ನವದೆಹಲಿ:ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಭಾರತೀಯ ಸೇನಾ ಪಡೆ ಭದ್ರತೆಯನ್ನು ಹೆಚ್ಚಿಸಿದ ಪರಿಣಾಮ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಪಾಕಿಸ್ತಾನಕ್ಕೆ ತಲೆನೋವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಐಎಸ್ ಐ ಇದೀಗ ನೇಪಾಳದಲ್ಲಿ ನೆಲೆಕಂಡುಕೊಳ್ಳುವ ಮೂಲಕ ಉಗ್ರ ಚಟುವಟಿಕೆ ನಡೆಸಲು ಮುಂದಾಗಿದೆ ಎಂದು ಆಂಗ್ಲ ವೆಬ್ ಸೈಟ್ ವರದಿ ಮಾಡಿದೆ.
ಗುಪ್ತಚರ ವರದಿ ಪ್ರಕಾರ, ಕಳೆದ ಕೆಲವು ತಿಂಗಳಿನಿಂದ ನೇಪಾಳದಲ್ಲಿ ಉಗ್ರಗಾಮಿ ಸಂಘಟನೆಯ ಕಮಾಂಡರ್ಸ್ ಗಳು ಮತ್ತು ಐಎಸ್ ಐ ಏಜೆಂಟರುಗಳು ಮಾತುಕತೆ ನಡೆಸಿರುವುದಾಗಿ ತಿಳಿಸಿದೆ. ಜೀ ನ್ಯೂಸ್ ಗೆ ಮೂಲಗಳು ತಿಳಿಸಿರುವ ಪ್ರಕಾರ, ಜಮ್ಮು-ಕಾಶ್ಮೀರದಿಂದ ಇಬ್ಬರು ಉಗ್ರರು ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನೇಪಾಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಐಎಸ್ ಐ ಆಯೋಜಿಸಿದ್ದ ಸಭೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉನ್ನತ ಕಮಾಂಡರ್ ಗಳ ಜೊತೆ ಚರ್ಚಿಸಿರುವುದಾಗಿ ವಿವರಿಸಿದೆ.
ಮಾತುಕತೆ ವೇಳೆ ಜಮ್ಮು-ಕಾಶ್ಮೀರದ ಉಗ್ರರು ಮೂವರು ಹೊಸ ಉಗ್ರರನ್ನು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಪರಿಚಯಿಸಿದ್ದಾರೆನ್ನಲಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಐದು ಮಂದಿ ಉಗ್ರರನ್ನು ಜಮ್ಮು-ಕಾಶ್ಮೀರದಿಂದ ಕಳುಹಿಸಿದ್ದು, ಇವರಿಗೆ ಭಾರತ ವಿರುದ್ಧ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗುವಂತೆ ಸೂಚನೆ ನೀಡಿದ್ದಾರೆಂದು ವರದಿ ವಿವರಿಸಿದೆ.
ಭಾರತೀಯ ಭದ್ರತಾ ಪಡೆ ಮೇಲೆ ದಾಳಿ ನಡೆಸುವಂತೆ ಐಎಸ್ ಐ ಉಗ್ರರಿಗೆ ಸೂಚನೆ ನೀಡಿದ್ದು, ಏತನ್ಮಧ್ಯೆ ಭಾರತೀಯ ಸೇನಾಪಡೆ ಮತ್ತು ಗುಪ್ತಚರ ಇಲಾಖೆ ಸೂಕ್ಷ್ಮವಾಗಿ ಈ ಬೆಳವಣಿಗೆಯನ್ನು ಗಮನಿಸುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ನೇಪಾಳದ ಮೂಲಕ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವುದು ಐಎಸ್ ಐ ಹೊಸ ತಂತ್ರಗಾರಿಕೆಯಾಗಿದೆ ಎಂದು ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿಯಲ್ಲಿ ಬಿಗಿ ಭದ್ರತೆ ಹೆಚ್ಚಳ ಹಾಗೂ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಹಣಕಾಸು ನೆರವು ನೀಡುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಕಳೆದ ಕೆಲವು ತಿಂಗಳಿನಿಂದ ಜಮ್ಮು-ಕಾಶ್ಮೀರದಿಂದ ಎಷ್ಟು ಮಂದಿ ಉಗ್ರರು ನೇಪಾಳಕ್ಕೆ ತೆರಳಿದ್ದಾರೆಂಬ ಮಾಹಿತಿ ಕಲೆ ಹಾಕಲು ಗುಪ್ತಚರ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ತಿಳಿಸಿದೆ.