Advertisement

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

12:16 PM Nov 23, 2024 | Team Udayavani |

ಪಣಜಿ: ಪ್ರಸಿದ್ಧ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಸಿನಿಮಾವೂ ಚರಿತ್ರೆ ಕುರಿತಾದದ್ದೇ?

Advertisement

ಇದ್ದರೂ ಇರಬಹುದು. ಅದೂ ವಿಜಯನಗರ ಸಾಮ್ರಾಜ್ಯದ ಬಗ್ಗೆಯೇ.

ಅವರೇ ಹಂಚಿಕೊಂಡ ಅಭಿಪ್ರಾಯದಂತೆ ಮುಂದಿನ ದಿನಗಳಲ್ಲಿ ಇದ್ದರೂ ಇರಬಹುದು, ಆದರೆ ಸದ್ಯಕ್ಕೆ ಇಲ್ಲ. ಒಟ್ಟೂ ಅವರೊಳಗೆ ಯಾವುದೋ ಹೊಸ ಪಾಕದ ಸಿದ್ಧತೆ ನಡೆದಿದೆ ಎಂದಷ್ಟೇ ಹೇಳಬಹುದು.

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾಗವಾದ ಮಾಸ್ಟರ್‌ ಕ್ಲಾಸಸ್‌ ನಲ್ಲಿ ಭಾಗವಹಿಸಿದ್ದ ಮಣಿರತ್ನಂ ತಮ್ಮ ಇತ್ತೀಚಿನ ಅಧ್ಯಯನದ ಬಗ್ಗೆ ಪ್ರಸ್ತಾಪಿಸಿದರು. ಅದರಲ್ಲಿ ಸಲ್ಮಾನ್‌ ರಶ್ದಿಯ ವಿಕ್ಟರಿ ಸಿಟಿ ಇತ್ತು.

Advertisement

2023ರ ಫೆಬ್ರವರಿಯಲ್ಲಿ ಸಲ್ಮಾನ್‌ ರಶ್ಮಿಯವರ ವಿಕ್ಟರಿ ಸಿಟಿ ಕಾದಂಬರಿ ಬಿಡುಗಡೆಯಾಗಿತ್ತು. ಈ ಕಾದಂಬರಿ ವಿಜಯನಗರ ಸಾಮ್ರಾಜ್ಯದ ಕುರಿತಾಗಿರುವಂಥದ್ದು. ಈಗಾಗಲೇ ಚೋಳ ರಾಜ ಪರಂಪರೆಯ ಮೇಲೆ ಪೊನ್ನಿಯಾನ್‌ ಸೆಲ್ವಂ 1 ಮತ್ತು 2ನೇ ಭಾಗವನ್ನು ಪೂರೈಸಿರುವ ಮಣಿರತ್ನಂ ಆ ಇತಿಹಾಸದ ಗುಂಗಿನಿಂದ ಹೊರಬಂದಂತಿಲ್ಲ. ಈ ಹಿನ್ನೆಲೆಯಲ್ಲಿ ಮಣಿರತ್ನಂರ ಕ್ಯಾಮೆರಾ ಕಣ್ಣು ಮುಂದೆ ಹಂಪಿಯ ಕಡೆ ಹರಿದರೂ ಅಚ್ಚರಿ ಇಲ್ಲ.

ಪ್ರಶ್ನೆಯೊಂದಕ್ಕೆ ತಮ್ಮ ಪ್ರಸ್ತುತ ಸಾಹಿತ್ಯ ಕೃತಿಯ ಓದಿನ ಬಗ್ಗೆ ಪ್ರಸ್ತಾಪಿಸುವಾಗ ವಿಕ್ಟರಿ ಸಿಟಿಯ ಬಗ್ಗೆ ಪ್ರಸ್ತಾಪಿಸಿದರು. ಹಾಗಾದರೂ ಇದೂ ಸಿನಿಮಾವಾಗಬಹುದೇ ಎಂದು ಕೇಳಿದ್ದಕ್ಕೆ, ನನಗೂ ಹಾಗೆ ಅನಿಸುತ್ತಿದೆ. ಗೊತ್ತಿಲ್ಲ, ಆಗಲೂ ಬಹುದು ಎಂದಷ್ಟೇ ಪ್ರತಿಕ್ರಿಯಿಸಿದರು.

ಸಾಹಿತ್ಯ ಕೃತಿಗಳನ್ನು ಚಲನಚಿತ್ರಗಳನ್ನಾಗಿ ರೂಪಾಂತರಿಸುವ ಬಗೆ ಕುರಿತ ಮಾಸ್ಟರ್‌ ಕ್ಲಾಸ್‌ ನಲ್ಲಿಮತ್ತೊಬ್ಬ ನಿರ್ದೇಶಕ ಗೌತಮ್‌ ವಾಸುದೇವ್‌ ಮೆನನ್‌ ನಿರ್ವಹಿಸುತ್ತಿದ್ದರು.

ಈ ರೂಪಾಂತರ ಕ್ರಿಯೆ ನಿಜಕ್ಕೂ ಬಹಳ ಸೂಕ್ಷ್ಮತರವಾದುದು. ಪದಗಳನ್ನು ಸಮರ್ಥ ದೃಶ್ಯಾನುಭೂತಿಯ ಮಟ್ಟಕ್ಕೆ ರೂಪಾಂತರಿಸುವುದು ಸುಲಭದ ಕೆಲಸವಲ್ಲ. ಚಲನಚಿತ್ರಗಳ ದೃಶ್ಯ ಮಾಧ್ಯಮ. ಆದರೆ ಕೃತಿಗಳು (ಪುಸ್ತಕ) ಮುಖ್ಯವಾಗಿ ಕಲ್ಪನಾ ನೆಲೆಯವು. ಹಾಗಾಗಿ ಚಲನಚಿತ್ರ ನಿರ್ದೇಶಕನಾದವನಿಗೆ ಬರೀ ಲೇಖಕನದ್ದಲ್ಲ, ಓದುಗನ ಕಲ್ಪನಾ ಸಾಮ್ರಾಜ್ಯವನ್ನೂ ದೃಶ್ಯಾನುನೆಲೆಗೆ ತರುವಂತ ಜವಾಬ್ದಾರಿಯಿದೆ. ಆಗ ಹೆಚ್ಚಿನ ಎಚ್ಚರ ಅವಶ್ಯʼ ಎಂದರು ಮಣಿರತ್ನಂ.

ಪುರಾಣ ಕಥೆಗಳು ಹಾಗು ಭಾರತೀಯ ಚರಿತ್ರೆಯ ಸಂಗತಿಗಳು ತಮ್ಮನ್ನು ಪ್ರಭಾವಿಸಿವೆ ಎಂದು ಒಪ್ಪಿಕೊಂಡ ಮಣಿರತ್ನಂ, ಅದು ಪ್ರತಿ ಪಾತ್ರಗಳೊಂದಿಗಿನ ಸಂವಾದದ ಸಾಧ್ಯತೆಯನ್ನೇ ವಿಭಿನ್ನವಾಗಿಸಿದೆಯಂತೆ. ಸಾಹಿತ್ಯ ಕೃತಿಯ ಅವರ್ಣನೀಯ ಪದ ಪುಂಜಗಳ ಸಾಲುಗಳನ್ನು ಸಿನಿಮೀಯ ಚಿತ್ರಕಥೆಗೆ ರೂಪಾಂತರಿಸುವುದೇ ದೊಡ್ಡ ಸವಾಲು. ಅದರೊಂದಿಗೆ ಈ ಸವಾಲನ್ನು ಅತ್ಯಂತ ಸಮರ್ಥ ಹಾಗೂ ಸಮರ್ಪಕವಾಗಿ ಕಲಾವಿದರು ಸ್ವಾಭಾವಿಕವಾಗಿ ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗುವಂತೆಯೂ ಗಮನಿಸಬೇಕುʼ ಎಂಬುದು ಅವರ ಸಲಹೆ.

ನಿರ್ದೇಶಕನಾದ ನನ್ನ ಪ್ರಮುಖ ಜವಾಬ್ದಾರಿಯೆಂದರೆ, ನಟರೂ, ತಂತ್ರಜ್ಞರೂ ಸೇರಿದಂತೆ ಎಲ್ಲರನ್ನೂ ಸಿನಿಮಾದೊಳಗೆ ಒಳಗೊಳ್ಳುವಂತೆ ಮಾಡುವುದು. ಸಿನಿಮಾದ ಒಟ್ಟೂ ನಿರ್ಮಿತಿಯೊಳಗಿನ ಭಾಗವಾಗಿಸುವುದು. ಅದರ ಬಗ್ಗೆ ಯಾವಾಗಲೂ ಎಚ್ಚರ ವಹಿಸುತ್ತೇನೆ ಎಂದರು ಮಣಿರತ್ನಂ.

ನಾನಿನ್ನೂ ಚಿತ್ರರಂಗದ ವಿದ್ಯಾರ್ಥಿಯೇ. ನಾನಿನ್ನೂ ಒಬ್ಬ ಪ್ರೇಕ್ಷಕನಷ್ಟೇ. ವೇದಿಕೆ ಮೇಲೆ ಕುಳಿತು ಸಲಹೆ ನೀಡುವಷ್ಟರ ಮಟ್ಟಿಗೆ ಬೆಳೆದಿಲ್ಲ ಎಂಬುದನ್ನು ನಯವಾಗಿ ತಿಳಿಸಿದ ಅವರು, ಪೊನ್ನಿಯಾನ್‌ ಸೆಲ್ವಂ ನ ಚಿತ್ರೀಕರಣದ ಬಗ್ಗೆಯೂ ಕೆಲವು ಪ್ರಶ್ನೆಗಳಿಗೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next