Advertisement

ಪಂಪಾಸರೋವರ ಜೀರ್ಣೋದ್ಧಾರ

05:18 PM Mar 23, 2022 | Team Udayavani |

ಗಂಗಾವತಿ: ದೇಶದ ನಾಲ್ಕು ಪವಿತ್ರ ಸರೋವರಗಳಲ್ಲಿ ಒಂದಾದ ಪಂಪಾ ಸರೋವರಕ್ಕೆ ತನ್ನದೇ ಆದ ಇತಿಹಾಸ, ಮಹತ್ವವಿದೆ. ಈಗಾಗಲೇ ಹಂಪಿಯಲ್ಲಿ ನಾಲ್ಕೈದು ದೇಗುಲಗಳನ್ನು ಜೀರ್ಣೋದ್ಧಾರ ಮಾಡಿರುವ ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಹಾಗೂ ಇತರೆ ದಾನಿಗಳ ಆರ್ಥಿಕ ನೆರವಿನಿಂದ ಮೂಲವಿನ್ಯಾಸಕ್ಕೆ ಧಕ್ಕೆಯಾಗದಂತೆ ರಾಜ್ಯ ಪ್ರಾಚ್ಯವಸ್ತು-ಪುರಾತತ್ವ ಇಲಾಖೆ ಯೋಜನೆಯಂತೆ ಪಂಪಾಸರೋವರ ಜೀರ್ಣೋದ್ಧಾರ ಮಾಡಲಾಗುತ್ತಿದೆ. ವಿಜಯನಗರದ ಅರಸರು ನಿರ್ಮಿಸಿದ್ದ ವಾಲೀಕಿಲ್ಲಾ ಆದಿಶಕ್ತಿ ದೇಗುಲವನ್ನು ಪುನರ್‌ ನಿರ್ಮಿಸುವ ಕಾರ್ಯವೂ ನಡೆದಿದೆ.

Advertisement

ಉತ್ತರ ಭಾರತೀಯರು ಚಾರ್‌ಧಾಮ ಯಾತ್ರೆ ಸಂದರ್ಭದಲ್ಲಿ ಪಂಪಾಸರೋವರಕ್ಕೆ ಬಂದು ಜಲ ಸ್ಪರ್ಶ ಮಾಡಿದಾಗ ಮಾತ್ರ ಯಾತ್ರೆ ಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ಪಂಪಾಸರೋವರದಲ್ಲಿ ಉತ್ತರ ಭಾರತದ ಸಾಧು-ಸಂತರು ರಮಾನಂದ ತೀರ್ಥ ಪರಂಪರೆಯಂತೆ ಪೂಜಾ ವಿಧಿ ವಿಧಾನಗಳನ್ನು ನೂರಾರು ವರ್ಷಗಳಿಂದ ಮಾಡುತ್ತಿದ್ದಾರೆ. ಪಂಪಾಸರೋವರ ಮತ್ತು ಶ್ರೀ ವಿಜಯಲಕ್ಷೀ¾ ದೇಗುಲ ಮಳೆಗಾಳಿಯಿಂದ ಅಲ್ಲಲ್ಲಿ ಶಿಥಿಲಗೊಂಡಿತ್ತು. ಇದೀಗ ಐದು ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿರುವ ಪಂಪಾ ಸರೋವರ ಸ್ವತ್ಛಗೊಳಿಸಿ ಸುತ್ತಲೂ ಅತ್ಯುತ್ತಮ ಕಲ್ಲುಗಳಿಂದ ಮೆಟ್ಟಿಲುಗಳನ್ನು ಹಾಕಿ ಸರೋವರದಲ್ಲಿ ವರ್ಷದ 365 ದಿನ ನೀರು ನಿಲ್ಲುವಂತೆ ಮಾಡಲಾಗುತ್ತಿದೆ. ಪಕ್ಕದಲ್ಲಿರುವ ತುಂಗಭದ್ರಾ(ಪಂಪಾ)ನದಿ ನೀರು ನೈಸರ್ಗಿಕವಾಗಿ ಸರೋವರಕ್ಕೆ ಬರುವ, ಸರೋವರ ತುಂಬಿದ ನಂತರ ಹೊರಗೆ ಹೋಗುವ ಮಾರ್ಗ ನಿರ್ಮಿಸಲಾಗುತ್ತಿದೆ. ಸರೋವರ ಸುತ್ತ ಗಿಡಮರ ಬೆಳೆಸಿ ಪ್ರವಾಸಿಗರು ವೀಕ್ಷಿಸಲು ಬೆಂಚ್‌ಗಳನ್ನು ಹಾಕಲಾಗುತ್ತಿದೆ. ಸರೋವರದ ಸುತ್ತ ತಂತಿ ಜಾಲರಿ ಅಳವಡಿಸಲಾಗುತ್ತಿದೆ.

