Advertisement

ಪಲಿಮಾರು ಮಠ: ಶೈಲೇಶರಿಗೆ ಇಂದು ಸನ್ಯಾಸದೀಕ್ಷೆ

01:57 AM May 10, 2019 | sudhir |

ಉಡುಪಿ: ಶ್ರೀ ಪಲಿಮಾರು ಮಠದ ಕಿರಿಯ ಪಟ್ಟಕ್ಕೆ ಆಯ್ಕೆಯಾಗಿರುವ ಕಂಬಳಕಟ್ಟದ ಶೈಲೇಶ ಉಪಾಧ್ಯಾಯ ಅವರು ಶುಕ್ರವಾರ ಸನ್ಯಾಸಾಶ್ರಮವನ್ನು ಶ್ರೀಕೃಷ್ಣ ಮಠದ ಆವರಣದಲ್ಲಿ ಸ್ವೀಕರಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ಅವರು ತಂದೆ, ತಾಯಿ ಮತ್ತು ತನಗೆ ಶ್ರಾದ್ಧಾದಿಗಳನ್ನು (ಆತ್ಮಶ್ರಾದ್ಧ) ನಡೆಸಿದರು. ಬಳಿಕ ಗೋಪೂಜೆ, ಗೋದಾನವನ್ನು ಮಾಡಿದರು. ಪ್ರಾಯಶ್ಚಿತ್ತರೂಪವಾಗಿ ದಾನ, ದಕ್ಷಿಣೆಗಳನ್ನು ನೀಡಿದರು.

Advertisement

ಸನ್ಯಾಸಾಶ್ರಮ ಸ್ವೀಕಾರ ಪ್ರಕ್ರಿಯೆಯ ಭಾಗವಾಗಿ ಕೇಶ ಮುಂಡನ, ಮಧ್ವಸರೋವರದಲ್ಲಿ ಸ್ನಾನ ನೆರವೇರಿತು. ರಾತ್ರಿ ಶಾಕಲ ಸಂಹಿತೆಯ ಮಂತ್ರದ ಹೋಮ ನಡೆಸಲಾಯಿತು. ಶೈಲೇಶರು ರಾತ್ರಿ ಉಪವಾಸವಿದ್ದು, ಜಾಗರಣೆ ನಡೆಸಿದರು. ಗುರುವಾರ ಸಾಮಾನ್ಯ ವಸ್ತ್ರ ಧಾರಿಯಾಗಿದ್ದ ಅವರು ಶುಕ್ರವಾರ ಬೆಳಗ್ಗೆ ಯತಿಧರ್ಮದಂತೆ ಕಾಷಾಯ ವಸ್ತ್ರವನ್ನು ಧರಿಸುವರು. ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶೈಲೇಶರಿಗೆ ಪ್ರಣವ ಮಂತ್ರೋಪದೇಶ ನಡೆಸುವರು.

ಮುಂದಿನ ವಿಧಿಗಳ ಅಂಗವಾಗಿ ಶನಿವಾರ ವಾಯುಸ್ತುತಿ ಪುರಶ್ಚರಣೆ, ವಿವಿಧ ಹೋಮಗಳನ್ನು ನಡೆಸಲಾಗುವುದು. ರವಿವಾರದ ವರೆಗೆ ಶೈಲೇಶರು ಕೇವಲ ಸನ್ಯಾಸಿಯಾಗಿರು ತ್ತಾರೆ. ರವಿವಾರ ಅವರನ್ನು ಇತರ ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನೇಮಿಸಲಾಗುತ್ತದೆ.

