Advertisement
ಪಾಕ್ ಪಡೆಗಳ ನಿರಂತರ ಅಪ್ರಚೋದಿತ ದಾಳಿಗಳಿಗೆ ಐವರು ಸೇನಾ ಸಿಬ್ಬಂದಿ ಸಹಿತ 12 ನಾಗರಿಕರು ಸಾವನ್ನಪ್ಪಿದ್ದು 50 ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಜಮ್ಮು, ಕಥುವಾ ಹಾಗೂ ಸಾಂಬಾ ವಲಯಗಳ ಐದು ಜಿಲ್ಲೆಗಳ ವ್ಯಾಪ್ತಿಗೆ ಬರುವ ಅಂತಾರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಹಳ್ಳಿಗರನ್ನು ಸರಕಾರ, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ, ಸದ್ಯಕ್ಕೆ ಬೆಘವಾಡ ಚೋಗಾ ಪ್ರಾಂತ್ಯದಲ್ಲಿರುವ ಭಾರತೀಯ ತರಬೇತಿ ಸಂಸ್ಥೆಯಲ್ಲಿ (ಐಟಿಐ) ವಾಸ್ತವ್ಯ ಕಲ್ಪಿಸಿದೆ.
ಕಳೆದ 4 ದಿನಗಳಲ್ಲಿ ಪಾಕ್‌ನತ್ತ ಚಿಮ್ಮಿದ್ದು ಬರೋಬ್ಬರಿ 9 ಸಾವಿರ ಶೆಲ್‌ಗಳು. ಹೀಗಂತ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಕ್‌ನ ಅಪ್ರಚೋದಿತ ದಾಳಿಗೆ ಪ್ರತ್ಯುತ್ತರವಾಗಿ 9 ಸಾವಿರ ಶೆಲ್‌ಗಳನ್ನು ಸಿಡಿಸಲಾಗಿದೆ. ಇದರಿಂದಾಗಿ ಪಾಕಿಸ್ಥಾನಿ ರೇಂಜರ್‌ಗಳ ತುರ್ತು ತೈಲ ಶೇಖರಣಾ ಪ್ರದೇಶಗಳು ಧ್ವಂಸವಾಗಿವೆ. ಒಟ್ಟಿನಲ್ಲಿ 190 ಕಿ.ಮೀ.ನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪ್ರಕ್ಷುಬ್ಧ ವಾತಾ ವರಣ ನಿರ್ಮಾಣವಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಪಾಕಿಸ್ಥಾನ ಸೇನೆ, ರವಿವಾರ ರಾತ್ರಿಯಿಡೀ ಶೆಲ್ ದಾಳಿ ನಡೆಸಿದ್ದು, ಒಬ್ಬ ನಾಗರಿಕ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಇದರಿಂದಾಗಿ, ಗುರುವಾರದಿಂದೀಚೆಗೆ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಪಾಕ್ ದಾಳಿ ಹಿನ್ನೆಲೆಯಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, “ಎಂಥ ಪ್ರತಿಕೂಲ ಪರಿಸ್ಥಿತಿ ಎದುರಾದರೂ, ದೇಶವು ತಲೆತಗ್ಗಿಸಲು ನಮ್ಮ ಸರಕಾರ ಬಿಡುವುದಿಲ್ಲ’ ಎಂದಿದ್ದಾರೆ. ಭಾರತ ಈಗ ದುರ್ಬಲ ರಾಷ್ಟ್ರವಲ್ಲ. ನಾವು ಪ್ರಬಲವಾಗಿ ಬೆಳೆದಿದ್ದು, ಜಗತ್ತಿನ ಕಣ್ಣಲ್ಲಿ ಭಾರತದ ವರ್ಚಸ್ಸು ಬದಲಾಗಿದೆ ಎಂದೂ ಅವರು ಹೇಳಿದ್ದಾರೆ.
Advertisement