ಪಣಜಿ: ವಿದ್ಯಾರ್ಥಿಗಳ ಸಂಖ್ಯೆ ಕ್ಷಿಪ್ರವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳು ಬಂದ್ ಆಗುತ್ತಿದೆ.
ಈ ವರ್ಷ 7 ಶಾಲೆಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆ ಕಳೆದ 10 ವರ್ಷಗಳನ್ನು ಅವಲೋಕಿಸಿದಾಗ 2014-15ರಲ್ಲಿ ಗೋವಾದಲ್ಲಿ 822 ಸರಕಾರಿ ಪ್ರಾಥಮಿಕ ಶಾಲೆಗಳಿದ್ದವು. ಈಗ 687 ಉಳಿದಿವೆ. ಈ 10 ವರ್ಷಗಳಲ್ಲಿ ಸಹಜವಾಗಿಯೇ 135 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ.
2014-15ರಲ್ಲಿ ಶಾಸಕ ಅಲೆಕ್ಸ್ ರೆಜಿನಾಲ್ಡ್ ಅವರು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದಲ್ಲಿ ಎಷ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ ಎಂದು ಲಿಖಿತ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರವಾಗಿ ಅಂದಿನ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಾಗಿದ್ದ ದಿ. ಮನೋಹರ್ ಪರೀಕರ್ 2014-15ನೇ ಸಾಲಿನಲ್ಲಿ ರಾಜ್ಯದಲ್ಲಿ 822 ಸರ್ಕಾರಿ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ ಎಂದು ಹೇಳಿದ್ದರು.
ಇಂದಿನ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, 694 ಸರ್ಕಾರಿ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ ಎಂದು ಹೇಳಿದ್ದರು. ಅದರ ನಂತರ, ಈ ಶೈಕ್ಷಣಿಕ ವರ್ಷದಲ್ಲಿ 7 ಶಾಲೆಗಳನ್ನು ಮುಚ್ಚಿದ್ದರಿಂದ ಈ ಸಂಖ್ಯೆ 687 ಕ್ಕೆ ಇಳಿದಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 135 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಕಾಲ ಶಿಕ್ಷಣ ಇಲಾಖೆಗೆ ಬಂದಿದೆ ಎಂಬುದನ್ನು ಇದು ತೋರಿಸುತ್ತದೆ.
ಈ ಮಧ್ಯೆ ಗೋವಾ ರಾಜ್ಯದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ವಿವಿಧ ರೀತಿಯಲ್ಲಿ ಆಕರ್ಷಿಸುತ್ತಿವೆ. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಬಾಲರಥದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಹಾಗಾಗಿಯೇ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದು ಮುಚ್ಚುತ್ತಿರುವ ಚಿತ್ರಣ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕಂಡು ಬರುತ್ತಿದೆ.