ಮಂಗಳೂರು ; ಪಣಂಬೂರು ಬೀಚ್ ಒಂದು ಕಾಲಕ್ಕೆ ಅಂತರಾಷ್ಟ್ರೀಯ ಮಟ್ಟಕ್ಕೆ ಪ್ರಸಿದ್ದಿಯಾದ ದಿನಗಳಿದ್ದವು. ದೇಶದ ವಿದೇಶದ ಜನರು ಆಗಮಿಸಿ ಇಲ್ಲಿನ ಬೀಚ್‍ನ ಸೌಂದರ್ಯವನ್ನು ಆಸ್ವಾದಿಸಿ ಹೋಗುತ್ತಿದ್ದರು. ಆದರೆ ಇದೀಗ ಕಸದ ಕೊಂಪೆಯಾಗಿ ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ. ಕಳೆದ ಎರಡು ದಿನಗಳಿಂದ ಅದೆಲ್ಲಿಂದಲೋ ಸಮುದ್ರಕ್ಕೆ ಸೇರಿಕೊಂಡ ತ್ಯಾಜ್ಯ ದಡದ ತುಂಬೆಲ್ಲಾ ಹರಿಡಿಕೊಂಡಿದೆ.
ಪ್ಲಾಸ್ಟಿಕ್, ಬಟ್ಟೆ ಬರೆಗಳ ತುಂಡು, ನೈಲಾನ್ ಹಗ್ಗ ಹೀಗೆ ವಿವಿಧ ತ್ಯಾಜ್ಯಗಳು ಒಂದು ಕಿ.ಮೀ ಉದ್ದಕ್ಕೂ ಹರಡಿದೆ. ಭಾರೀ ಪ್ರಮಾಣದ ತ್ಯಾಜ್ಯ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಚೆಲ್ಲಾಪಿಲ್ಲಿಯಾಗುತ್ತಿದೆ. ಸಮೀಪದಲ್ಲೇ ಇರುವ ಕೆರೆಯಂತಿರುವ ಸ್ಥಳದಲ್ಲಿ ಸೇರಿ ಕೊಳೆತು ನಾರುತ್ತಿದೆ.
ಇದನ್ನೂ ಓದಿ :ಬೆಳಗಾವಿ ಪಾಲಿಕೆ ಚುನಾವಣೆ: ಅಭ್ಯರ್ಥಿ ಅಂತಿಮಗೊಳಿಸಲು ಕಸರತ್ತು
ಈ ಬಗ್ಗೆ ಸ್ಥಳೀಯರು, ಹಿರಿಯ ಯಕ್ಷಗಾನ ಕಲಾವಿದರೂ ಆದ ಶಿವರಾಮ ಪಣಂಬೂರು ಅವರು ತ್ಯಾಜ್ಯಗಳು ಹರಡಿರುವ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು. ಸಂಗ್ರಹಿಸಿದ ತ್ಯಾಜ್ಯದಂತಿರುವ ಇದನ್ನು ಸಮುದ್ರಕ್ಕೆ ತಂದು ಸುರಿದಿರುವ ಸಾಧ್ಯತೆಯಿದೆ. ಇಲ್ಲವೇ ನದಿ ತೊರೆಗಳಿಂದ ಹರಿದು ಬಂದು ಸಮುದ್ರ ಸೇರಿರುವ ಸಾಧ್ಯತೆಯಿದ್ದು ಇದೀಗ ದಡದ ತುಂಬೆಲ್ಲಾ ಹರಡಿಕೊಂಡಿದೆ. ಶುಚಿತ್ವಕ್ಕೆ ಆದ್ಯತೆ ನೀಡಿ ಪ್ರಸಿದ್ದಿಯಾಗಿರುವ ಪಣಂಬೂರು ಬೀಚ್ ಇಂದು ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಎನ್‍ಜಿಒ ಸಂಸ್ಥೆಗಳ ನೆರವಿನಿಂದ ಸರಕಾರ ಇಲ್ಲಿ ಶುಚಿತ್ವ ಕಾಪಾಡಬೇಕಿದೆ. ಇದುವರೆಗೆ ಪ್ರವಾಸೋಧ್ಯಮ ಇಲಾಖೆಯು ಇಲ್ಲಿನ ಬೀಚನ್ನು ನಿರ್ಲಕ್ಷ್ಯ ಮಾಡಿದೆ.ಈ ತ್ಯಾಜ್ಯದಿಂದ ದುರ್ವಾಸನೆ ಹರಡಿದ್ದು ಸ್ಥಳೀಯರಿಗೆ ಸಮಸ್ಯೆಯಾಗಿದೆ ಎಂದರು.ಒಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯಾದ ಈ ಬೀಚ್‍ಗೆ ಇದೀಗ ತ್ಯಾಜ್ಯದ ಹರಿದು ಬಂದಿದ್ದಾದರೂ ಎಲ್ಲಿಂದ ಎಂಬುದು ಯಕ್ಷ ಪ್ರಶ್ನೆಯಾಗಿದೆ