ಜಮ್ಮು : ಪಾಕ್ ಪಡೆಗಳು ಇಂದು ಬುಧವಾರ ಮತ್ತೆ ಕದನ ವಿರಾಮ ಉಲ್ಲಂಘನೆಗೈದು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಗೆ ಸನಿಹದಲ್ಲಿರುವ ಪೌರ ವಸತಿ ಪ್ರದೇಶಗಳು ಹಾಗೂ ಭಾರತ ಸೇನೆಯ ಹೊರಠಾಣೆಗಳ ಮೇಲೆ ಶೆಲ್ ದಾಳಿ ನಡೆಸಿವೆ.
ಈ ಮೊದಲು ಉರಿ ವಲಯದಲ್ಲಿ ಪಾಕ್ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಎಲ್‌ಓಸಿಯಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು ಇಂದು ನಿರಂತರ ಐದನೇ ದಿನವಾಗಿದೆ.
ಆಗಸ್ಟ್ 7ರ ಪಾಕ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಹವಿಲ್ದಾರ್ ನರೇಂದ್ರ ಸಿಂಗ್ ಇಂದು ಬುಧವಾರ ಮೃತಪಟ್ಟರೆಂದು ಸೇನಾ ಅಧಿಕಾರಿಯೋರ್ವರು ತಿಳಿಸಿದ್ದಾರೆ.
43ರ ಹರೆಯದ ಹವಿಲ್ದಾರ್ ನರೇಂದ್ರ ಸಿಂಗ್ ಅವರು ಉತ್ತರಾಖಂಡದ ಹರಿಪುರ್ ಗ್ರಾಮದವರು. ಇವರು ಪತ್ನಿ ಆಶಾ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಆ.7ರ ಪಾಕ್ ಗುಂಡಿನ ದಾಳಿಗೆ ನಾಲ್ವರು ಜವಾನರ ಸಹಿತ ಐದು ಮಂದಿ ಗಾಯಗೊಂಡಿದ್ದರು.