ಪಂಪಾ ಸರೋವರದಿಂದ ಸುಮಾರು 500 ಮೀಟರ್‌ ದೂರದಲ್ಲಿ ಶ್ರೀವಿಜಯಲಕ್ಷೀ ಮತ್ತು ಈಶ್ವರ ದೇಗುಲಗಳಿದ್ದು ಜತೆಗೆ ಶಬರಿ ಗುಹೆಗೆ ಹೋಗಲು ಮೆಟ್ಟಿಲು ಮಾಡಲಾಗಿತ್ತು. ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಮೊದಲಿಗಿದ್ದ ಕಟ್ಟಡದ ಕಲ್ಲುಗಳನ್ನು ಮಾತ್ರ ಬಳಸಿಕೊಂಡು ಗರ್ಭಗುಡಿ-ಸುತ್ತಲೂ ಕಲ್ಲಿನ ಮಂಟಪ ಪುನರ್‌ ನಿರ್ಮಿಸಲಾಗುತ್ತಿದೆ. ನುರಿತ ವಾಸ್ತುಶಿಲ್ಪ ಕಾಮಗಾರಿ ಮಾಡುವ ಗುತ್ತಿಗೆದಾರನಿಗೆ ಜೀರ್ಣೋದ್ಧಾರ ಕಾಮಗಾರಿ ಜವಾಬ್ದಾರಿ ವಹಿಸಲಾಗಿದೆ. ಪುರಾತತ್ವ ಪ್ರಾಚ್ಯವಸ್ತು ಇಲಾಖೆ ಅಧಿ ಕಾರಿಗಳು ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಒಂದು ವರ್ಷದಲ್ಲಿ ಜೀರ್ಣೋದ್ಧಾರ ಕಾರ್ಯ ಮುಕ್ತಾಯವಾಗಲಿದೆ.

 

Advertisement

ಪಂಪಾಸರೋವರವನ್ನು ನನ್ನ ಕೆಲ ಗೆಳೆಯರ ಆರ್ಥಿಕ ನೆರವಿನಲ್ಲಿ ಜೀರ್ಣೋದ್ಧಾರ ಮಾಡುತ್ತಿದ್ದು, ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಮೊದಲಿದ್ದ ಕಲ್ಲುಗಳನ್ನೇ ಬಳಸಿಕೊಂಡು ಪ್ರಾಚ್ಯವಸ್ತು, ಪುರಾತತ್ವ ಇಲಾಖೆ ಸಲಹೆ-ಸೂಚನೆ ಪಾಲಿಸಿ ಕಾಮಗಾರಿ ನಡೆಯುತ್ತಿದೆ. ಮುಂದಿನ ಪೀಳಿಗೆಗೆ ಇತಿಹಾಸ ಸ್ಮಾರಕಗಳು ಉಳಿಯುವಂತಾಗಲು ದಾನಿಗಳು ಸರಕಾರದ ಪರವಾನಗಿ ಪಡೆದು ಇಂತಹ ಜೀರ್ಣೋದ್ಧಾರ ಕಾರ್ಯ ಮಾಡಬೇಕಿದೆ.

 -ಬಿ. ಶ್ರೀರಾಮುಲು, ಸಾರಿಗೆ ಸಚಿವ.

ಆನೆಗೊಂದಿ ಭಾಗವನ್ನು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ ಮಾಡಿದೆ. ಇಲ್ಲಿಯ ಪುರಾತನ ದೇಗುಲ, ಸ್ಮಾರಕಗಳ ಎದುರು ಸಂರಕ್ಷಿತ ಸ್ಮಾರಕ ಎಂದು ನಾಮಫಲಕ ಹಾಕಿದ್ದು ಬಿಟ್ಟರೆ ಯಾವುದೇ ಜೀರ್ಣೋದ್ಧಾರ ಕಾರ್ಯ ಮಾಡಿಲ್ಲ. ಇದೀಗ ಸಚಿವ ಬಿ. ಶ್ರೀರಾಮುಲು ಪಂಪಾಸರೋವರ ಮತ್ತು ಆದಿಶಕ್ತಿ ದೇಗುಲ ಜೀರ್ಣೋದ್ಧಾರ ಮಾಡುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ.

 -ಎನ್‌. ನರಸಿಂಹಲು, ಸ್ಥಳೀಯರು 

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next