ಕರಾಚಿ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ಪಾಕಿಸ್ಥಾನಕ್ಕೆ ಸಿಗದಿದ್ದರೆ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ನೇರವಾಗಿ ಬಿಸಿಸಿಐಗೆ ಸವಾಲು ಹಾಕಿದ್ದಾರೆ.
ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ನಿಂತು ಬಹಳ ಸಮಯವೇ ಆಗಿದೆ. ಈಗೇನಿದ್ದರೂ ಏಷ್ಯಾ ಕಪ್, ವಿಶ್ವಕಪ್‌ನಲ್ಲೇ ಪರಸ್ಪರ ಮುಖಾಮುಖಿಯಾಗುವುದು. ಏಷ್ಯಾ ಕಪ್ ಪಾಕ್‌ನಲ್ಲೇ ನಡೆಯುವುದೆಂದು ಹಿಂದೆಯೇ ನಿರ್ಧಾರವಾಗಿತ್ತು. ಆದರೆ ಆ ದೇಶಕ್ಕೆ ತೆರಳಲು ಭಾರತ ಸರಕಾರ ಅನುಮತಿ ನೀಡುವುದಿಲ್ಲ. ಹೀಗಾಗಿ ಕೂಟವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಿ ಎನ್ನುವುದು ಬಿಸಿಸಿಐ ವಾದ. ಇದಕ್ಕೆ ಪ್ರತಿಯಾಗಿ ವಿಶ್ವಕಪ್ ಬಹಿಷ್ಕರಿಸುವ ತಂತ್ರವನ್ನು ಪಾಕ್ ