ಪಣಜಿ: ಗೋವಾದ ನೇತ್ರಾವಳಿ-ಸಾಂಗೆಯ ಮೈನಾಪಿ ಜಲಪಾತದಲ್ಲಿ ಮಾನ್ಸೂನ್ ಚಾರಣಕ್ಕೆ ತೆರಳಿದ್ದ ಇಬ್ಬರು ಪ್ರವಾಸಿಗರು ಭಾನುವಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಅದರಲ್ಲಿ ಒಬ್ಬರ ಮೃತದೇಹ ಜು.9 ರ ಭಾನುವಾರ ರಾತ್ರಿ ಪತ್ತೆಯಾಗಿದೆ. ಎರಡನೇ ಮೃತದೇಹ ಜು.10ರ ಸೋಮವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗೋವಾದ ನೇತ್ರಾವಳಿಯ ಸಾಂಗೆಯಲ್ಲಿರುವ ಮೈನಾಪಿ ಜಲಪಾತ ವೀಕ್ಷಣೆಗೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಈ ಪೈಕಿ ವಾಸ್ಕೋ ನಗರದ ಶಿವದತ್ತ ನಾಯ್ಕ್ (28) ಜಲಪಾತದ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಸಿ ಜನಾರ್ದನ್ ಸಾಡೇಕರ್ (55) ರಕ್ಷಿಸಲು ತೆರಳಿದರು ಎನ್ನಲಾಗಿದೆ.
ಆದರೆ ದುರಾದೃಷ್ಠವಶಾತ್ ಇಬ್ಬರೂ ನೀರಲ್ಲಿ ಮುಳುಗಿದರು ಎಂದು ತಿಳಿದು ಬಂದಿದೆ. ಸಾಡೇಕರ್ ಫೋಂಡಾದಿಂದ ಬಂದಿದ್ದು, ಎಲ್‍ಐಸಿ ಅಧಿಕಾರಿಯಾಗಿದ್ದರು. ಭಾನುವಾರ ಸಾಡೇಕರ್ ಅವರ ಮೃತದೇಹ ಪತ್ತೆಯಾಗಿದ್ದು, ತಡರಾತ್ರಿಯಾದರೂ ಶಿವದತ್ತ ನಾಯ್ಕ್ ಅವರ ಮೃತದೇಹ ಪತ್ತೆಯಾಗಿಲ್ಲ.
ಸತತ ಕಾರ್ಯಾಚರಣೆಯ ನಂತರ ಸೋಮವಾರ ಮಧ್ಯಾಹ್ನ ವೇಳೆಗೆ ಶಿವದತ್ತ ನಾಯ್ಕ ರವರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.