Advertisement

ಕಡಿಮೆ ಚಾ ಕುಡೀರಿ; ದೇಶ ಬಚಾವ್‌ ಮಾಡಿ: ಪಾಕಿಸ್ಥಾನ ಸರಕಾರದಿಂದ ಜನರಿಗೆ ಮನವಿ

10:39 AM Jun 16, 2022 | Team Udayavani |

ಇಸ್ಲಾಮಾಬಾದ್‌: ಟೀ ಕುಡಿ ಯುವುದನ್ನು ಕಡಿಮೆ ಮಾಡಿದರೆ ದೇಶದ ಅರ್ಥ ವ್ಯವಸ್ಥೆಗೆ ನೆರವಾಗಲಿ­ದೆಯೇ? ಪಾಕಿಸ್ಥಾನದ ಪರಿಸ್ಥಿತಿ ಗಮನಿಸಿದಾಗ ಹೌದು ಎನಿಸುತ್ತದೆ. ಈಗಾಗಲೇ ಹಣಕಾಸು ಬಿಕ್ಕಟ್ಟಿಗೆ ತುತ್ತಾಗಿರುವ ಭಾರತ ನೆರೆಯ ರಾಷ್ಟ್ರ ಸಾಲಕ್ಕಾಗಿ ಅಲ್ಲಿ ಇಲ್ಲಿ ಬೇಡುವ ಪರಿಸ್ಥಿತಿಯಲ್ಲಿದೆ. ಇಂಥ ಶೋಚನೀಯ ಪರಿಸ್ಥಿತಿಯ ನಡುವೆಯೂ “ಇನ್ನು ಮುಂದೆ ಪ್ರತಿದಿನ 1-2 ಕಪ್‌ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಚಹಾ ಪುಡಿಯನ್ನು ಆಮದು ಮಾಡಿಕೊಳ್ಳುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಲು ಸಾಧ್ಯ’ ಎಂದು ಅಲ್ಲಿನ ಯೋಜನಾ ಸಚಿವ  ಇಕ್ಬಾಲ್‌ ಮನವಿ ಮಾಡಿಕೊಂಡಿದ್ದಾರೆ.

Advertisement

ಅವರ ಕೋರಿಕೆಗೆ ವಿವಿಧ ಜಾಲತಾಣಗಳಲ್ಲಿ ಜನರು ಲಘುವಾಗಿ ಟೀಕಿಸಿ ಕಾಲೆಳೆದಿದ್ದಾರೆ. “ನಿಜಕ್ಕೂ ಪಾಕಿಸ್ಥಾನ ಸಚಿವ ಅಶಾನ್‌ ಇಕ್ಬಾಲ್‌ 2 ಕಪ್‌ ಚಹಾ ಕುಡಿಯುವುದನ್ನು ಕಡಿಮೆ ಮಾಡಿ ದೇಶದ ವೆಚ್ಚ ಕಡಿಮೆ ಮಾಡುವುದಕ್ಕೆ ಸೂಚಿಸಿ­ದ್ದಾರೆಯೇ’ ಎಂದು ಕೆಲವರು ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಅವರು ಕೈಗೊಂಡ ಕ್ರಮಗಳು ನಿಜಕ್ಕೂ ಪ್ರಾಮಾಣಿಕವಾದದ್ದೇ? ನಾವೇನು ಮೂರ್ಖರೇ ಎಂದು ಮತ್ತೆ ಹಲವು ಟೀಕಿಸಿದ್ದಾರೆ.

12,432 ಕೋಟಿ ರೂ. ವೆಚ್ಚ
ಕಳೆದ ವರ್ಷ ಪಾಕಿಸ್ಥಾನ ಸರಕಾರ 12,432 ಕೋಟಿ ರೂ. ಮೌಲ್ಯದ ಚಹಾ ಪುಡಿಯನ್ನು ಆಮದು ಮಾಡಿಕೊಂಡಿತ್ತು. 2020-21ನೇ ಸಾಲಿನಲ್ಲಿ 7, 039 ಕೋಟಿ ರೂ. ಮೌಲ್ಯದ ಚಹಾ ಪುಡಿಯನ್ನು ಇತರ ದೇಶಗಳಿಂದ ತರಿಸಿಕೊಂಡಿತ್ತು.

ಬೇಗ ಅಂಗಡಿ ಮುಚ್ಚಿ
ವಿದ್ಯುತ್‌, ತೈಲೋತ್ಪನ್ನಗಳ ಕೊರತೆಯಿಂದಾಗಿ ದೇಶದ ನಗರ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ಗಳನ್ನು ಪ್ರತೀ ದಿನ ರಾತ್ರಿ 8.30ಕ್ಕೇ ಬಂದ್‌ ಮಾಡಬೇಕು ಎಂದೂ ಯೋಜನಾ ಸಚಿವ ಅಶಾನ್‌ ಇಕ್ಬಾಲ್‌ ಮನವಿ ಮಾಡಿದ್ದಾರೆ. ಇದರಿಂದಾಗಿ ಇಂಧನ ಬಳಕೆ ಪ್ರಮಾಣ ಕಡಿಮೆಯಾಗಿ, ದೇಶದ ಬೊಕ್ಕಸಕ್ಕೆ ಹೊರೆ ಕಡಿಮೆಯಾಗಲಿದೆ ಎಂದು ಅಲವತ್ತುಕೊಂಡಿದ್ದಾರೆ.

ವಿದ್ಯುತ್‌ ಕಡಿತ ಸಮಸ್ಯೆ
ಇಷ್ಟು ಮಾತ್ರವಲ್ಲದೆ ಪಾಕಿಸ್ಥಾನದಲ್ಲಿ ವಿದ್ಯುತ್‌ ಸಮಸ್ಯೆ ಕೂಡ ಕೈಮೀರಿ ಹೋಗಿದೆ. ಈ ವರ್ಷದ ಎಪ್ರಿಲ್‌ನಿಂದ ಈಚೆಗೆ ಆ ದೇಶದ ನಗರ ಪ್ರದೇಶಗಳಲ್ಲಿ ಪ್ರತಿ ದಿನ 6-10 ಗಂಟೆಗಳ ಕಾಲ ವಿದ್ಯುತ್‌ ಕಡಿತ ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಪ್ರತೀ ದಿನ 18 ಗಂಟೆಗಳ ಕಾಲ ಪವರ್‌ ಕಟ್‌ ಇದೆ. ಉಗ್ರರಿಗೆ ನೆರವು, ಸ್ವಜನಪಕ್ಷಪಾತದಿಂದಾಗಿ ಪಾಕಿಸ್ಥಾನದ ಅರ್ಥ ವ್ಯವಸ್ಥೆ ತೀರಾ ಕೆಳಮಟ್ಟಕ್ಕೆ ಕುಸಿದು ಹೋಗಿದೆ. ಅಲ್ಲಿನ ದುರವಸ್ಥೆ ಎಷ್ಟಿದೆ ಎಂದರೆ, ಆ ದೇಶದ ಶಾಶ್ವತ ಮಿತ್ರನಾಗಿರುವ ಚೀನ ಸರಕಾರ ಕೂಡ ಒಂದು ಹಂತದಲ್ಲಿ “ಸಾಲ ಕೊಡುವುದೇ ಇಲ್ಲ’ ಎಂದಿತ್ತು. 2 ವರ್ಷಗಳ ಹಿಂದೆ ಪ್ರಧಾನಿಯಾಗಿದ್ದ ಇಮ್ರಾನ್‌ ಖಾನ್‌ ಇಸ್ಲಾಮಿಕ್‌ ರಾಷ್ಟ್ರಗಳಿಗೆ ಸಾಲ ಕೇಳಲು ಹೋಗಿದ್ದಾಗ ಸ್ಪಂದಿಸಿರಲಿಲ್ಲ. ಇತ್ತೀಚೆಗಷ್ಟೇ ಅಲ್ಲಿನ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್‌ ಪ್ರತಿಕ್ರಿಯೆ ನೀಡಿ “ಶ್ರೀಲಂಕಾದಂತೆಯೇ ಪಾಕಿಸ್ಥಾನವೂ ಗಂಭೀರವಾದ ವಿತ್ತೀಯ ಬಿಕ್ಕಟ್ಟು ಎದುರಿಸಲಿದೆ’ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next