ಈ ಪ್ರಕ್ರಿಯೆಯಂತೆ ಮಠದಲ್ಲಿ ಶತಮಾನಗಳಿಂದ ಪೂಜೆಗೊಂಡ ಸಾಲಿಗ್ರಾಮ, ವಿಗ್ರಹಗಳನ್ನು ಹರಿವಾಣ ದಲ್ಲಿರಿಸಿ, ಅದನ್ನು ಶೈಲೇಶರ ತಲೆಯ ಮೇಲಿರಿಸಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅಭಿಷೇಕ ನಡೆಸುತ್ತಾರೆ. ಅಭಿಷೇಕಗೊಂಡ ತೀರ್ಥವು ಶೈಲೇಶರ ದೇಹಪೂರ್ತಿ ನೆನೆಯಿಸಿದ ಬಳಿಕ ಅವರು ಪಲಿಮಾರು ಮಠದ ಕಿರಿಯ ಪಟ್ಟ ಎನಿಸಿಕೊಳ್ಳುವರು.

ದಂಡ ರಚನ ಕಲೆ
ಸನ್ಯಾಸ ಸ್ವೀಕರಿಸಿ ಯತಿಗಳಾಗುವವರಿಗೆ ದಂಡಧಾರಣೆ ಕಡ್ಡಾಯ. ಮೂಲದಲ್ಲಿ ಇದು ಬಿದಿರಿನ ಕೋಲು. ಇದು ಯತಿಗಳ ದಂಡ ವಾಗುವುದು ರೇಷ್ಮೆ ದಾರದಿಂದ ಶಂಖ ಚಕ್ರಗಳನ್ನು ರಚಿಸಿದ ಜೋಳಿಗೆ ಯನ್ನು ಜೋಡಿಸಿದ ಬಳಿಕ. ಈ ದಂಡ ಕೊನೆಯವರೆಗೂ ಯತಿಗಳ ಜತೆ ಇರಬೇಕು. ಪ್ರಮಾದವಶಾತ್‌ ಭಿನ್ನವಾದರೆ ಮೂರು ದಿನಗಳ ಉಪವಾಸಾದಿ ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳಬೇಕೆನ್ನುವುದು ಶಾಸ್ತ್ರಸಂಹಿತೆ. ಈ ದಂಡವನ್ನು ಕಟ್ಟುವ ಕಲೆ ಗೊತ್ತಿರುವುದು ಉಡುಪಿಯಲ್ಲಿ ಇಬ್ಬರು ಮೂವರಿಗೆ ಮಾತ್ರ. ಅವರಲ್ಲಿ ಒಬ್ಬರು ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು. ಪಲಿಮಾರು ಮಠದ ನೂತನ ಯತಿಗಳ ದಂಡವನ್ನೂ ಸೋದೆ ಸ್ವಾಮೀಜಿಯವರೇ ರಚಿಸಿದ್ದು, ಅದನ್ನು ನೂತನ ಯತಿ ಶುಕ್ರವಾರ ಸ್ವೀಕರಿಸುವರು.

Advertisement

ಮೇ 12: ಮಂಗಲ ಭಾರತ ನಿರ್ಮಾಣ ಅಭಿಯಾನ
ಉಡುಪಿ: ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶೈಲೇಶ ಉಪಾಧ್ಯಾಯ ಅವರು ನೇಮಕಗೊಳ್ಳುವ ದಿನ ಮೇ 12ರಂದು ಶ್ರೀಕೃಷ್ಣಮಠ, ಶ್ರೀ ಪಲಿಮಾರು ಮಠಕ್ಕೆ ಮಾತ್ರ ಮಂಗಲವನ್ನು ಬಯಸುವುದಲ್ಲ, ಬದಲಾಗಿ
ದೇಶಕ್ಕೆ ಬರುವ ನೂತನ ಪ್ರಧಾನಮಂತ್ರಿಗಳಿಗೂ ಅಂದರೆ ರಾಷ್ಟ್ರಕ್ಕೂ
ಒಳಿತಾಗ ‌ಲೆಂದು “ಮಂಗಲ ಭಾರತ ನಿರ್ಮಾಣ’ ಕಲ್ಪನೆಯಡಿ “ಮಂಗಲಾಷ್ಟಕ’ವನ್ನು ಸಾಮೂಹಿಕವಾಗಿ ಪಠಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next