ಪಣಜಿ: ಗೋವಾದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಗೋವಾದ ಎರಡೂ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.
ಗೋವಾದಲ್ಲಿ ತಾಪಮಾನ ಹೆಚ್ಚಳ ಗಮನದಲ್ಲಿಟ್ಟುಕೊಂಡು ಮತದಾರರಿಗೆ ತಂಪು ಪಾನೀಯಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲದೆ ಇಕೊಫ್ರೆಂಡ್ಲಿ ಮತ ಕೇಂದ್ರದ ಕುರಿತಂತೆ ಭಾರಿ ಚರ್ಚೆ ನಡೆದಿದ್ದು, ಮತದಾರರ ಆಕರ್ಷಣೆಗೆ ಕಾರಣವಾಗಿದೆ. ಈ ವಿಶೇಷ ಮತಗಟ್ಟೆಗಳ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಗೋವಾದ ಸಾಖಳಿ ಮತಕೇಂದ್ರ ಹಾಗೂ ಅಮೋಣಾ ಮತಕೇಂದ್ರಗಳಲ್ಲಿ ಇಕೋ ಫ್ರೆಂಡ್ಲಿ ಮತಗಟ್ಟೆಗಳನ್ನಾಗಿ ಸಿದ್ಧಪಡಿಸಲಾಗಿತ್ತು. ಈ ಮತಗಟ್ಟೆಯ ಕುರಿತ ವೀಡಿಯೊವನ್ನು ಕೂಡ ಚುನಾವಣಾ ಆಯೋಗವು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.
ಈ ಇಕೊಫ್ರೆಂಡ್ಲಿ ಮತಗಟ್ಟೆಯನ್ನು ತೆಂಗಿನ ಗರಿಯನ್ನು ಹೆಣೆದು ಅತ್ಯಾಕರ್ಷಣೀಯವಾಗಿ ಸಜ್ಜುಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ ಹೂವು ಹಣ್ಣುಗಳಿಂದ ಅಲಂಕೃತಗೊಳಿಸಲಾಗಿತ್ತು.
ಮತಕೇಂದ್ರದ ಹೊರ ಭಾಗದಲ್ಲಿ ಸ್ವಾಗತ ಕಮಾನ್ ಕೂಡ ಹಾಕಲಾಗಿತ್ತು. ಹೂವಿನ ಕುಂಡಗಳನ್ನು ಇಟ್ಟು ಮತಗಟ್ಟೆಯನ್ನು ಮದುವೆ ಮನೆಯಂತೆ ಸಿಂಗರಿಸಲಾಗಿತ್ತು. ಈ ಮತಗಟ್ಟೆಗಳು ಮತದಾರರ ಆಕರ್ಷಣೆಗೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗೋವಾದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಮಧ್ಯಾಹ್ನದವರೆಗೆ ಶೇ 49 ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ವರೆಗೆ ಶೇ. 61.39 ರಷ್ಟು ಮತದಾನವಾಗಿದೆ.