ನವದೆಹಲಿ/ಬೀಜಿಂಗ್: ಲಡಾಖ್ ನ ಗಾಲ್ವಾನ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನ ಸೇನೆಯ ಕಮಾಂಡರ್ ಮಟ್ಟದಲ್ಲಿ ಸುದೀರ್ಘ 12 ಗಂಟೆಗಳ ಕಾಲ ಮಾತುಕತೆ ನಡೆದಿದೆ. ಮತ್ತೊಂದೆಡೆ ಪಾಕಿಸ್ತಾನ ಸೇನೆ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶದತ್ತ ಜಮಾವಣೆಯಾಗುತ್ತಿದೆ. ಅಷ್ಟೇ ಅಲ್ಲ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಲು ಚೀನ ಸೇನೆ ಅಲ್ ಬದರ್ ಉಗ್ರಗಾಮಿ ಸಂಘಟನೆ ಜತೆ ಚರ್ಚೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಏನಿದು ಚೀನಾ ಷಡ್ಯಂತ್ರ?
ಗಡಿ ವಿವಾದದ ವಿಚಾರದಲ್ಲಿ ಒಂದೆಡೆ ಭಾರತ ಜತೆ ಮಾತುಕತೆ ನಡೆಸುತ್ತಿರುವ ಚೀನಾ, ಮತ್ತೊಂದು ನಿಟ್ಟಿನಲ್ಲಿ ಸದ್ದಿಲ್ಲದೆ ಪಾಕಿಸ್ತಾನದ ಜತೆ ಕೈಜೋಡಿಸಿ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವುದಾಗಿ ವರದಿ ಆರೋಪಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಲಡಾಖ್ ಪ್ರದೇಶಕ್ಕೆ ಪಾಕಿಸ್ತಾನ ಹೆಚ್ಚುವರಿಯಾಗಿ 20 ಸಾವಿರ ಸೈನಿಕರನ್ನು ರವಾನಿಸಿದೆ. ಈ ಪ್ರದೇಶದಲ್ಲಿ ಈಗಾಗಲೇ ಚೀನಾ ಸೇನೆ ಕೂಡಾ ಬೀಡು ಬಿಟ್ಟಿರುವುದಾಗಿ ವರದಿ ವಿವರಿಸಿದೆ.
ಮೂಲಗಳ ಪ್ರಕಾರ ಪಾಕಿಸ್ತಾನ ಕೂಡಾ ಭಾರತದ ಮೇಲೆ ನಡೆಯುವ ದಾಳಿಯ ಲಾಭ ಪಡೆಯಲು ಯತ್ನಿಸುತ್ತಿರುವುದಾಗಿ ಹೇಳಿವೆ. ಒಂದೆಡೆ ಚೀನಾ ಮತ್ತೊಂದೆಡೆ ಪಾಕ್ ದಾಳಿ ನಡೆಸುವ ಷಡ್ಯಂತ್ರ ನಡೆಸುತ್ತಿವೆ. ಪಾಕಿಸ್ತಾನದ ಐಎಸ್ ಐ ಕೂಡಾ ಚೀನಾದ ಸಂಪರ್ಕದಲ್ಲಿದೆ. ಒಂದೋ ದಾಳಿಗಾಗಿ ಉಗ್ರರನ್ನು ಕಳುಹಿಸಬೇಕು ಇಲ್ಲವೇ ಭಾರತದ ವಿರುದ್ಧ ಕಾರ್ಯಾಚರಣೆಗೆ ಪಾಕಿಸ್ತಾನದ ಗಡಿ ಭದ್ರತಾ ಪಡೆ(ಬಿಎಟಿ)ಯನ್ನು ಕಳುಹಿಸುವ ಸಂಚು ರೂಪಿಸುತ್ತಿರುವುದಾಗಿ ವರದಿ ತಿಳಿಸಿದೆ.
ಚೀನಾ ಮತ್ತು ಪಾಕ್ ಈಗಾಗಲೇ ನೂರು ಪಾಕಿಸ್ತಾನಿ ಉಗ್ರರು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಬಗ್ಗೆಯೂ ಮಾತುಕತೆ ನಡೆಸಿವೆ ಎಂದು ಹೇಳಿದೆ. ಆದರೆ ಮಹತ್ತರ ಬೆಳವಣಿಗೆಯಲ್ಲಿ ಭಾರತೀಯ ಭದ್ರತಾ ಪಡೆ ಕಾಶ್ಮೀರದೊಳಗೆ ಕಳೆದ ಎರಡು ತಿಂಗಳೊಳಗೆ 120 ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ.