Advertisement

ವಿನಾಶದ ಅಂಚಿನಲ್ಲಿರುವ ಪಾಕ್‌ ದೇಗುಲಕ್ಕೆ ಸುಪ್ರೀಂ ಬೆಂಬಲ

09:19 AM Nov 25, 2017 | Team Udayavani |

ಇಸ್ಲಾಮಾಬಾದ್‌: ವಿನಾಶದ ಅಂಚಿನಲ್ಲಿರುವ, ಪಾಕಿಸ್ಥಾನದ ಅಲ್ಪಸಂಖ್ಯಾತ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ ಕತಾಸ್‌ ರಾಜ್‌ ದೇಗುಲದ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪಂಜಾಬ್‌ ಸರಕಾರ ವನ್ನು ಪಾಕಿಸ್ಥಾನ ಸುಪ್ರೀಂ ಕೋರ್ಟ್‌ ತೀವ್ರ ವಾಗಿ ತರಾಟೆಗೆ ತೆಗೆದುಕೊಂಡಿದೆ.

Advertisement

ವಿಚಾರಣೆ ವೇಳೆ ಮುಖ್ಯ ನ್ಯಾಯ ಮೂರ್ತಿ, ರಾಷ್ಟ್ರೀಯ ಸ್ಮಾರಕವಾಗಿದ್ದರೂ ಕತಾಸ್‌ ದೇಗುಲದ ಅವನತಿ ಬಗ್ಗೆ ಗೊತ್ತಿದ್ದೂ ಸುಮ್ಮನಿರುವ ಪಂಜಾಬ್‌ ಸರಕಾರದ ನಡೆಯನ್ನು ಖಂಡಿಸಿದ್ದಾರೆ. ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಸಮಿತಿಯೊಂದನ್ನು ರಚಿಸಿ ಆ ಮೂಲಕ ದೇಗುಲದ ಸ್ಥಿತಿಗತಿ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ. ದೇಗುಲದ ಶಿಥಿಲಾ ವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ವಾದ ವರದಿ ಆಧರಿಸಿ ಪಾಕಿಸ್ಥಾನ ಸುಪ್ರೀಂ ಕೋರ್ಟ್‌, ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡು ವಿಚಾರಣೆ ಆರಂಭಿಸಿದೆ. 

ಯಾವುದೀ ದೇಗುಲ?: ಕತಾಸ್‌ ಶಿವ ದೇಗುಲವು ಪಂಜಾಬ್‌ ಪ್ರಾಂತ್ಯದಲ್ಲಿ ಹಿಂದೂಗಳಿಂದ ಆರಾಧಿಸಲ್ಪಡುವ 2ನೇ ಪ್ರಮುಖ ದೇವಾಲಯ. ದೇಗುಲದ ಬಳಿ 20 ಅಡಿ ಆಳದ ಸರೋವರವಿದೆ. ಶಿವನು ತನ್ನ ಪತ್ನಿ “ಸತಿ’ಯನ್ನು ಕಳೆದು ಕೊಂಡಾಗ ಸುರಿಸಿದ ಕಣ್ಣೀರಿನಿಂದ ಈ ಸರೋವರ ನಿರ್ಮಾಣ ವಾಗಿದೆಯೆಂಬ ಪ್ರತೀತಿಯೂ ಇದೆ. ಆದರೆ, ಇತ್ತೀಚಿನ ದಶಕಗಳಲ್ಲಿ ಪಂಜಾಬ್‌ ಪ್ರಾಂತ್ಯದಲ್ಲಿ ಅಣಬೆಗಳಂತೆ ಹೇರಳವಾಗಿ ಹುಟ್ಟಿಕೊಂಡ ಸಿಮೆಂಟ್‌ ಕಾರ್ಖಾನೆಗಳಿಂದ ದೇಗುಲಕ್ಕೆ ಹಾನಿಯಾಗುತ್ತಿದೆ. ಕಾರ್ಖಾನೆ ಗಳಲ್ಲಿ ಕೊರೆ ಯಲಾಗಿರುವ ಅಪಾರ ಸಂಖ್ಯೆಯ ಕೊಳವೆ ಬಾವಿಗಳಿಂದ ಸರೋವರ ಬರಿದಾಗಿದೆ. ಒಂದು ಕಾಲದಲ್ಲಿ ಸುತ್ತಲಿನ ಹಳ್ಳಿಗಳಿಗೆ ವರ್ಷ ಪೂರ್ತಿ ನೀರು ಪೂರೈಸುತ್ತಿದ್ದ ಈ ಸರೋವರ ಇಂದು ಸಂಪೂರ್ಣ ವಾಗಿ ಹಾಳಾಗಿದೆ. ಇದೇ ಈಗ ಕೋರ್ಟ್‌ನ ಗಮನ ಸೆಳೆದಿರುವ ಅಂಶ.
 

Advertisement

Udayavani is now on Telegram. Click here to join our channel and stay updated with the latest news.

Next