Advertisement

Panambur: ಬಾಟಲಿ, ಪೊಟ್ಟಣ ಎಸೆಯಲು ಬೀಚ್‌ನಲ್ಲಿ ಕಿಯೋಸ್ಕ್ ಇಂದು ಉದ್ಘಾಟನೆ

05:41 PM Aug 30, 2024 | Team Udayavani |

ಪಣಂಬೂರು: ಮಂಗಳೂರಿನ ಪಣಂಬೂರು ಬೀಚ್‌ ಪ್ರದೇಶದ ಸ್ವತ್ಛ ಬೀಚ್‌ಗಳಲ್ಲಿ ಒಂದು ಎಂಬ ಖ್ಯಾತಿ ಹೊಂದಿದೆ. ಆದರೂ ಇಲ್ಲಿ ವರ್ಷಕ್ಕೆ ಹಲವಾರು ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಣೆಯಾಗುತ್ತದೆ. ಅಂತಾರಾಷ್ಟ್ರೀಯ ಖ್ಯಾತಿಯ ಬೀಚನ್ನು ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತಗೊಳಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನವೊಂದು ನಡೆದಿದೆ.

Advertisement

ಪ್ರವಾಸಿಗರು ತರುವ ನೀರಿನ ಬಾಟಲಿ, ತಿಂಡಿಯ ಪ್ಲಾಸ್ಟಿಕ್‌ ಪೊಟ್ಟಣಗಳು, ಪ್ಲಾಸ್ಟಿಕ್‌ ಬ್ಯಾಗ್‌ ಮತ್ತಿತರ ವಸ್ತುಗಳನ್ನು ಬೇಕಾಬಿಟ್ಟಿ ಎಸೆಯದೆ ಅದನ್ನು ಸರಿಯಾದ ಜಾಗದಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಕಿಯೋಸ್ಕ್ ಕೇಂದ್ರವೊಂದನ್ನು ನಿರ್ಮಿಸಲಾಗಿದೆ. ಬೈಕಂಪಾಡಿಯ ಕೆನರಾ ಪ್ಲಾಸ್ಟಿಕ್‌ ಉತ್ಪಾದಕರ ಅಸೋಸಿಯೇಶನ್‌ ಆಂದಾಜು 2.50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದೆ. ಇದರ ಮೇಲ್ವಿಚಾರಣೆಗೆ ಒಬ್ಬ ಸಿಬಂದಿ ನೇಮಕವಾಗಿದೆ.

ಪ್ರವಾಸಿಗರು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಕಿಯೋಸ್ಕ್ಗೆ ತಂದು ಹಾಕುವಂತೆ ಪ್ರೇರೇಪಿಸುವುದು, ಸಂಗ್ರಹವಾಗುವ ಪ್ಲಾಸ್ಟಿಕ್‌ ವಿಲೇವಾರಿಯ ಬಗ್ಗೆ ಸೂಕ್ತ ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೆಶನದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರವಾಸೋದ್ಯಮ ಇಲಾಖೆ, ಬೀಚ್‌ ನಿರ್ವಹಣೆ ಸಮಿತಿ, ಪಾಲಿಕೆ ಆಡಳಿತ ಸಹಿತ ಎಲ್ಲರೂ ಇದಕ್ಕೆ ಕೈಜೋಡಿಸಿದ್ದಾರೆ.

ಸಮುದ್ರ ತೀರದಲ್ಲಿ ಬರುವ ಜನರು ಬಳಸಿದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಾಂತ್ರಿಕ ಘಟಕಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗುತ್ತದೆ.

ಸೂಕ್ತ ವ್ಯವಸ್ಥೆಗಳು ಇರಲಿಲ್ಲ
ಪಣಂಬೂರು ಬೀಚ್‌ನಲ್ಲಿ ರಜಾ ದಿನ, ವಾರಾಂತ್ಯಗಳಲ್ಲಿ ಕನಿಷ್ಠ ನೂರು ಕೆಜಿ ಕೇವಲ ಪ್ಲಾಸ್ಟಿಕ್‌ ಪೊಟ್ಟಣಗಳು, ಬಾಟಲಿ, ಕೈ ಚೀಲ ಸಂಗ್ರಹವಾಗುತ್ರವೆ, ಇದನ್ನು ಪ್ರತ್ಯೇಕಿಸಿ ಹಾಕಲು ವ್ಯವಸ್ಥೆಗಳಿರಲಿಲ್ಲ.

Advertisement

ಬೀಚ್‌ ಪ್ರವಾಸೋದ್ಯಮ ವಿಭಾಗಕ್ಕೆ ಸೇರಿದ್ದರೂ ತ್ಯಾಜ್ಯ ವಿಲೇವಾರಿ ಮಾಡುವ ಜವಾಬ್ದಾರಿ ಪಾಲಿಕೆಯದ್ದು. ಪಾಲಿಕೆಯು ಸ್ಥಳೀಯ ವ್ಯಾಪಾರಿಗಳಲ್ಲಿ ಒಡಂಬಡಿಕೆ ಮಾಡಿಕೊಂಡು ಪ್ಲಾಸ್ಟಿಕ್‌ ಸಹಿತ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿತ್ತು.

ಪಣಂಬೂರು ಬೀಚ್‌ನ್ನು ಕಳೆದ ಹತ್ತು ವರ್ಷದ ಹಿಂದೆಯೇ ಪ್ಲಾಸ್ಟಿಕ್‌ ಮುಕ್ತ ಎಂದು ಘೋಷಣೆ ಮಾಡಲಾಗಿದೆಯಾದರೂ ಇದುವೆರಗೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ.

ಇಂದು ಸಚಿವರಿಂದ ಚಾಲನೆ
ಪಣಂಬೂರು ಬೀಚಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಮುದ್ರ ದಡಕ್ಕೆ ಪ್ಲಾಸ್ಟಿಕ್‌ ಬಾಟಲಿಗಳನ್ನು ಒಯ್ಯದೆ, ಈ ಘಟಕದಲ್ಲಿ ಹಾಕಿ ಸ್ವತ್ಛತೆಗೆ ಕೈ ಜೋಡಿಸಬೇಕು. ಇದಕ್ಕೆ ಅಧಿಕೃತವಾಗಿ ಆ. 30ರಂದು ಉಸ್ತುವಾರಿ ಸಚಿವ ಗುಂಡೂರಾವ್‌ ಅವರು ಚಾಲನೆ ನೀಡಲಿದ್ದಾರೆ ಎಂದು ಸಿಪಿಎಂಟಿಎ ಅಧ್ಯಕ್ಷ  ಬಿ.ಎ. ನಝೀರ್‌ ತಿಳಿಸಿದ್ದಾರೆ.

-ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next