ಕುಲಭೂಷಣ್ ಜಾಧವ್ ಒಬ್ಬ ಭಾರತೀಯ ಗೂಢಚರ ಎಂಬುದನ್ನು ಸಾಬೀತುಪಡಿಸಲು ಪಾಕ್ ಅನುಸರಿಸುತ್ತಿರುವ ಲಜ್ಜೆಗೇಡಿ ಸುಳ್ಳಿನ ದಾರಿ ಎಂಥವರಿಗೂ ಅರ್ಥವಾಗುವಂತಿದೆ. ಪಾಕಿಸ್ತಾನದ ಕುಟಿಲ ನೀತಿ, ದುರಹಂಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಕ ಶಾಸ್ತಿಯಾಗಬೇಕು.
ಭಾರತದ ನಿವೃತ್ತ ಯೋಧ ಕುಲಭೂಷಣ್ ಜಾಧವ್ ಮೇಲೆ ಬೇಹುಗಾರಿಕೆಯ ಆರೋಪ ಹೊರಿಸಿ ಗಲ್ಲಿಗೇರಿಸಲು ಮುಂದಾಧಿಗಿರುವುದು ಪಾಕಿಸ್ಥಾನದ ನೀಚತನದ ಪರಮಾವಧಿ. ಉಗ್ರರನ್ನು ಛೂ ಬಿಡುವ, ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುವಂತಹ ಕೃತ್ಯಗಳ ಮೂಲಕ ಘಾಸಿ ಮಾಡುತ್ತಿರುವ ಪಾಕ್ ಈಗ ನಾಗರಿಕನನ್ನು ಸುಳ್ಳು ಆರೋಪ ಹೊರಿಸಿದ ಬಳಿಕ ವಿಚಾರಣೆಯ ನಾಟಕವಾಡಿ ಸಾಯಿಸಲು ಮುಂದಾಗಿರುವುದು ಭಾರತಕ್ಕೆ ಒಡ್ಡಿರುವ ಬಹಿರಂಗ ಸವಾಲು. ಜಾಧವ್‌ರನ್ನು ಗಲ್ಲಿಗೇರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಭಾರತ ಖಡಕ್ ಎಚ್ಚರಿಕೆ ನೀಡಿದ್ದರೂ ಪಾಕಿಸ್ತಾನ ಇದಕ್ಕೆ ಸೊಪ್ಪು ಹಾಕುವ ಸಾಧ್ಯತೆಯಿಲ್ಲ.
ಭಾರತದ ವಿರುದ್ಧ ಸೇಡು ತೀರಿಸಲು ಕುಟಿಲ ತಂತ್ರಗಳನ್ನು ಹೆಣೆಯುತ್ತಿರುವ ಪಾಕಿಸ್ತಾನದ ಸೇನೆಗೆ ಇಂತಹ ಎಚ್ಚರಿಕೆಗಳೆಲ್ಲ ನಾಟುವುದಿಲ್ಲ ಎನ್ನುವುದಕ್ಕೆ ಹಿಂದಿನ ಹಲವು ದೃಷ್ಟಾಂತಗಳಿವೆ. ಹೀಗಾಗಿ ಪಾಕಿಸ್ತಾನಕ್ಕೆ ಅರ್ಥವಾಗುವಂತಹ ರೀತಿಯಲ್ಲಿ ಈ ಪ್ರಕರಣವನ್ನು ನಿಭಾಯಿಸುವ ಅಗತ್ಯವಿದೆ.
ನೌಕಾಪಡೆಯಲ್ಲಿ 14 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಾಧವ್ ಪಾಕ್-ಇರಾನ್ ಗಡಿಭಾಗದಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ದಿಢೀರ್ ಎಂದು ಪಾಕಿಸ್ತಾನ ಅವರನ್ನು ಬಂಧಿಸಿದ್ದೇನೆ ಎಂದು ಘೋಷಿಸಿತು. ಬಲೂಚಿಸ್ತಾನದಲ್ಲಿ ರಾ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂಬ ಆರೋಪವನ್ನು ಅವರ ಮೇಲೆ ಹೊರಿಸಿತು. ಆದರೆ ಜಾಧವ್ ಬಲೂಚಿಸ್ತಾನದಲ್ಲಿ ಇರಲೇ ಇಲ್ಲ. ಪಾಕ್ ಬೇಹುಪಡೆ ಐಎಸ್‌ಐ ಅವರನ್ನು ಇರಾನ್ ಗಡಿಯಿಂದ ಅಪಹರಿಸಿ ಸೇನೆಯ ಕೈಗೊಪ್ಪಿಸಿದೆ ಎನ್ನಲಾಗುತ್ತಿದೆ. ಹೀಗೆ ಸೆರೆಯಾದ ಜಾಧವ್‌ರನ್ನು ಸೇನೆ ಕಸ್ಟಡಿಯಲ್ಲಿಟ್ಟು ಚಿತ್ರಹಿಂಸೆ ನೀಡಿದೆ. ಕೆಲವು ಹೇಳಿಕೆಗಳು ಹೊರತುಪಡಿಸಿದರೆ ಬೇರೆ ಯಾವುದೇ ಪುರಾವೆ ಇಲ್ಲ. ಈ ವಿಚಾರವನ್ನು ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರೇ ಹೇಳಿದ್ದಾರೆ. ಇದಲ್ಲದೆ ಭಾರತ ಸರಕಾರ ದೂತವಾಸದ ಮೂಲಕ ಜಾಧವ್‌ರನ್ನು ಸಂಪರ್ಕಿಸಲು 13 ಸಲ ಮಾಡಿದ ರಾಜತಾಂತ್ರಿಕ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ. ಜಾಧವ್ ತಪ್ಪೊಪ್ಪಿಗೆ ಹೇಳಿಕೆ ಎಂದು ಹೇಳಿಕೊಂಡಿರುವ 6 ನಿಮಿಷಗಳ ವೀಡಿಯೊ ಮಾತ್ರ ಪಾಕ್ ಬಳಿಯಿರುವ ಸಾಕ್ಷ್ಯ. ಆದರೆ ಈ ವೀಡಿಯೊವನ್ನು ತಿರುಚಲಾಗಿದೆ ಎನ್ನುವುದು ಅದನ್ನು ನೋಡಿದಾಗಲೇ ತಿಳಿಯುತ್ತದೆ. 6 ನಿಮಿಷದ ವಿಡಿಯೊದಲ್ಲಿ 100ಕ್ಕೂ ಹೆಚ್ಚು ಕಟ್‌ಗಳಿರುವುದೇ ಅದರ ಸಾಚಾತನ ಏನು ಎನ್ನುವುದನ್ನು ತಿಳಿಸುತ್ತದೆ.
