Advertisement

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಅಭಿವಂದನೆ

10:09 AM Jan 19, 2020 | mahesh |

ಉಡುಪಿ: ಶ್ರೀಕೃಷ್ಣ ಮಠದಲ್ಲಿ 2 ವರ್ಷಗಳ ಕಾಲ ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ಪೂರೈಸಿದ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರನ್ನು ಶುಕ್ರವಾರ ರಾತ್ರಿ ಪೂರ್ಣಪ್ರಜ್ಞ ಮಂಟಪದಲ್ಲಿ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗವು ಅಭಿವಂದಿಸಿತು.

Advertisement

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಎರಡು ವರ್ಷಗಳಲ್ಲಿ ನಡೆಸಿದ ಸ್ವರ್ಣ ಗೋಪುರ ಸಮರ್ಪಣೆ, ನಿತ್ಯ ಲಕ್ಷ ತುಳಸೀ ಅರ್ಚನೆ, ಅಖಂಡ ಭಜನೆ ಇತ್ಯಾದಿ ಯೋಜನೆಗಳು ಅಭೂತಪೂರ್ವವಾಗಿವೆ. ಅವರ ವಿದ್ಯಾಪ್ರೀತಿ ಅದ್ವಿತೀಯವಾಗಿದೆ. ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಪರಿಸರ ಕಾಳಜಿ ವಹಿಸುವ ಸ್ವಾಮೀಜಿಯವರಾಗಿದ್ದಾರೆ ಎಂದು ಅಭಿವಂದನ ಭಾಷಣ ಮಾಡಿದ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ|ಸತ್ಯನಾರಾಯಣ ಆಚಾರ್ಯ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್‌, ಹಿಂದಿನ ಎಸ್‌ಪಿ ಅಣ್ಣಾಮಲೈ ಶುಭ ಕೋರಿದರು.

ನಾವೇನೂ ಸಾಧನೆ ಮಾಡಲಿಲ್ಲ. ನಾವು ಪರ್ಯಾಯ ಕೂರುವಾಗ ಏನೂ ತಂದಿರಲಿಲ್ಲ. ದೇವರು ಭಕ್ತರಿಗೆ ಪ್ರೇರಣೆ ನೀಡಿ ಮಾಡಿಸಿಕೊಂಡಿದ್ದಾನೆ. ನೀವು ಕೊಟ್ಟ ಎಲ್ಲ ಅಭಿವಂದನೆಗಳನ್ನು ಶನಿವಾರ ಬೆಳಗ್ಗೆ ಕೊನೆಯ ಪೂಜೆಯಲ್ಲಿ ಸಮರ್ಪಿಸುತ್ತೇನೆ ಎಂದು ಪಲಿಮಾರು ಶ್ರೀಪಾದರು ಹೇಳಿದರು.

ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸಲು, ನಮಗೆ ಬೇಕಾದ ನೀರನ್ನು ನಾವು ಸಂಗ್ರಹಿಸಿಕೊಳ್ಳಬೇಕಾದರೆ ಭಾಗವತದ ಚಿಂತನೆ ನಡೆಸಬೇಕು. ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಂಡು ಬದುಕಿದರೆ ಎಲ್ಲ ಸಂಪತ್ತು ಉಳಿಯುತ್ತದೆ. ಪ್ರಕೃತಿ ದೇವರು ಕೊಟ್ಟ ದೊಡ್ಡ ಸಂಪತ್ತು. ಇದನ್ನು ಉಳಿಸಿಕೊಳ್ಳಲು ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸ್ವೀಕಾರ, ಉತ್ತಮ ವಾದುದನ್ನು ಕೇಳುವ, ನೋಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಎಲ್ಲ ಸಾಧನೆಗಳನ್ನು ದೇವರು ಮಾಡಿಸುತ್ತಿದ್ದಾನೆಂಬ ಭಾವ ಎಲ್ಲರಲ್ಲಿ ಇದ್ದರೆ ದೇಶ ಉದ್ಧಾರ ಆಗುತ್ತದೆ ಎಂದು ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಹೇಳಿದರು.

ಪಲಿಮಾರು ಮಠದ 2 ತಲೆಮಾರು ಹಿಂದಿನ ಶ್ರೀ ರಘುಮಾನ್ಯತೀರ್ಥರು ತಮ್ಮ ತಾತ ಜಯಚಾಮರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿ ಅರಮನೆಯಲ್ಲಿ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿರುವುದು, ಶ್ರೀ ಅದಮಾರು ಮಠದ ಶ್ರೀ ವಿಬುಧೇಶತೀರ್ಥರ ಕಾಲದಲ್ಲಿ ತಾತ ಬಂದಿರುವುದನ್ನು ಮೈಸೂರು ರಾಜ ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ನೆನಪಿಸಿಕೊಂಡರು.

