Advertisement

ಕಡಲ್ಕೊರೆತಕ್ಕೆ ಕೊಚ್ಚಿ ಹೋಗುತ್ತಿರುವ ತೀರ ಪ್ರದೇಶ

02:04 PM Jul 19, 2022 | Team Udayavani |

ಪಣಂಬೂರು: ಅವೈಜ್ಞಾನಿಕ ಕಾಮಗಾರಿ, ಸ್ಥಳೀಯರ ಮಾಹಿತಿ ಪಡೆಯದೆ ಅಧಿಕಾರಿಗಳ ಏಕಪಕ್ಷೀಯ ನಿರ್ಧಾರಗಳಿಂದ ಸಮುದ್ರಕ್ಕೆ ಕಲ್ಲು ಹಾಕುವ ಪ್ರಕ್ರಿಯೆ ವಿಫಲವಾಗುತ್ತಿದ್ದು, ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಷಿಯನ್‌ ಟೆಕ್ನಾಲಜಿ (ಎನ್‌ಐಒಟಿ)ಸಲಹೆ ಸೂಚನೆ ಪಾಲಿಸುವ ಆವಶ್ಯಕತೆ ಎದುರಾಗಿದೆ.

Advertisement

ಸದ್ಯ ಪಣಂಬೂರು ಬಳಿಯ ಕೂರಿಕಟ್ಟ ಪ್ರದೇಶದಲ್ಲಿನ ಒಂದು ಸಣ್ಣ ಭಾಗಕ್ಕೆ ಕಡಲ್ಕೊರೆತ ಆಗದಂತೆ ಕಲ್ಲು ಹಾಕಿದ ಪರಿಣಾಮ ಇಂದು ಮೀನಕಳಿಯ ಪ್ರದೇಶದಲ್ಲಿ ಸಮುದ್ರ ಒಳ ನುಗ್ಗಿ ಅವಾಂತರ ಸೃಷ್ಟಿಸಿದೆ. ಸುರತ್ಕಲ್‌ನಿಂದ ಪಣಂಬೂರು ವರೆಗೆ ವಿವಿಧ ಭಾಗದಲ್ಲಿ ಕಡಲ್ಕೊರೆತ ಆದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಗೋಡೆಯಂತೆ ಕಪ್ಪು ಕಲ್ಲು ಪೇರಿಸಿ ಇಡುವ ಕಾಮಗಾರಿ ಹೊಸಬೆಟ್ಟು, ಸುರತ್ಕಲ್‌ ಪ್ರದೇಶದಲ್ಲಿ ಯಶಸ್ವಿಯಾದರೆ ಇತ್ತ ಕುಳಾಯಿ ಬಳಿ, ಚಿತ್ರಾಪುರ ಬಳಿ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ರಾಜ್ಯ ಬಂದರು ಇಲಾಖೆ ಎಡವಿದಂತೆ ಕಾಣುತ್ತಿದೆ. ಈ ಭಾಗದಲ್ಲಿ ಭಾರೀ ಗಾತ್ರದ ಕೆಲವೊಂದು ಕಲ್ಲುಗಳನ್ನು ಸಮುದ್ರದ ತೆರೆಗಳು ಎಳೆದುಕೊಂಡು ಹೋಗಿವೆ.

ಇನ್ನೊಂದೆಡೆ ಮೀನಕಳಿಯ ಭಾಗದಲ್ಲಿ ಮೂರು ಮನೆ ಭಾಗಶಃ ಹಾನಿಗೊಳಗಾದರೆ, ರಸ್ತೆ ಸಮುದ್ರ ಪಾಲಾಗಿದೆ. ಹಲವಾರು ತೆಂಗಿನ ಮರಗಳು, ಬಾದಾಮ್‌ ಮರಗಳು ಸಮುದ್ರದಲ್ಲಿ ಕೊಚ್ಚಿಹೋಗಿವೆ.