ಗೂಢಚಾರನಾಗಿ ಕೆಲಸ ಮಾಡುವ ವ್ಯಕ್ತಿ ತನ್ನ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವ ಪಾಸ್‌ಪೋರ್ಟ್ ಏಕೆ ಇಟ್ಟುಕೊಂಡಿರುತ್ತಾನೆ ಎಂಬ ಸರಳ ಪ್ರಶ್ನೆಗೂ ಪಾಕಿಸ್ತಾನದ ಬಳಿ ಉತ್ತರವಿಲ್ಲ. ಪಾಕಿಸ್ತಾನ ವಿಚಾರದಲ್ಲಿ ಯಾವುದನ್ನೂ ನಂಬುವಂತಿಲ್ಲ. ಬೆನ್ನಿಗಿರಿಯುವುದು ಆ ದೇಶದ ಜನ್ಮಜಾತ ಬುದ್ಧಿ. ಹಿಂದೆ ಸರಬ್ಜಿತ್ ಪ್ರಕರಣದಲ್ಲೂ ಹೀಗೆ ವರ್ತಿಸಿ ಕೊನೆಗೆ ಅವರ ಶವ ರವಾನಿಸಿತ್ತು.
ಜಾಧವ್‌ಗೆ ಈ ಗತಿಯಾಗಬಾರದೆಂಬ ಕಾಳಜಿ ಪ್ರತಿಯೊಬ್ಬ ಭಾರತೀಯನದ್ದು. ಪಾಕ್ ಸೇನಾ ಕೋರ್ಟ್ ಮಾರ್ಷಲ್‌ನಲ್ಲಿ ಆರೋಪಿಗೆ ತನ್ನ ಪರವಾಗಿ ವಾದ ಮಂಡಿಸಲು ಅವಕಾಶ ನೀಡದೆ ಏಕಪಕ್ಷೀಯವಾಗಿ ತೀರ್ಪು ನೀಡಿರುವುದು ಸಹಜ ನ್ಯಾಯದಾನಕ್ಕೆ ವಿರುದ್ಧವಾಗಿರುವ ಕ್ರಮ ಮತ್ತು ಪೂರ್ವಯೋಜಿತ ಕೊಲೆ ಎಂದು ಭಾರತವೇನೋ ಕಟು ಶಬ್ದಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಿದೆ. ಪಾಕ್ ರಾಯಭಾರಿಯನ್ನು ಕರೆದು ಛೀಮಾರಿ ಹಾಕುವ ಕೆಲಸವನ್ನೂ ಮಾಡಿದೆ. ಆದರೆ ಇದ್ಯಾವುದಕ್ಕೂ ಜಗ್ಗದ ಪಾಕಿಸ್ತಾನ ಈಗ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸೇನೆ ಸಮರ್ಥವಾಗಿದೆ ಎಂದು ಎದಿರೇಟು ನೀಡಿರುವುದು ಅದರ ದುರಹಂಕಾರವನ್ನು ತೋರಿಸುತ್ತದೆ.
ಭಾರತದಲ್ಲಿ ಸಂಭವಿಸಿದ ಒಂದೆರಡು ಪ್ರಕರಣಗಳ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಗಂಟಲು ಹರಿಯುವಂತೆ ಬೊಬ್ಬಿರಿಯುವ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಮತ್ತು ಎನ್‌ಜಿಒಗಳು ಈಗ ಏಕೆ ಮಾತನಾಡುತ್ತಿಲ್ಲ? ಜಾಧವ್ ಪ್ರಕರಣ ಈಗಾಗಲೇ ಹಳಸಿರುವ ಭಾರತ-ಪಾಕಿಸ್ತಾನ ಸಂಬಂಧವನ್ನು ಇನ್ನಷ್ಟು ಹದಗೆಡಿಸಿದೆ.
ಅಂತಾರಾಷ್ಟ್ರೀಯ ಒತ್ತಡ ಹೇರಿ ಜಾಧವ್‌ರನ್ನು ಸುರಕ್ಷಿತವಾಗಿ ವಾಪಸು ತರಲು ಭಾರತ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಹೊರತಾಗಿಯೂ ಜಾಧವ್‌ರನ್ನು ಸಾಯಿಸಿದರೆ ಭಾರತ ಸುಮ್ಮನಿರುವುದು ಸಾಧ್ಯವಿಲ್ಲ. ಬುದ್ಧಿಗೇಡಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಾಧ್ಯತೆಯನ್ನು ಎಂದಿಗೂ ಮುಕ್ತವಾಗಿಟ್ಟುಕೊಳ್ಳಬೇಕು.