Advertisement

ಪಣಂಬೂರು: ಎರಡು ವರ್ಷಗಳ ಬಳಿಕ ಮತ್ತೆ ತೀರದಲ್ಲಿ ತೈಲ ಜಿಡ್ಡು

09:12 PM Apr 29, 2019 | Sriram |

ವಿಶೇಷ ವರದಿ –ಪಣಂಬೂರು: ಹಡಗುಗಳಿಂದ ತ್ಯಜಿಸಲ್ಪಟ್ಟ ತೈಲ ಜಿಡ್ಡು ತ್ಯಾಜ್ಯಗಳ ರಾಶಿ ತೀರಕ್ಕೆ ಬಂದು ಸೇರಿದ್ದು ಸುಂದರವಾಗಿದ್ದ ಕರಾವಳಿ ಬೀಚ್‌ ವಿರೂಪಗೊಂಡಿದೆ. ಪಣಂಬೂರು, ತಣ್ಣೀರುಬಾವಿ ಪರಿಸರವೂ ಇದರಿಂದ ಹೊರತಾಗಿಲ್ಲ.

Advertisement

ಇಲ್ಲಿನ ರಕ್ಷಣಾ ಸಿಬಂದಿಗೆ ತೈಲ ಜಿಡ್ಡು ಅಂಟಿಕೊಂಡು ಸತ್ತ ಮೀನು ಸಿಕ್ಕಿದ್ದು ಮಾಲಿನ್ಯದ ಬಿಸಿ ಮತ್ಸé ಸಂಪತ್ತಿಗೂ ತಟ್ಟುತ್ತಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ಏನೂ ಆಗಿಲ್ಲ ಎಂಬಂತೆ ಕುಳಿತಿದೆ.

ಬೈಕಂಪಾಡಿಯಲ್ಲಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಣಂಬೂರು, ತಣ್ಣೀರುಬಾವಿ ಪ್ರದೇಶದಲ್ಲಿ ಕಡಲ ತೀರ ಮಾಲಿನ್ಯಕ್ಕೊಳಗಾಗಿರುವುದು ಗಮನಕ್ಕೇ ಬಂದಿಲ್ಲ. ಇದು ಮಾಧ್ಯಮದ ಮಂದಿ ಪ್ರಶ್ನಿಸಿದಾಗ ಅ ಧಿಕಾರಿಗಳಿಂದ ಸಿಕ್ಕ ಉತ್ತರ.

ಆಳ ಸಮುದ್ರದಲ್ಲಿ ಕಚ್ಚಾ ತೈಲ ಸಾಗಾಟದ ವೇಳೆ ಹಡಗನ್ನು ಬಲಾಸ್ಟಿಂಗ್‌ ಸಿಸ್ಟಮ್‌ ಮೂಲಕ ನಿಯಂತ್ರಿಸುವಾಗ ಕಚ್ಚಾ ತೈಲ ಸೋರಿಕೆ ಆಗುತ್ತದೆ. ಮಾತ್ರವಲ್ಲ ಹೆಚ್ಚುವರಿ ತೈಲದ ತ್ಯಾಜ್ಯವನ್ನು ಬಂದರುಗಳಲ್ಲಿ ಸಂಸ್ಕರಣೆಗೆ ನೀಡಬೇಕು ಎಂಬುದು ನಿಯಮ. ಆದರೆ ಆಳ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಸಂಚರಿಸುವ ಟ್ಯಾಂಕರ್‌ಗಳು ಸಮುದ್ರದಲ್ಲೇ ವಿಸರ್ಜಿಸುತ್ತವೆ. ಇದು ಸಮುದ್ರದ ಉಬ್ಬರ ಇಳಿತಕ್ಕೆ ಟಾರ್‌ಗಳಾಗಿ ಮಾರ್ಪಟ್ಟು ಸಮುದ್ರ ತೀರ ಸೇರುತ್ತವೆ.

ಉಸಿರುಗಟ್ಟುತ್ತಿರುವ ಮೀನುಗಳು!
ತೈಲದ ಅಂಶ ಸಮುದ್ರದಲ್ಲಿ ಸೇರಿಕೊಂಡ ಪರಿಣಾಮ ಮೀನುಗಳಿಗೆ ಈಜಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ತೈಲದ ನಡುವೆ ಸಿಲುಕಿದಾಗ ಆಕ್ಸಿಜನ್‌ ಕಡಿಮೆಯಾಗಿ ಸಾವನ್ನಪ್ಪುತ್ತವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಅಂಶ. ಇದರ ಜತೆ ಟಾರ್‌ ಉಂಡೆಗಳಾಗಿ ಮಾರ್ಪಟ್ಟ ತೈಲದ ಹೊಡೆತಕ್ಕೆ ಸಿಲುಕಿಯೂ ಮೀನುಗಳು ಸಾವನ್ನಪ್ಪುತ್ತವೆ. ದಡಕ್ಕೆ ಬಂದು ಟಾರ್‌ ಬಾಲ್‌ಗ‌ಳು ಬಿಸಿಲಿಗೆ ಕರಗಿ ಮೈ ಕೈಗೆ ಅಂಟಿಕೊಳ್ಳುತ್ತವೆ.

