Advertisement

Panambur: ಸಮುದ್ರಪಾಲಾದ ಯುವಕರಿಬ್ಬರ ಮೃತದೇಹ ಪತ್ತೆ

11:27 AM Mar 05, 2024 | Team Udayavani |

ಪಣಂಬೂರು: ಪಣಂಬೂರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಸಮುದ್ರಪಾಲಾದ ಮೂವರಲ್ಲಿ ನಾಗರಾಜ್‌ (24) ಮತ್ತು ಮಿಲನ್‌ (20) ಅವರ ಮೃತದೇಹ ಸೋಮವಾರ ಬೆಳಗ್ಗೆ ಮುಳುಗಡೆಯಾದ ಸ್ಥಳದ ಅನತಿ ದೂರದಲ್ಲಿ ಪತ್ತೆಯಾಯಿತು. ಲಿಖಿತ್‌ (18)ಗಾಗಿ ಹುಡುಕಾಟ ಮುಂದುವರಿದಿದೆ.

Advertisement

ಬೀಚ್‌ ಪ್ರಕ್ಷುಬ್ಧತೆ ಮುಂದುವರಿದಿದ್ದು ವಾಟರ್‌ ನ್ಪೋರ್ಟ್ಸ್ ಅನ್ನು ಬೀಚ್‌ ಟೂರಿಸಂ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸೋಮವಾರ ಬೆಳಗ್ಗಿನಿಂದ ಬರುವ ಪ್ರವಾಸಿಗರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ದೂರದಿಂದ ಬೀಚ್‌ ನೋಡಲು ಬಂದವರು ನಿರಾಸೆಗೊಳಗಾದರೆ ಇನ್ನು ಕೆಲವರು ರಕ್ಷಣೆ ತಂಡದ ಕಣ್ಣು ತಪ್ಪಿಸಿ ನೀರಾಟಕ್ಕೆ ಇಳಿಯುವ ಯತ್ನ ನಡೆಸುತ್ತಿದ್ದುದು ಕಂಡುಬಂತು.

ಸ್ಥಳಕ್ಕೆ ತಹಶೀಲ್ದಾರ್‌, ಪಣಂಬೂರು ಪೊಲೀಸರು ಭೇಟಿ ನೀಡಿ ನಾಪತ್ತೆಯಾದವರ ಪತ್ತೆಗೆ ಕ್ರಮ ಕೈಗೊಂಡರು.

ರವಿವಾರ ಜನಪದ ಪರಿಷತ್‌ ಕಾರ್ಯಕ್ರಮದ ನಿಮಿತ್ತ ಮಾತ್ರವಲ್ಲದೆ ರವಿವಾರವೂ ಆಗಿದ್ದರಿಂದ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮುಸ್ಸಂಜೆಯ 6 ಗಂಟೆಯ ವೇಳೆ ಬೀಚ್‌ ಪಕ್ಷುಬ್ಧತೆ ಹೆಚ್ಚುತ್ತಿದ್ದಂತೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯ ಸೈರನ್‌ ಮೊಳಗಿಸಲಾಯಿತು.

Advertisement

ಐವರು ಯುವಕರ ತಂಡವು ಕಣ್ಗಾವಲು ಇದ್ದ ಪ್ರದೇಶದಿಂದ ಸ್ವಲ್ಪ ದೂರಕ್ಕೆ ಹೋಗಿ ಸಮುದ್ರಕ್ಕಿಳಿದು ಆಟವಾಡಲು ಮುಂದಾಗಿದ್ದೇ ದುರ್ಘ‌ಟನೆಗೆ ಕಾರಣವಾಯಿತು. ಮುಳುಗೇಳುತ್ತಿದ್ದವರನ್ನು ರಕ್ಷಿಸಲು ತತ್‌ಕ್ಷಣ ಮುಂದಾದರೂ ಇಬ್ಬರ ಜೀವವುಳಿಸಲು ಸಾಧ್ಯವಾಯಿತು. ನಮ್ಮ ಮಾತನ್ನು ಕೇಳದೆ ಕೆಲವರು ಸಮುದ್ರಕ್ಕಿಳಿದು ಈಜಾಡುವ ಮೂಲಕ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ.

ಪದೇಪದೆ ಎಚ್ಚರಿಕೆ ನೀಡಿದರೂ ಯುವಕರು ಅದನ್ನು ಪಾಲಿಸದ ಕಾರಣ ದುರ್ಘ‌ಟನೆ ಸಂಭವಿಸಿದೆ ಎಂದು ಜೀವ ರಕ್ಷಕ ತಂಡದವರು ತಿಳಿಸಿದ್ದಾರೆ. ನಾಪತ್ತೆಯಾದವರ ಪತ್ತೆಗೆ ತುರ್ತು ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ಸಿಬಂದಿ, ಸ್ಥಳೀಯ ಜೀವ ರಕ್ಷಕರು ಸತತ ಹುಡುಕಾಟ ನಡೆಸಿದರು.

ಸಾವಿನಲ್ಲೂ ಜತೆಯಾದ ಸ್ನೇಹಿತರು:

ಬೇಸಗೆ ರಜೆಯಲ್ಲಿ ಬೇಕಿದೆ ಮುನ್ನೆಚ್ಚರಿಕೆ

ಬೇಸಗೆ ರಜೆಯಲ್ಲಿ ಕರಾವಳಿಗೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಬೀಚ್‌ಗಳಲ್ಲಿ ಕಣ್ಗಾವಲು ಹೆಚ್ಚು ಮಾಡಬೇಕಾದ ಅಗತ್ಯವಿದೆ. ಮುನ್ನೆಚ್ಚರಿಕೆಯ ಕ್ರಮ, ಜೀವರಕ್ಷಕ ಸಾಧನ, ಪ್ರಥಮ ಚಿಕಿತ್ಸಾ ಕೊಠಡಿ, ವೈದ್ಯರ ತಂಡ, ತುರ್ತು ಸಾಗಾಟ ವಾಹನ ಹೀಗೆ ಜàವರಕ್ಷಕ ಮೂಲಸೌಕರ್ಯ ಹೆಚ್ಚಿಸಬೇಕಾದ ಅನಿವಾರ್ಯ ಜಿಲ್ಲಾಡಳಿತಕ್ಕಿದೆ. ಜಿಲ್ಲೆಯ ಸಮುದ್ರ ಹಾಗೂ ನದಿ ತೀರದಲ್ಲಿ ಸಂಭವಿಸಿದ ದುರಂತಗಳಲ್ಲಿ ವಿದ್ಯಾರ್ಥಿ/ ಯುವಜನರೇ ಹೆಚ್ಚು ಸಾವಿಗೀಡಾಗಿದ್ದಾರೆ.

ಬಜಪೆ: ಪಣಂಬೂರು ಬೀಚ್‌ನಲ್ಲಿ ಮಾ. 3ರಂದು ಸಂಜೆ ಸಮುದ್ರದಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ಬೃಹತ್‌ ಅಲೆಗಳಿಗೆ ಸಿಲುಕಿದ ಪೊರ್ಕೋಡಿ ಅಂಬೇಡ್ಕರ್‌ ನಗರ ಕಾಲನಿ ನಿವಾಸಿಗಳಾದ ಗುರುಪುರ ಕೈಕಂಬದ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖೀತ್‌ (18), ಮಿಲನ್‌ (20) ಮತ್ತು ಮಾತಾ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ನಾಗರಾಜ್‌ (24) ಎಲ್ಲರೂ ಸ್ನೇಹಿತರು.

ಅಪಾಯದಿಂದ ಪಾರಾದ ಮನೋಜ್‌ ಮತ್ತು ಪುನೀತ್‌ ಒಟ್ಟು 5 ಮಂದಿ ಸ್ನೇಹಿತರು ಬೈಕ್‌ನಲ್ಲಿ ಪಣಂಬೂರು ಬೀಚ್‌ಗೆ ಮನೆಯಿಂದ ಮಧ್ಯಾಹ್ನ 4ರ ವೇಳೆಗೆ ತೆರಳಿದ್ದರು. 5ಕ್ಕೆ ಬೀಚ್‌ ಗೆ ತಲುಪಿದ್ದರು.

ಲಿಖಿತ್‌ ಮೊದಲು ಸಮುದ್ರ ಅಲೆಗೆ ಸಿಲುಕಿದ್ದು, ಅವನನ್ನು ಬದುಕಿಸಲು ಮಿಲನ್‌ ಹೋಗಿದ್ದು, ಅವರಿಬ್ಬರನ್ನು ಬದುಕಿಸಲು ನಾಗರಾಜ್‌ ಸಮುದ್ರದ ಅಳಕ್ಕೆ ಇಳಿದಿದ್ದರು. ಬಳಿಕ ಮೂವರು ಸಮುದ್ರದ ಗಾಳಿಗೆ ಹಾಗೂ ಅಲೆಗೆ ಸಿಲುಕಿಕೊಂಡು ನಾಪತ್ತೆಯಾಗಿದ್ದರು.

