Advertisement

ಮಾಸ್ಕ್ ನಲ್ಲಿ ಪಾನ್‌ ಕಲೆ; ಪಾಕ್‌ಗೆ ಬಳಕೆಯಾದ ಪಿಪಿಇ ಕಿಟ್‌

09:48 AM May 22, 2020 | mahesh |

ಮುಝಫ‌ರಾಬಾದ್‌: ಪಾಕಿಸ್ಥಾನದಲ್ಲಿ ಕಳಪೆ ಆರೋಗ್ಯ ಸಂರಕ್ಷಣಾ ಸೌಲಭ್ಯಗಳಿರುವುದು ಮತ್ತೂಮ್ಮೆ ಬೆಳಕಿಗೆ ಬಂದಿದೆ. ಆಕ್ರಮಿತ ಕಾಶ್ಮೀರ(ಪಿಒಕೆ)ದ ಮುಝಫ‌ರಾಬಾದ್‌ನ ಶೇಕ್‌ ಖಲೀಫಾ ಬಿನ್‌ ಝೈದ್‌ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಗಿರುವ ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ) ಕಿಟ್‌ಗಳು ಅದಾಗಲೇ ಬಳಸಲ್ಪಟ್ಟಿದ್ದು, ಕೆಲವಲ್ಲಿ ಪಾನ್‌ ಜಗಿದು ಉಗುಳಿದ ಕಲೆಗಳಿರುವುದಾಗಿ ಅಧಿಕಾರಿಗಳು ದೂರಿದ್ದಾರೆ.

Advertisement

“ಆಸ್ಪತ್ರೆಗೆ ರಾವಲ್ಪಿಂಡಿ ಸೇನಾ ಆಸ್ಪತೆಯಿಂದ ಸುಮಾರು 3 ಲಕ್ಷ ಪಿಪಿಇ ಕಿಟ್‌ಗಳು ಬಂದಿವೆ. ಆದರೆ ನಮಗೆ ರವಾನೆಯಾಗಿರುವ ಕಿಟ್‌ಗಳು ಈಗಾಗಲೇ ಬಳಸಲ್ಪಟ್ಟಿವೆ. ಕೆಲ ಮಾಸ್ಕ್ಗಳಲ್ಲಿ ಕೆಂಪು ಕಲೆಗಳಿವೆ. ಪ್ರಯೋಗಾಲಯದಲ್ಲಿ ಅವನ್ನು ಪರೀಕ್ಷಿಸಿದ ಬಳಿಕ ಅವು ಪಾನ್‌ ಜಗಿದು ಉಗುಳಿದ ಕಲೆಗಳೆಂದು ಗೊತ್ತಾಯಿತು’ ಎಂದು ಆಸ್ಪತ್ರೆಯ ಅಧಿಕಾರಿ ಟ್ವೀಟ್‌ ಮಾಡಿದ್ದಾರೆ.

“ಆಸ್ಪತ್ರೆಯ ಶಿಷ್ಟಾಚಾರದಂತೆ ಸೋಂಕು ಹರಡುವುದನ್ನು ತಪ್ಪಿಸಲು ನಾವು ಎಲ್ಲ ಕಿಟ್‌ಗಳನ್ನು ನಾಶಪಡಿಸಿದ್ದೇವೆ. ನಕಲಿ ಚೀನ ನಿರ್ಮಿತ ಪರೀಕ್ಷಾ ಯಂತ್ರಗಳು ಬಂದ ಬಳಿಕ ಆಗ ಬಳಸಲ್ಪಟ್ಟ ಪಿಪಿಇ ಕಿಟ್‌ಗಳನ್ನು ಕಳುಹಿಸುತ್ತಿರುವುದು ನಾಚಿಕೆಗೇಡು’ ಎಂದು ಅಧಿಕಾರಿ ಹೇಳಿದ್ದಾರೆ.

ಪಾಕಿಸ್ಥಾನದಲ್ಲಿ ಹೊಸದಾಗಿ 1,932 ಪ್ರಕರಣಗಳು ವರದಿಯಾಗಿದ್ದು ಕೋವಿಡ್‌ ಪೀಡಿತರ ಸಂಖ್ಯೆ ಬುಧವಾರ 45,898ಕ್ಕೇರಿದೆ. ಆಕ್ರಮಿತ ಕಾಶ್ಮೀರದಲ್ಲಿ ವೈದ್ಯಕೀಯ ಸೌಲಭ್ಯಗಳು ಕಳಪೆಯಾಗಿವೆ ಮತ್ತು ತರಬೇತಾದ ವೈದ್ಯಕೀಯ ಸಿಬಂದಿಯ ಕೊರತೆಯಿದೆ. ಆಕ್ರಮಿತ ಕಾಶ್ಮೀರದಲ್ಲಿ 133 ಹಾಗೂ ಗಿಲ್ಗಿಟ್‌ ಬಾಲ್ಟಿಸ್ಥಾನ್‌ನಲ್ಲಿ 556 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮುನ್ನ ಆಕ್ರಮಿತ ಕಾಶ್ಮೀರದಲ್ಲಿ ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ತಮಗೆ ಪಿಪಿಇ ಕಿಟ್‌ಗಳನ್ನು ಒದಗಿಸಲು ಸರಕಾರ ವಿಫ‌ಲವಾಗಿರುವುದನ್ನು ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸಿದ್ದರು. ಪಿಪಿಇ ಇಲ್ಲದೆ ಆಸ್ಪತ್ರೆಗಳಿಗೆ ತೆರಳಲು ಅನೇಕ ಆರೋಗ್ಯ ಕಾರ್ಯಕರ್ತರು ನಿರಾಕರಿಸಿದ್ದರು ಮತ್ತು ಇದರಿಂದಾಗಿ ಕೋವಿಡ್‌ ಶಂಕಿತರ ಪರೀಕ್ಷೆ ಹಾಗೂ ಚಿಕಿತ್ಸೆ ಮೇಲೆ ಪರಿಣಾಮವಾಗಿತ್ತು. ಪಾಕ್‌ ಸರಕಾರ ಕೋವಿಡ್‌ ಹಬ್ಬುತ್ತಿರುವ ವೇಳೆ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್‌ ಬಾಲ್ಟಿಸ್ತಾನಕ್ಕೆ ಸಂಬಂಧಿಸಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಮತ್ತು ಇದರಿಂದಾಗಿ ವಲಯದ ಜನರ ಜೀವನದ ಮೇಲೆ ನೇರ ಪರಿಣಾಮವಾಗಿದೆ.

Advertisement

ಕೋವಿಡ್‌ ವೈರಸ್‌ ಬಗ್ಗೆ ಆರಂಭದಿಂದಲೂ ಪಾಕಿಸ್ಥಾನ ಬೇಜವಾಬ್ದಾರಿ ತೋರಿಸುತ್ತಿದೆ. ವೈದ್ಯಕೀಯ ಸಾಧನಗಳಿಗಾಗಿ ಅದು ಚೀನವನ್ನು ಮಾತ್ರ ಅವಲಂಬಿಸಿದೆ. ಚೀನ ಆರಂಭದಲ್ಲಿ ಬಳಸಿದ ಒಳ ಉಡುಪಿನ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳನ್ನು ಪಾಕಿಸ್ಥಾನಕ್ಕೆ ಪೂರೈಸಿದ ಎಂಬ ಆರೋಪ ಕೇಳಿಬಂದಿತ್ತು. ಎರಡೂ ದೇಶಗಳು ಇದನ್ನು ಅಲ್ಲಗಳೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next