Advertisement

ಕೋಸ್ಟ್‌ಗಾರ್ಡ್‌ಗೆ ಪರಿಶೀಲನೆಗೆ ಆದೇಶ
ಜಿಲ್ಲಾಧಿ ಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಬೀಚ್‌ನಲ್ಲಿ ಆಗುತ್ತಿರುವ ಮಾಲಿನ್ಯದ ಕುರಿತು ಸಮುದ್ರದಲ್ಲಿ ಯಾವ ಕಾರಣ ಆಗುತ್ತಿದೆ ಎಂದು ಮಾಹಿತಿ ನೀಡುವಂತೆ ಕೋಸ್ಟ್‌ಗಾರ್ಡ್‌ಗೆ ತಿಳಿಸಿದ್ದಾರೆ.

ಮೀನುಗಾರರ ಆಕ್ರೋಶ
ನ್ಯಾಶ‌ನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಶಿಯಾನೋಗ್ರಫಿ (ಎನ್‌ ಐ ಒ) ಸಂಸ್ಥೆ ಗೋವಾದಲ್ಲಿದ್ದು, ಸಮುದ್ರದಲ್ಲಿ ಉಂಟಾಗುವ ಟಾರ್‌ ಬಾಲ್‌ಗ‌ಳ ಬಗ್ಗೆ ಸಾಮಾನ್ಯ ಎಂಬಂತೆ ವರದಿ ನೀಡಿದೆ. ಇದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ಸé ಸಂತತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಲು ಹೆಚ್ಚಾದ ಹಡಗುಗಳ ಓಡಾಟ, ಅಪಾಯಕಾರಿ ಕಂಪೆನಿಗಳು ಸಮುದ್ರಕ್ಕೆ ಬಿಡುವ ತ್ಯಾಜ್ಯಗಳಿಂದ ಆಗುತ್ತಿದೆ ಎಂಬುದು ಮೀನುಗಾರರ ಆರೋಪ. ಇದಕ್ಕೆ ಸೂಕ್ತ ಕ್ರಮವನ್ನು ಸರಕಾರ ತೆಗೆದುಕೊಳ್ಳ ಬೇಕು ಎಂದು ಮೀನುಗಾರರ ಒತ್ತಾಯವಾಗಿದೆ.

 ಟ್ಯಾಂಕರ್‌ಗಳಿಂದ ಸಮಸ್ಯೆ
ಕ್ರೂಡ್‌ ಆಯಿಲ್‌ ಸಾಗಾಟದ ಬೃಹತ್‌ ಟ್ಯಾಂಕರ್‌ಗಳಿಂದ ಸಮಸ್ಯೆ ಆಗುತ್ತದೆ. ಅದರ ನಿರ್ವಹಣೆ ವೇಳೆ ಕಚ್ಚಾ ತೈಲ ಸಮುದ್ರಕ್ಕೆ ಸೋರಿಕೆಯಾಗಿ ಈ ಸಮಸ್ಯೆ ಆಗುತ್ತದೆ. ತೈಲದ ನಡುವೆ ಸಿಲುಕಿದ ಮೀನುಗಳು ಈಜಲಾಗದೆ ಮತ್ತು ಗಾಳಿಯ ಕೊರತೆಯಿಂದ ಸಾವನ್ನಪ್ಪುತ್ತವೆ. ಬಂದರು ಗಳಲ್ಲಿ ಹಡಗುಗಳ ತ್ಯಾಜ್ಯ ವಿಲೇವಾರಿ ಮಾಡಬೇಕಾಗುತ್ತದೆ. ಈ ಬಾರಿ ಈ ಸಮಸ್ಯೆ ಮಂಗಳೂರು, ಕಾರವಾರ, ಸೈಂಟ್‌ ಮೇರಿಸ್‌ ಭಾಗದಲ್ಲಿಯೂ ಕಂಡು ಬಂದಿದೆ.
– ಮಹೇಶ್‌ ಕುಮಾರ್‌,
ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ

ಹೆಚ್ಚಿನ ಮಾಹಿತಿ ಇಲ್ಲ
ಸಮುದ್ರ ಮಾಲಿನ್ಯವನ್ನು ಗಮನಿಸುವ ತಜ್ಞ ಸರಕಾರಿ ಸಂಸ್ಥೆಗಳಿಗೆ ಮಾಹಿತಿ ನೀಡಲಾಗುವುದು. ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಮುದ್ರ ಮಲಿನವಾಗುತ್ತಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
– ರಾಜಶೇಖರ ಪುರಾಣಿಕ್‌, ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next