ಪಣಂಬೂರು ಬೀಚ್‌ ಭಾಗದಲ್ಲೂ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಜಾಗವನ್ನು ಸಮುದ್ರ ಆಕ್ರಮಿಸಿ ಕೊಂಡಿದೆ. ಇಲಾಖೆಯು ಸಮರ್ಪಕ ಯೋಜನೆಯಿಲ್ಲದೆ ಕಾಮ ಗಾರಿ ಮಾಡಿದ ಪರಿಣಾಮ ಈ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದೆ ಎಂಬುದು ಹಿರಿಯ ಮೀನುಗಾರರ ಅನಿಸಿಕೆ. ಕಡಲ್ಕೊರೆತ ತಡೆಗೆ ತೋಚಿದಂತೆ ಕಲ್ಲು ಹಾಕುವ ಪ್ರಕ್ರಿಯೆಗೆ ದೇಶದ ಹಸಿರು ಪೀಠ ತಡೆ ನೀಡಿ ಎನ್‌ಐಒಟಿಯ ಸೂಕ್ತ ಸಲಹೆ ಸೂಚನೆ ಪಡೆದು ಹಾಕುವಂತೆ ನಿರ್ದೇಶನವನ್ನು ಎಪ್ರಿಲ್‌ 2022ರ ಆದೇಶದಲ್ಲಿ ಸೂಚಿಸಿದ್ದು ಅದರಂತೆ ನಡೆಸಬೇಕಿದೆ.

ಕುಳಾಯಿ, ಚಿತ್ರಾಪುರ ಭಾಗದಲ್ಲಿ ಸಮುದ್ರದ ದಡಕ್ಕೆ ನೇರವಾಗಿ ಕಲ್ಲು ಹಾಕಲಾಗಿದ್ದು ಅವೈಜ್ಞಾಕಿವಾಗಿ ಹಾಕಲಾಗಿದೆ ಎಂದು ಸಿಆರ್‌ಝಡ್‌ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು, ಹಸಿರು ಪೀಠ ಆದೇಶದಂತೆಯೇ ಹಾಕಬೇಕು ಎಂಬ ಸೂಚನೆ ನೀಡಿದೆ. ಇದರಿಂದ ಹಾಕಲಾದ ಬೃಹತ್‌ ಕಲ್ಲುಗಳನ್ನು ತೆರವು ಮಾಡಿ ಕಾಸರಗೋಡು ನೆಲ್ಲಿಕುನ್ನು ಮಾದರಿಯಲ್ಲಿ ಹಾಕಲಾಗುತ್ತದೆಯೆ ಅಥವಾ ಎನ್‌ಐಒಟಿ ನಿರ್ದೇಶನದಂತೆ ನಕ್ಷೆ ಮಾಡಿ ಮುಂದಿನ ಕಡಲ್ಕೊರೆತ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಬಂದು ಇಲಾಖೆ ಕ್ರಮ ಕೈಗೊಳ್ಳಲಿದೆಯೆ ಎಂಬುದನ್ನು ಕಾದು ನೋಡಬೇಕಿದೆ.

Advertisement

ಸೂಕ್ತ ಪುನರ್‌ ವ್ಯವಸ್ಥೆ ಕೈಗೊಳ್ಳಲು ನೋಟಿಸ್‌: ಕಡಲ್ಕೊರೆತ ತಡೆಗಟ್ಟಲು ಸಮರ್ಪಕ ಕಾಮಗಾರಿ ನಡೆಸುವ ಬಗ್ಗೆ ಹಸಿರು ಪೀಠ ಎಪ್ರಿಲ್‌ನಲ್ಲಿ ತೀರ್ಪು ನೀಡಿದ್ದು, ಅದರಂತೆ ವೈಜ್ಞಾನಿಕವಾಗಿ ಮಾಡಬೇಕು. ಈ ಬಗ್ಗೆ ಚಿತ್ರಾಪುರ ಭಾಗದಲ್ಲಿ ಕಡಲ್ಕೊರೆತ ತಡೆಗೆ ಮಾಡಿದ ಕಾಮಗಾರಿ ಸಮರ್ಪಕವಾಗಿಲ್ಲ. ನ್ಯಾಯಲಯದ ಆದೇಶದಂತೆ ಈ ಬಗ್ಗೆ ಸೂಕ್ತ ಪುನರ್‌ವ್ಯವಸ್ಥೆ ಕೈಗೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗೆ ನೋಟಿಸ್‌ ನೀಡಿದ್ದೇವೆ. – ಡಾ| ದಿನೇಶ್‌ ಕುಮಾರ್‌ ವೈ., ಪ್ರಾದೇಶಿಕ ನಿರ್ದೇಶಕರು, ಅರಣ್ಯ, ಜೀವಿ ಪರಿಸ್ಥಿತಿ, ಪರಿಸರ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next