ಕರಾಚಿ: ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಪಾಕಿಸ್ತಾನ ತಂಡ ಪ್ರಕಟಗೊಂಡಿದ್ದು, ಅನುಭವಿ ಆಟಗಾರರಾದ ಫಖಾರ್ ಜಮಾನ್ ಮತ್ತು ಸರ್ಫರಾಜ್ ಅಹ್ಮದ್ ಅವರನ್ನು ಕೈಬಿಡಲಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಆಸಿಫ್ ಅಲಿ ಮತ್ತು ಖುಷ್‌ದಿಲ್ ಶಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಬಾಬರ್ ಆಜಂ ತಂಡದ ನಾಯಕರಾಗಿದ್ದಾರೆ.
ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೂ ಮುನ್ನ ಪಾಕಿಸ್ತಾನ ಪ್ರವಾಸಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಒಟ್ಟು 7 ಪಂದ್ಯಗಳನ್ನಾಡಲಿದೆ. ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಈ ಪಂದ್ಯಗಳು ನಡೆಯಲಿವೆ. ಈ ಸರಣಿಗೂ ಬಾಬರ್ ಆಜಂ ಅವರೇ ನಾಯಕರಾಗಿದ್ದಾರೆ.
ಪಾಕಿಸ್ತಾನ ಟಿ20 ತಂಡ: ಬಾಬರ್ ಆಜಂ (ನಾಯಕ), ಶದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಆಜಂ ಖಾನ್, ಹ್ಯಾರಿಸ್ ರವೂಫ್, ಹಸನ್ ಅಲಿ, ಇಮಾದ್ ವಾಸಿಮ್, ಖುಷ್‌ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂ., ಶಹೀನ್ ಶಾ ಅಫ್ರಿದಿ, ಶೋಯಿಬ್ ಮಕ್ಸೂದ್.
ಕೋಚ್ ಮಿಸ್ಬಾ, ವಕಾರ್ ರಾಜೀನಾಮೆ
ಪಾಕಿಸ್ತಾನದ ಟಿ20 ತಂಡ ಪ್ರಕಟಗೊಂಡ ಬೆನ್ನಲ್ಲೇ ಆಘಾತಕಾರಿ ಬೆಳವಣಿಗೆಯೊಂದು ಸಂಭವಿಸಿದೆ. ತಂಡದ ಪ್ರಧಾನ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಮಾಜಿ ಕ್ರಿಕೆಟಿಗರಾದ ಸಕ್ಲೇನ್ ಮುಷ್ತಾಕ್ ಮತ್ತು ಅಬ್ದುಲ್ ರಜಾಕ್ ಈ ಹುದ್ದೆ ನಿಭಾಯಿಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.
ಸೆ.13ರಂದು ಮತ್ತೋರ್ವ ಮಾಜಿ ಕ್ರಿಕೆಟಿಗ ರಮೀಜ್ ರಾಜ ಪಿಸಿಬಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಈ ರಾಜೀನಾಮೆ ಪ್ರಕರಣಕ್ಕೂ ಸಂಬಂಧ ಇದೆ ಎನ್ನಲಾಗಿದೆ. ರಮೀಜ್ ರಾಜ ಯೂ ಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದು, ಇದರಲ್ಲೊಮ್ಮೆ ಮಿಸ್ಬಾ ಮತ್ತು ವಕಾರ್ ಅತ್ಯುತ್ತಮ ಕೋಚ್‌ಗಳೆಂದು ತಾನು ಭಾವಿಸುವುದಿಲ್ಲ ಎಂದಿದ್ದರು. ಹೀಗಾಗಿ ರಾಜ ಅಧಿಕಾರಕ್ಕೆ ಬಂದರೆ ತಮ್ಮ ಹುದ್ದೆಗೆ ಸಂಚಕಾರ ಬಂದೀತು ಎಂದು ಭಾವಿಸಿ ಇವರಿಬ್ಬರು ರಾಜೀನಾಮೆ ಸಲ್ಲಿಸಿರಬಹುದು ಎಂದು ತರ್ಕಿಸಲಾಗುತ್ತಿದೆ.