ನವದೆಹಲಿ: ಅಂತರ್ಜಾಲ ತಾಣಗಳ ಮೂಲಕ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳಿಗೆ ವೈರಸ್‌ಗಳನ್ನು ಹರಿಬಿಡುವುದು, ಮಾಲ್‌ವೇರ್‌ಗಳನ್ನು ಪರೋಕ್ಷವಾಗಿ ಕಳಿಸಿ, ಮಾಹಿತಿಗಳನ್ನು ಕದಿಯುವುದು ಈಗ ದಿನನಿತ್ಯದ ವಿದ್ಯಮಾನ.
ಈಗ ಪಾಕಿಸ್ತಾನ ಅಂತಹದ್ದೇ ಒಂದು ಮಾಲ್‌ವೇರನ್ನು ವಾಟ್ಸ್‌ಆ್ಯಪ್ ಮೂಲಕ ಹರಿಬಿಟ್ಟು, ಭಾರತೀಯ ಸೇನಾಧಿಕಾರಿಗಳ ಮಾಹಿತಿಗಳನ್ನು ಕದಿಯಲು ಯತ್ನಿಸಿದೆ ಎಂದು ಮೂಲಗಳು ಹೇಳಿವೆ.
ಇಂತಹದ್ದೊಂದು ಆಘಾತಕಾರಿ ಮಾಹಿತಿ ಇದೇ ವರ್ಷದಲ್ಲಿ ಎರಡನೇ ಬಾರಿ ಹೊರಬಿದ್ದಿದೆ. ಕೆಲವು ಸೇನಾಧಿಕಾರಿಗಳ ವಾಟ್ಸ್‌ಆ್ಯಪ್ ಖಾತೆಗೆ
“CSO_SO on Deputation DRDO.apk’ ಹೆಸರಿನ ಅನುಮಾನಾಸ್ಪದ ಫೈಲ್ ಬಂದಿದೆ. ಇದು ಮೂಲತಃ ಇದೇ ವರ್ಷ ಮೇ 26ಕ್ಕೆ ಡಿಆರ್‌ಡಿಒ ಬಿಡುಗಡೆ ಮಾಡಿದ ಮೂಲ ಅರ್ಜಿಯ ನಕಲಿ ಪ್ರತಿ.
ಡಿಆರ್‌ಡಿಒ ಹಲವು ಹುದ್ದೆಗಳಿಗೆ ಭದ್ರತಾ ಅಧಿಕಾರಿಗಳನ್ನು ನೇಮಕ ಮಾಡಲು ಈ ಅರ್ಜಿ ಹೊರಡಿಸಿತ್ತು. ಇದನ್ನು ನಕಲಿ ಮಾಡಿ, ಅದರಲ್ಲಿ ಮಾಲ್‌ವೇರನ್ನು ಹರಿಬಿಟ್ಟು ಭಾರತೀಯ ಅಧಿಕಾರಿಗಳ ಮಾಹಿತಿ ಕದಿಯಲು ಪಾಕ್ ಯತ್ನಿಸಿದೆ. ಇದನ್ನು ಕ್ಲಿಕ್ ಮಾಡಿದ ಕೂಡಲೇ, ಮೊಬೈಲ್, ಕಂಪ್ಯೂಟರ್‌ಗಳು ಮಾಲ್‌ವೇರ್‌ಗೆ ಮಾಹಿತಿಯನ್ನು ಬಿಟ್ಟುಕೊಡುತ್ತವೆ. ಮಾತ್ರವಲ್ಲ ಜರ್ಮನಿಯಲ್ಲಿರುವ ಸರ್ವರ್‌ಗೆ ನೇರವಾಗಿ ಸಂಪರ್ಕ ಸಾಧಿಸುತ್ತವೆ!
ಹಾಗಾಗಿ ಸೇನಾಧಿಕಾರಿಗಳಿಗೆ ಇಂತಹ ಸಾಮಾಜಿಕ ತಾಣಗಳನ್ನು ಬಳಸುವುದರಿಂದ ದೂರ ಇರಿ ಎಂದು ಸ್ಪಷ್ಟ ಆದೇಶವನ್ನು ನೀಡಲಾಗಿದೆ.
11 ಅಧಿಕಾರಿಗಳ ಇಮೇಲ್ ಹ್ಯಾಕ್:
ಇನ್ನೊಂದೆಡೆ, ಸೆಬಿಯ (ಭಾರತೀಯ ಮಾರುಕಟ್ಟೆ ನಿಯಂತ್ರಣ ಮಂಡಳಿ) 11 ಅಧಿಕಾರಿಗಳ ಅಧಿಕೃತ ಇಮೇಲ್ ಖಾತೆಗಳನ್ನು ಅಪರಿಚಿತರು ಹ್ಯಾಕ್ ಮಾಡಿದ್ದಾರೆ. ಅವುಗಳ ಮೂಲಕ 34 ಮೇಲ್‌ಗಳನ್ನು ಕಳುಹಿಸಲಾಗಿದೆ. ಹೀಗೊಂದು ದೂರು ಪೊಲೀಸರಿಗೆ ಹೋಗಿದೆ. ಸದ್ಯ ಯಾವುದೇ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಗೊತ್ತಾಗಿದೆ.