Advertisement

ಜಂಬೂ ಸವಾರಿಗೆ ಅರಮನೆ ನಗರಿ ಸಜ್ಜು

12:34 AM Oct 07, 2019 | sudhir |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಯಾಗಿರುವ ಜಂಬೂ ಸವಾರಿ ಮೆರವಣಿಗೆಗೆ ಇನ್ನೊಂದೇ ದಿನ ಬಾಕಿ ಇದ್ದು, ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು ಬರುವ ದೇಶ-ವಿದೇಶಗಳ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಅರಮನೆ ನಗರಿ ಸಜ್ಜಾಗಿದೆ.

Advertisement

ಜಂಬೂ ಸವಾರಿಗೆ ಲಕ್ಷಾಂತರ ಜನರು ಸೇರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ 8 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ 3 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕೆಮರಾ ಅಳವಡಿಸಿ ಹದ್ದಿನ ಕಣ್ಣಿಡಲಾಗಿದೆ.

ಜಂಬೂ ಸವಾರಿ ಮೆರವಣಿಗೆಗಾಗಿ ಕಾಡಿನಿಂದ ಕರೆ ತರಲಾಗಿರುವ ಅರ್ಜುನ ನೇತೃತ್ವದ ಗಜಪಡೆಗೆ ಕಳೆದ ಒಂದೂವರೆ ತಿಂಗಳಿಂದ ವಿವಿಧ ರೀತಿಯ ತಾಲೀಮು ನಡೆಸಿ ಸಜ್ಜುಗೊಳಿಸಲಾಗಿದೆ. ಸೆ.29ರಂದು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಡಾ| ಎಸ್‌.ಎಲ್‌. ಭೈರಪ್ಪ ಅವರು ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಈ ವರ್ಷದ ದಸರಾ ಮಹೋತ್ಸವ ಆರಂಭಗೊಂಡಿತ್ತು.

ಸಿಎಂ ಯಡಿಯೂರಪ್ಪ ಚಾಲನೆ
ಮಂಗಳವಾರ ಅಪರಾಹ್ನ 2.15ರಿಂದ 2.58ರ ನಡುವಿನ ಮಕರ ಲಗ್ನದಲ್ಲಿ ಮೈಸೂರಿನ ಶ್ರೀ ಗೌರಿಶಂಕರ ನಂದಿಧ್ವಜ ಸಂಘದವರು ತರುವ ಸುವರ್ಣ ಪಂಚಕಲಶದ ನಂದಿ ಧ್ವಜಕ್ಕೆ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಸಂಜೆ 4.31ರಿಂದ 4.57ರ ವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅರ್ಜುನ ಹೊತ್ತುತರುವ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ವಿಜಯದಶಮಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೈಸೂರು ಮಹಾ ನಗರಪಾಲಿಕೆ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ, ನಗರಪೊಲೀಸ್‌ ಆಯುಕ್ತರು ಈ ಸಂದರ್ಭದಲ್ಲಿ ಹಾಜರಿರುತ್ತಾರೆ.

Advertisement

ಕಲಾ ತಂಡಗಳಿಂದ ಪ್ರದರ್ಶನ
ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ನೈಸರ್ಗಿಕ ಸಂಪತ್ತು, ಸರಕಾರದ ಅಭಿವೃದ್ಧಿ ಕೆಲಸಗಳು, ಜನಪರ ಯೋಜನೆಗಳನ್ನು ಬಿಂಬಿಸುವ 39 ಸ್ತಬ್ಧಚಿತ್ರಗಳ ಜತೆಗೆ ನಂದಿಕಂಬ, ಡೊಳ್ಳುಕುಣಿತ, ಗೊರವರ ಕುಣಿತ,
ಬೀಸು ಕಂಸಾಳೆ, ಪಟ ಕುಣಿತ, ಪೂಜಾ ಕುಣಿತ, ಮರಗಾಲು, ವೀರಗಾಸೆ, ವೀರಭದ್ರಕುಣಿತ ಸಹಿತ ನೂರಕ್ಕೂ ಹೆಚ್ಚು ಕಲಾತಂಡಗಳು, ಎನ್‌ಎಸ್‌ಎಸ್‌,
ಎಸ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌, ವಿವಿಧ ಪೊಲೀಸ್‌ ಪಡೆಗಳು, ಅಶ್ವಾರೋಹಿ ಪಡೆ ಗಳು, ಆನೆಗಾಡಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಅರ್ಜುನ ಕೇಂದ್ರಬಿಂದು
ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು, ಲಕ್ಷಾಂತರ ಜನರ ಮಧ್ಯೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ, ಅರಮನೆ ಆವರಣದಿಂದ ಬನ್ನಿಮಂಟಪ ಮೈದಾನದವರೆಗೆ ಸುಮಾರು 5 ಕಿ.ಮೀ. ದೂರ ಸಾಗುವ ಅರ್ಜುನ ಆನೆಯೇ ಇಡೀ ಜಂಬೂ ಸವಾರಿಯ ಕೇಂದ್ರಬಿಂದು. ಅಂಬಾರಿ ಕಂಡ ಕೂಡಲೇ ಜನರು ಭಕ್ತಿಭಾವದಿಂದ ಕೈಮುಗಿದು, ಚಾಮುಂಡೇಶ್ವರಿಗೆ ಜೈಕಾರ ಕೂಗಿ ಧನ್ಯಾತಾ ಭಾವ ತೋರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next