Advertisement

ಪ್ರತೀಕಾರದ ಭಯಕ್ಕೆ ಬಗ್ಗಿತೇ ಪಾಕ್‌?

12:30 AM Feb 23, 2019 | |

ಹೊಸದಿಲ್ಲಿ/ಇಸ್ಲಾಮಾಬಾದ್‌: ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಯೇ ಸಿದ್ಧ ಎಂಬ ಭಾರತದ ಶಪಥಕ್ಕೆ ಪಾಕಿಸ್ಥಾನ ಥರಗುಟ್ಟಿದೆ. “40 ಸಿಆರ್‌ಪಿಎಫ್ ಯೋಧರ ಬಲಿದಾನ ನಷ್ಟವಾಗಲ್ಲ’ ಎಂಬ ಮಾತುಗಳು ಭಾರತದಾದ್ಯಂತ ಅನುರಣಿಸುತ್ತಿರುವುದರಿಂದ ಪಾಕ್‌ ಸರ್ಕಾರ ಮತ್ತು ಸೇನೆಯಲ್ಲಿ ಸಣ್ಣಗೆ ನಡುಕ ಶುರುವಾಗಿದ್ದು, “ನಾವೇನೂ ಯುದ್ಧಕ್ಕೆ ಸನ್ನದ್ಧರಾಗುತ್ತಿಲ್ಲ’ ಎಂಬ ಹೇಳಿಕೆ ನೀಡುವ ಮೂಲಕ ಪ್ರಕ್ಷುಬ್ಧತೆಯನ್ನು ಶಮನಗೊಳಿಸುವ ಯತ್ನಕ್ಕೆ ಪಾಕ್‌ ಕೈಹಾಕಿದೆ.

Advertisement

ಶುಕ್ರವಾರ ಪುಲ್ವಾಮಾ ದಾಳಿ ಕುರಿತು ಪ್ರತಿಕ್ರಿಯೆ ನೀಡುವ ನೆಪದಲ್ಲಿ ಪಾಕಿಸ್ಥಾನ ಸೇನೆಯ ಹಿರಿಯ ಅಧಿಕಾರಿ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌ ಸುದ್ದಿಗೋಷ್ಠಿ ನಡೆಸಿ, “ನಾವೇನೂ ಯುದ್ಧಕ್ಕೆ ಸನ್ನದ್ಧರಾಗುತ್ತಿಲ್ಲ. ಭಾರತವೇ ನಮಗೆ ಯುದ್ಧದ ಬೆದರಿಕೆ ಒಡ್ಡುತ್ತಿದೆ’ ಎಂದಿದ್ದಾರೆ. ಫೆ.14ರಂದು 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಘಟನೆಗೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.

ದಾಳಿ ನಡೆದರೆ ಸುಮ್ಮನಿರಲ್ಲ: “ನಾವು ಯುದ್ಧಕ್ಕೆ ಸಿದ್ಧರಾಗುತ್ತಿಲ್ಲ. ಆದರೂ, ಭಾರತದ ಕಡೆಯಿಂದ ಬರುತ್ತಿರುವ ದಾಳಿಯ ಬೆದರಿಕೆಗೆ ಪ್ರತಿಕ್ರಿಯಿಸುವ ಅಧಿಕಾರ ನಮಗಿದೆ. ನಮ್ಮ ಬಳಿಯೂ ಯುದ್ಧಕ್ಕೆ ಅಗತ್ಯವಾದ ಎಲ್ಲವೂ ಇದೆ. ನಮ್ಮ ಮೇಲೆ ಯಾವುದಾದರೂ ಆಕ್ರಮಣ ನಡೆದರೆ ನಾವು ಸುಮ್ಮನಿರಲ್ಲ. ನಮ್ಮ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ಬಂದರೆ, ಅದಕ್ಕೆ ಸೂಕ್ತ ತಿರುಗೇಟು ನೀಡುವ ಹಕ್ಕು ನಮಗಿದೆ’ ಎಂದು ಗಫ‌ೂರ್‌ ಹೇಳಿದ್ದಾರೆ. ಜತೆಗೆ, ಭಾರತವು ಯಾವುದೇ ಆಲೋಚನೆ ಮಾಡದೇ, ಯಾವುದೇ ಪುರಾವೆಯೂ ಇಲ್ಲದೆ ನೇರವಾಗಿ ನಮ್ಮ ಮೇಲೆ ಆರೋಪ ಹೊರಿಸುತ್ತಿದೆ. ಈ ಬಾರಿ ನಾವು ಇದಕ್ಕೆ ಸ್ವಲ್ಪ ತಡವಾಗಿಯೇ ಪ್ರತಿಕ್ರಿಯೆ ನೀಡಿದ್ದೇವೆ ಎಂದಿದ್ದಾರೆ. 1998ರ ಅಣ್ವಸ್ತ್ರ ಪರೀಕ್ಷೆಯ ಬಳಿಕ ಭಾರತವು ನಮ್ಮ ಮೇಲೆ ಪರೋಕ್ಷ ವ್ಯೂಹಾತ್ಮಕ ತಂತ್ರಗಳನ್ನು ಹೆಣೆದಿದೆ. ನಮ್ಮ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದೂ ಆರೋಪಿಸಿದ್ದಾರೆ.