Advertisement

ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಎಸ್‌ಪಿ ವಿಷ್ಣುವರ್ಧನ್‌, ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌, ಅದಮಾರು ಮಠದ ದಿವಾನ್‌ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕೃಷ್ಣಸೇವಾ ಬಳಗದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಸ್ವಾಗತಿಸಿ, ಪ್ರೊ| ಶಂಕರ್‌ ವಂದಿಸಿದರು. ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ| ಟಿ.ಎಸ್‌. ರಮೇಶ್‌ ನಿರ್ವಹಿಸಿದರು. ಶ್ರೀಕೃಷ್ಣ ಸೇವಾ ಬಳಗದ ಪದಾಧಿಕಾರಿಗಳು, ತುಳು ಶಿವಳ್ಳಿ ಮಾಧ್ವ ಮಹಾಮಂಡಲದಿಂದ ಅಭಿನಂದಿಸಲಾಯಿತು. ಕೃಷ್ಣರಾಜ ಭಟ್‌ ಕುತ್ಪಾಡಿ ಅಭಿನಂದನ ಪತ್ರ ವಾಚಿಸಿದರು.

ಪಲಿಮಾರು ಪರ್ಯಾಯ ಗಮನ ಸೆಳೆದ “ಸೂರೆ’
ಪರ್ಯಾಯದ ಕೊನೆಯ ದಿನ ನಡೆಯುವ “ಸೂರೆ’ ಆಚರಣೆ ಶುಕ್ರವಾರ ನಡೆಯಿತು. ಮಧ್ಯಾಹ್ನದ ಅನ್ನ ಸಂತರ್ಪಣೆ ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಭಕ್ತರು “ಸೂರೆ’ ಮಾಡಿದರು. ಕೆಲವೇ ನಿಮಿಷ ಗಳಲ್ಲಿ ಎಲ್ಲ ಆಹಾರ ಪದಾರ್ಥ ಖಾಲಿ ಆಯಿತು.

ಅಂತಿಮ ಅನ್ನಸಂತರ್ಪಣೆ
ಪಲಿಮಾರು ಪರ್ಯಾಯ ಅಂತಿಮ ದಿನದ ಅನ್ನಸಂತರ್ಪಣೆಯ ಅಂಗವಾಗಿ ಶುಕ್ರವಾರ ಭಕ್ತರಿಗೆ ಮಧ್ಯಾಹ್ನ 12 ಗಂಟೆಯಿಂದ ಕೃಷ್ಣ ಪ್ರಸಾದಕ್ಕೆ ಅವಕಾಶ ಕಲ್ಪಿಸಲಾಯಿತ್ತು. ರಾಜಾಂಗಣ, ಅನ್ನ ಬ್ರಹ್ಮ, ಬಡಗುಮಾಳಿಗೆ ಸೇರಿದಂತೆ ವಿವಿಧ ಕಡೆಯಲ್ಲಿ ನೂರಾರು ಸ್ವಯಂಸೇವಕರು ಕೃಷ್ಣ ಪ್ರಸಾದ ವಿತರಿಸುತ್ತಿರುವ ದೃಶ್ಯಗಳು ಕಂಡು ಬಂದವು. ಸುಮಾರು 20 ಸಾವಿರ ಭಕ್ತರು ಕೃಷ್ಣ ಪ್ರಸಾದ ಸ್ವೀಕರಿಸಿದರು.

ವಿದೇಶೀಯರು ಸಾಕ್ಷಿ
ಶ್ರೀ ಅದಮಾರು ಪರ್ಯಾಯೋತ್ಸ ವವನ್ನು ವೀಕ್ಷಿಸಲು ನೂರಾರು ವಿದೇಶೀ ಯರು ಆಗಮಿಸಿದ್ದರು.
ಹಬ್ಬದ ವಾತಾವರಣ ಸಂತಸ ತಂದಿದೆ. ಇಲ್ಲಿನ ಸಂಸ್ಕೃತಿ, ಆಹಾರ ಉಡುಗೆ-ತೊಡುಗೆಗಳು ಬಹಳ ಆಕರ್ಷಿಸಿದೆ ಎಂದು ಫ್ರಾನ್ಸ್‌ ಪ್ರಜೆ ಡೊಮಿನಿಕ್‌ ಅಮೆಂಡಲಾ ಹೇಳಿದರು. ದೀಪಗಳ ಅಲಂಕಾರ ತುಂಬಾ ಚೆನ್ನಾಗಿದೆ. ನಮ್ಮಲ್ಲಿ ಇಂಥದ್ದು ಕಾಣಸಿಗದು ಎಂದು ಇಂಗ್ಲಂಡ್‌ನ‌ ಬುಕ್ಕಿ ಎಂಬವರು ತಿಳಿಸಿದರು.

ನಾವೇನೂ ಸಾಧನೆ ಮಾಡಲಿಲ್ಲ. ನಾವು ಪರ್ಯಾಯ ಕೂರುವಾಗ ಏನೂ ತಂದಿರಲಿಲ್ಲ. ದೇವರು ಭಕ್ತರಿಗೆ ಪ್ರೇರಣೆ ನೀಡಿ ಮಾಡಿಸಿಕೊಂಡಿದ್ದಾನೆ. ಅವೆಲ್ಲವನ್ನೂ ದೇವರಿಗೆ ಸಮರ್ಪಿಸುತ್ತೇನೆ.
-ಪಲಿಮಾರುಶ್ರೀ

Advertisement

Udayavani is now on Telegram. Click here to join our channel and stay updated with the latest news.

Next