ಅವರೊಂದಿಗೆ ತೆರಳಿದ್ದ ಪುನೀತ್‌, ಮನೋಜ್‌ ಇಬ್ಬರು ಮೊಣಕಾಲು ನೀರು ಇರುವ ತನಕ ಸಮುದ್ರದಲ್ಲಿ ಇಳಿದಿದ್ದರು. ಇದರಿಂದ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ಘಟನೆಯಿಂದಾಗಿ ಪೊರ್ಕೋಡಿ ಅಂಬೇಡ್ಕರ್‌ ಕಾಲನಿಯಲ್ಲಿ ಶ್ಮಶಾನ ಮೌನ ಅವರಿಸಿದೆ.

ಲಿಖಿತ್‌ ಪ್ರಥಮ ವರ್ಷದ ಪರೀಕ್ಷೆ ಮುಗಿಸಿದ್ದು, ಮಾ.30ಕ್ಕೆ ಫಲಿತಾಂಶ ಪ್ರಕಟವಾಗಲಿತ್ತು. ಲಿಖಿತ್‌ ರಜೆಯಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಪೋಸ್ಟ್‌ ಮ್ಯಾನ್‌ ಆಗಿ ಕೆಲಸ ಮಾಡುವುದಾಗಿ ಸ್ನೇಹಿತರಿಗೆ ತಿಳಿಸಿದ್ದ. ರಾಣಿ ಹಾಗೂ ಮಣಿಕಂಠ ದಂಪತಿಗೆ ಲಿಖಿತ್‌ ಓರ್ವನೇ ಪುತ್ರ. ಹಲವಾರು ಕನಸುಗಳನ್ನು ಕಂಡಿದ್ದ ಲಿಖೀತ್‌ ಪೊಲೀಸ್‌ ಆಗುವ ಕನಸನ್ನು ಕಂಡಿದ್ದ. ಓದಿನಲ್ಲೂ ಇತರ ಚಟುವಟಿಕೆಯಲ್ಲೂ ಮುಂದಿದ್ದ.

ಮಿಲನ್‌ ಅವರ ಅಣ್ಣ ಮೋಹನ್‌ ಅವರೊಂದಿಗೆ ವಾಸವಾಗಿದ್ದರು. ದ್ವಿತೀಯ ಪಿಯುಸಿಯನ್ನು ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನಲ್ಲಿಯೇ ಮುಗಿಸಿದ್ದ. ಅವರ ಹೊಸ ಮನೆ ನಿರ್ಮಾಣ ಹಂತದಲ್ಲಿದೆ. ಈಗ ಸಮೀಪದ ಮನೆಯಲ್ಲಿ ವಾಸವಾಗಿದ್ದಾರೆ.

ನಾಗರಾಜ್‌ (24) ಮಂಗಳೂರಿನ ಮಾತಾ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿದ್ಯಾರ್ಥಿ. ಫಕೀರಪ್ಪ ಮತ್ತು ಅನುಮ್ವ ದಂಪತಿಯ 9 ಮಂದಿ ಮಕ್ಕಳಲ್ಲಿ ಈತ ಕೊನೆಯವ. ಫಕೀರಪ್ಪ ಮತ್ತು ಅನುಮ್ವ ದಂಪತಿ ಇಳಿವಯಸ್ಸಿನಿಂದಾಗಿ ಈಗ ಮನೆಯಲ್ಲಿದ್ದಾರೆ. ನಾಗರಾಜ್‌ ಈಜು ಗೊತ್ತಿತ್ತು. ಒಳ್ಳೆಯ ಈಜುಗಾರ ಎಂದು ಮನೆಯವರು ತಿಳಿಸಿದ್ದಾರೆ. ನಾಗರಾಜ್‌ ಮಧ್ಯೆ ಕೆಲಕಾಲ ಕೆಲಸಕ್ಕೆ ಹೋಗುತ್ತಿದ್ದರು. ಬಳಿಕ ಕಾಲೇಜಿಗೆ ಸೇರಿದ್ದರು.

ಅಪಾಯದಿಂದ ಪಾರಾದವರು

ಅವರೊಂದಿಗೆ ತೆರಳಿ ಅಪಾಯದಿಂದ ಪಾರಾಜ ಮನೋಜ್‌ ಮಂಗಳೂರಿನ ಕುಂಟಿಕಾನ ದಲ್ಲಿ ಕೆಲಸ ಮಾಡುತ್ತಿದ್ದು, ಮೃತ ನಾಗರಾಜ್‌ ಅವರ ಅಕ್ಕ ಶಂಕರಮ್ಮನವರ ಮಗ. ಪುನೀತ್‌ 2ನೇ ವರ್ಷದ ಎಂಜಿನಿಯರ್‌ ವಿದ್ಯಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next