Advertisement

ಬಾಂಗ್ಲಾ ಗಡಿ ಮೂಲಕ 2000 ದ ನಕಲಿ ನೋಟು ಕಳುಹಿಸುತ್ತಿರುವ ಪಾಕ್‌ ! 

09:53 AM Feb 14, 2017 | |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಧಿಡೀರ್‌ ನೋಟು ಅಪನಗದೀಕರಣ ಗೊಳಿಸಿದ ಬಳಿಕ ಪಾಕಿಸ್ಥಾನದಿಂದ ಭಾರತಕ್ಕೆ ಬರುತ್ತಿದ್ದ ನಕಲಿ ನೋಟುಗಳ ಹರಿವು ನಿಂತುಹೋಗಿತ್ತು.ಆದರೆ ಇದೀಗ 3 ತಿಂಗಳ ಬಳಿಕ  ಪಾಕ್‌ ಮತ್ತೆ ನರಿ ಬುದ್ದಿ ತೋರಿದ್ದು  2000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ  ಬಾಂಗ್ಲಾ ಗಡಿಯ ಮೂಲಕ ಭಾರತಕ್ಕೆ ಕಳ್ಳಸಾಗಾಣಿಕೆ ಮಾಡುತ್ತಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. 

Advertisement

 ಪಾಕ್‌ನಲ್ಲಿ ಮುದ್ರಣಗೊಂಡಿರುವ ನೋಟುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿರುವವರನ್ನು ಬಿಎಸ್‌ಎಫ್ ವಶಕ್ಕೆ ಪಡೆದು ಎನ್‌ಐಎ ವಶಕ್ಕೆ ನೀಡಿರುವುದನ್ನು  ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಈ ವರದಿ ಮಾಡಿದೆ. 

ಫೆಬ್ರವರಿ 8 ರಂದು ಬಂಗಾಲದ ಮುರ್ಶಿದಾಬಾದ್‌ನಲ್ಲಿ  2000ದ 40 ನಕಲಿ ನೋಟುಗಳ ಸಮೇತ ಅಜೀಜ್‌ ಉರ್‌ ರೆಹಮಾನ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ವೇಳೆ ಆತ ನೋಟುಗಳು ಪಾಕಿಸ್ಥಾನದಲ್ಲಿ ಪ್ರಿಂಟ್‌ ಆಗಿದ್ದು, ಇದಕ್ಕೆ ಐಎಸ್‌ಐ ಬೆಂಬಲ ನೀಡುತ್ತಿರುವುದಾಗಿ  ಬಾಯ್ಬಿಟ್ಟಿದ್ದ. 

ಅಪನಗದೀಕರಣದ  ಹಿಂದೆಯೂ ಬಾಂಗ್ಲಾ ಗಡಿಯ ಮೂಲಕ ಅಪಾರ ಪ್ರಮಾಣದ ನಕಲಿ ನೋಟುಗಳು ಪಶ್ಚಿಮ ಬಂಗಾಳವನ್ನು ಪ್ರವೇಶಿಸುತ್ತಿದ್ದವು ಎಂಬ ಅಂಶ ಬೆಳಕಿಗೆ ಬಂದಿತ್ತು.  ಇದೀಗ ವಶಕ್ಕೆ ಪಡೆದಿರುವ ನೋಟುಗಳ ಪೇಪರ್‌ ಗುಣಮಟ್ಟವೂ ಕಳಪೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವ್ಯಾಪಕ ತಪಾಸಣೆ ಮತ್ತು ಬ್ಯಾಂಕ್‌ ,ಕಚೇರಿಗಳಲ್ಲಿ ನೋಟುಗಳನ್ನು  ಸೂಕ್ತ ಪರಿಶೀಲನೆ ನಡೆಸಿಯೆ ಪಡೆಯಲಾಗುತ್ತಿದೆ.

Advertisement

ಹೊಸ ನೋಟಿನಲ್ಲಿ ಭದ್ರತಾ ವೈಶಿಷ್ಟ್ಯಗಳೆಂಬಂತೆ  ಪಾರದರ್ಶಕ ಪ್ರದೇಶ, ವಾಟರ್‌ ಮಾರ್ಕ್‌,  ಅಶೋಕ ಸ್ತಂಭದ ಲಾಂಛನ, ಎಡ, ಆರ್‌ಬಿಐ ಗವರ್ನರ್ ಸಹಿ, ಗ್ಯಾರಂಟಿ ಷರತ್ತು ಮತ್ತು ಮುಂಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ  ಮುಖಬೆಲೆಯ ಮೇಲೆ ‘ರೂ 2000 ಅಕ್ಷರಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಲಹೆ ನೀಡಿದೆ. 

ನೋಟು ಪರಿಶೀಲನೆ ವೇಳೆ ಚಂದ್ರಯಾನದ ವಿಶಿಷ್ಟ ಚಿತ್ರ, ಸ್ವಚ್ಛ  ಭಾರತ್ ಲೋಗೋ ಮತ್ತು ಹಿಂಭಾಗದಲ್ಲಿರುವ ಮುದ್ರಣದ ವರ್ಷ ಪರಿಶೀಲಿಸಿದಾಗ ನೋಟು ನಕಲಿ ಎಂದು ತಿಳಿಯುವುದಾಗಿ ತಜ್ಞರು ಸಲಹೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next