರ-ಗಿಡಗಳ ಆತ್ಮ ಚರಿತ್ರೆ

ಪಂಚಮಹಾಭೂತ ಉತ್ಸವದಲ್ಲಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಸೇರಿದಂತೆ ಕನಿಷ್ಟ 10 ರಾಜ್ಯಗಳ ಆಹಾರ ಪದ್ಧತಿಯ ರುಚಿ ಉಣಬಡಿಸುವ ಮಳಿಗೆಗಳನ್ನು ಹಾಕಲಾಗುತ್ತದೆ. ಆಯಾ ರಾಜ್ಯಗಳ ಸಂಪ್ರದಾಯಿಕ ಸಸ್ಯಾಹಾರ, ವಿಶೇಷ ತಿಂಡಿ-ತಿನಿಸುಗಳು ಸವಿಯಲು ದೊರೆಯಲಿವೆ. ಆಮ್ಲಜನಕ, ನೆರಳು, ಹಣ್ಣು, ಗೊಬ್ಬರ ಇನ್ನಿತರ ನೀಡಿಕೆಯೊಂದಿಗೆ ಮನುಷ್ಯರ ಬದುಕಿಗೆ ಪ್ರಯೋಜನಾಕಾರಿಯಾದರೂ ಮನುಷ್ಯ ತನ್ನ ಮೇಲೆ ನಡೆಸುವ ದೌರ್ಜನ್ಯ ಎಂತಹದ್ದು ಎಂಬುದನ್ನು ಗಿಡ-ಮರಗಳು ತಮ್ಮ ಆತ್ಮಕಥನವನ್ನು ಹೇಳಿಕೊಳ್ಳಲಿವೆ. ಸೆನ್ಸಾರ್‌ ಬಳಕೆಯೊಂದಿಗೆ ಧ್ವನಿ-ಬೆಳಕು ಪ್ರದರ್ಶನದಡಿ ಕೈಗೊಳ್ಳಲಾಗುತ್ತಿದೆ. ಆರೋಗ್ಯ ದೃಷ್ಟಿಯಿಂದ ದೇಸಿ ಚಿಕಿತ್ಸೆಯ ಗ್ಯಾಲರಿ ರೂಪಿಸಲಾಗುತ್ತದೆ.

ಏಳು ದಿನಗಳ ಉತ್ಸವಕ್ಕೆ ರಾಷ್ಟ್ರ-ಅಂತಾರಾಷ್ಟ್ರೀಯ ತಜ್ಞರು, ಅನುಭವಿಗಳು ಆಗಮಿಸಲಿದ್ದು, ವಿಜ್ಞಾನಿಗಳು ರೈತರು, ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಉತ್ಸವ ಅರ್ಥಪೂರ್ಣವಾಗಿಸಲು, ಸಮರ್ಪಕ ನಿರ್ವಹಣೆಗೆ ವಿವಿಧ ಕಮಿಟಿಗಳನ್ನು ರಚಿಸಲಾಗುವುದು. ಉತ್ಸವಕ್ಕೆ ಬರುವ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ರೀತಿಯಲ್ಲಿ ಇದು ಪ್ರೇರಣೆ ನೀಡಿ, ಬದಲಾವಣೆ ತರುವಂತಾಗಬೇಕೆಂದೇ ಉತ್ಸವದ ಆಶಯವಾಗಿದೆ ●ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ. ಕನೇರಿ ಮಠ

-ಅಮರೇಗೌಡ ಗೋನವಾರ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next