ಮುಂದುವರಿದ ಉದ್ಧಟತನ: ಪಾಕಿಸ್ಥಾನಕ್ಕೆ “ಸಮರ ಜ್ವರ’ ಶುರುವಾಗಿದ್ದರೂ, ಉದ್ಧಟತನವನ್ನು ನಿಲ್ಲಿಸಿಲ್ಲ ಎನ್ನುವುದಕ್ಕೆ  ಮೇಜರ್‌ ಗಫ‌ೂರ್‌ ಮಾತುಗಳು ಸಾಕ್ಷಿಯಾಗಿವೆ. “ಪಾಕಿಸ್ಥಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸುವ ಪ್ರಯತ್ನದಲ್ಲಿ ಭಾರತ ಸಂಪೂರ್ಣ ವಿಫ‌ಲವಾಗಿದೆ. ಒಂದು ವೇಳೆ, ಅವರ ಪ್ರಯತ್ನ ಸಫ‌ಲವಾಗಿದ್ದರೆ, ನಮ್ಮ ದೇಶಕ್ಕೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಭೇಟಿ ನೀಡುತ್ತಿರಲಿಲ್ಲ, ವಿದೇಶಿ ಹೂಡಿಕೆ ಹರಿದು ಬರುತ್ತಿರಲಿಲ್ಲ, ಸಿಪೆಕ್‌ ಕಾಮಗಾರಿ ನಡೆಯುತ್ತಲೇ ಇರಲಿಲ್ಲ. ಇನ್ನು ಸೇನಾ ಸಹಕಾರ ಮತ್ತು ರಾಜತಾಂತ್ರಿಕತೆಯ ವಿಚಾರಕ್ಕೆ ಬಂದರೆ, ನಾವು ರಷ್ಯಾ, ಚೀನಾ, ಪಿಎಫ್ ಮತ್ತು ಅಮೆರಿಕ ವಾಯುಪಡೆಯೊಂದಿಗೆ ಜಂಟಿ ಕವಾಯತನ್ನೂ ನಡೆಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ನಿರ್ದೇಶನ: ಈ ನಡುವೆ, ಕಾಶ್ಮೀರಿಗರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ 11 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ಪುಲ್ವಾಮಾ ದಾಳಿ ಬಳಿಕ ದೇಶದ ಹಲವೆಡೆ ಕಾಶ್ಮೀರಿಗರನ್ನು ಗುರಿಯಾಗಿಸಿಕೊಂಡು ಹಲ್ಲೆ, ಕಿರುಕುಳದಂಥ ಘಟನೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಸಮಸ್ಯೆ ಅನುಭವಿಸುತ್ತಿರುವ ಕಾಶ್ಮೀರಿಗರು ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿ, ಅದಕ್ಕೆ ವ್ಯಾಪಕ ಪ್ರಚಾರ ಕೊಡಿ ಎಂದೂ ಕೇಂದ್ರ ಗೃಹ ಇಲಾಖೆಗೆ ಕೋರ್ಟ್‌ ಸೂಚಿಸಿದೆ. ಇದರ ಬೆನ್ನಲ್ಲೇ, ಕ್ಯಾಂಪಸ್‌ಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆ ಕಾಪಾಡುವಂತೆ ಸೂಚಿಸಿ ದೇಶಾದ್ಯಂತ ಎಲ್ಲ ವಿವಿಗಳಿಗೂ ಯುಜಿಸಿ ಪತ್ರ ಬರೆದಿದೆ.

Advertisement

ತಿಹಾರ್‌ ಜೈಲಿಗೆ ವರ್ಗಕ್ಕೆ ಕೋರಿಕೆ: ಜಮ್ಮು ಜೈಲಿನಲ್ಲಿ ಇರಿಸಲಾಗಿರುವ 7 ಪಾಕಿಸ್ತಾನಿ ಉಗ್ರರನ್ನು ತಿಹಾರ ಜೈಲಿಗೆ ವರ್ಗಾಯಿಸುವಂತೆ ಕೋರಿ ಜಮ್ಮು ಕಾಶ್ಮೀರ ಆಡಳಿತ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸ್ಥಳೀಯ ಕೈದಿಗಳ ಮೇಲೆ ಅವರು ಪ್ರಭಾವ ಬೀರಲು ಯತ್ನಿಸಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನ್ಯಾ. ಎಲ್‌.ಎನ್‌. ರಾವ್‌ ಮತ್ತು ನ್ಯಾ. ಎಂ.ಆರ್‌. ಶಾ ನೇತೃತ್ವದ ಪೀಠ ಈ ಅರ್ಜಿ ಸಂಬಂಧಿಸಿದಂತೆ ಕೇಂದ್ರ ಮತ್ತು ದೆಹಲಿ ಸರ್ಕಾÃಗಳ ಪ್ರತಿಕ್ರಿಯೆ ಕೇಳಿದೆ.

ನಿಷೇಧಿತ ಸಂಘಟನೆಗಳ ಪಾಲು ಹೆಚ್ಚು
ಪಾಕಿಸ್ಥಾನದಲ್ಲಿ ಒಟ್ಟು 69 ನಿಷೇಧಿತ ಉಗ್ರ ಸಂಘಟನೆಗಳಿವೆ. ಅದರಲ್ಲಿ ಗುರುವಾರ ಹೊಸತಾಗಿ ನಿಷೇಧಕ್ಕೊಳಗಾಗಿರುವ ಜಮಾತ್‌-ಉದ್‌-ದಾವಾ ಕೂಡ ಸೇರಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವ ಹಿಜ್ಬುಲ್‌ ಮುಜಾಹಿದೀನ್‌, ಹರ್ಕತ್‌-ಉಲ್‌-ಮುಜಾಹಿದೀನ್‌, ಅಲ್‌-ಬದ್ರ್ನಂಥ ಪ್ರಮುಖ ಉಗ್ರ ಸಂಘಟನೆಗಳನ್ನು ಈ ಪಟ್ಟಿಯಲ್ಲಿ ಸೇರಿಸುವ ಗೋಜಿಗೆ ಪಾಕ್‌ನ ನ್ಯಾಷನಲ್‌ ಕೌಂಟರ್‌ ಟೆರರಿಸಂ ಅಥಾರಿಟಿ (ಎನ್‌ಸಿಟಿಎ) ಹೋಗಿಲ್ಲ. ಈ ಪಟ್ಟಿಯಲ್ಲಿರುವ ಹೆಚ್ಚಿನ ಉಗ್ರ ಸಂಘಟನೆಗಳು ಬಲೂಚಿಸ್ತಾನ್‌, ಗಿಲಿಟ್‌-ಬಾಲ್ಟಿಸ್ತಾನಗಳಲ್ಲಿ ಕೇಂದ್ರೀಕೃತವಾಗಿವೆ. ಈ ಪೈಕಿ ಹೆಚ್ಚಿನವು ಭಾರತದಲ್ಲಿ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ.  ಕೇಂದ್ರ ಗೃಹ ಸಚಿವಾಲಯದ ದಾಖಲೆಗಳ ಪ್ರಕಾರ, ಭಾರತದಲ್ಲಿ ನಿಷೇಧಕ್ಕೊಳಗಾಗಿರುವ 41 ಸಂಘಟನೆಗಳ ಪೈಕಿ ಅರ್ಧದಷ್ಟು ಸಂಘಟನೆಗಳ ಮೂಲ ಪಾಕಿಸ್ಥಾನವಾಗಿದೆ. 

ಇಬ್ಬರು ಶಂಕಿತರ ಬಂಧನ
ತಮ್ಮನ್ನು ತಾವು ವಿದ್ಯಾರ್ಥಿಗಳಂತೆ ಬಿಂಬಿಸಿಕೊಂಡು, ಉಗ್ರ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಜೈಶ್‌-ಎ-ಮೊಹಮ್ಮದ್‌ನ ಇಬ್ಬರು ಶಂಕಿತರನ್ನು ಶುಕ್ರವಾರ ಉತ್ತರಪ್ರದೇಶದ ಉಗ್ರ ನಿಗ್ರಹ ದಳ(ಎಟಿಎಸ್‌) ಬಂಧಿಸಿದೆ. ಇಲ್ಲಿನ ಸಹರಾನ್ಪುರದ ದೇವ್‌ಬಂದ್‌ನಲ್ಲಿ ಶಹನವಾಜ್‌ ಅಹ್ಮದ್‌ ತೇಲಿ ಮತ್ತು ಅಖೀಬ್‌ ಅಹ್ಮದ್‌ ಮಲಿಕ್‌ ಎಂಬಿಬ್ಬರು ಯುವಕರನ್ನು ಬಂಧಿಸಲಾಗಿದ್ದು, ಇವರಿಬ್ಬರೂ ಜಮ್ಮು ಮತ್ತು ಕಾಶ್ಮೀರದವರು ಎಂದು ಉತ್ತರಪ್ರದೇಶ ಡಿಜಿಪಿ ಒ.ಪಿ.ಸಿಂಗ್‌ ತಿಳಿಸಿದ್ದಾರೆ. ಯಾವುದೇ ಕಾಲೇಜಿಗೂ ಪ್ರವೇಶ ಪಡೆಯದಿದ್ದರೂ, ತಮ್ಮನ್ನು ವಿದ್ಯಾರ್ಥಿಗಳು ಎಂದು ಹೇಳಿದ್ದರು. ಶಂಕಿತರಿಂದ .32 ಬೋರ್‌ ಪಿಸ್ತೂಲ್‌ ಮತ್ತು ಕಾಟ್ರಿಡ್ಜ್ಗಳನ್ನು ವಶಕ್ಕೆ ಪಡೆಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next