ಇಸ್ಲಾಮಾಬಾದ್: ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಪಾಕಿಸ್ತಾನ ಕೂಡಾ ಆಕ್ಷೇಪ ಎತ್ತಿ ಟ್ವೀಟ್ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಟ್ರೆಕ್ಕಿಂಗ್ ವೇಳೆ ಕಣಿವೆಯಲ್ಲಿ ಸಿಲುಕಿದ ಯುವಕನನ್ನು ರಕ್ಷಿಸಿದ ಸೇನೆ; ವಿಡಿಯೋ
“ಕರ್ನಾಟಕದ ಶಾಲಾ, ಕಾಲೇಜುಗಳ ತರಗತಿಯಲ್ಲಿ ಧಾರ್ಮಿಕ ಉಡುಪು ಧರಿಸಲು ಕರ್ನಾಟಕದಲ್ಲಿ ನಿಷೇಧ ಹೇರಿರುವುದು ಸೂಕ್ತವಾದುದಲ್ಲ. ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಧರಿಸುವ ಅವಕಾಶವನ್ನು ನಿರಾಕರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಮೂಲಭೂತ ಹಕ್ಕುಗಳನ್ನು ಭಾರತ ಉಲ್ಲಂಘಿಸುತ್ತಿದೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮೂದ್ ಖುರೇಷಿ ಟ್ವೀಟ್ ಮಾಡಿರುವುದಾಗಿ ವರದಿ ವಿವರಿಸಿದೆ.
ಇದು ಭಾರತದ ದಬ್ಬಾಳಿಕೆಯ ಕ್ರಮವಾಗಿದೆ ಎಂದು ಆರೋಪಿಸಿರುವ ಖುರೇಷಿ, ಮುಸ್ಲಿಂ ಹುಡುಗಿಯರನ್ನು ಭಯಭೀತಗೊಳಿಸಲಾಗುತ್ತಿದೆ. ಹಿಜಾಬ್ ಧರಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಹಿಂದೆ ಭಾರತದ ತಂತ್ರಗಾರಿಕೆ ಇದೆ ಎಂದು ದೂರಿದ್ದಾರೆ.
ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಭುಗಿಲೆದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಸರಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಹಿಜಾಬ್ ಧರಿಸುವುದು ಸಮಾನತೆಗೆ ಅಡಡಿಯನ್ನುಂಟು ಮಾಡಲಿದೆ. ಇದರಿಂದಾಗಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಕರ್ನಾಟಕ ಸರಕಾರ ತಿಳಿಸಿತ್ತು.
ಹಿಜಾಬ್ , ಕೇಸರಿ ಶಾಲು ವಿವಾದ ರಾಜ್ಯಾದ್ಯಂತ ಹಬ್ಬಿದ್ದು, ಪ್ರಕರಣ ಇದೀಗ ಹೈಕೋರ್ಟ್ ಕಟಕಟೆಯಲ್ಲಿದ್ದು, ಬುಧವಾರ ಮಧ್ಯಾಹ್ನ 2.30ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.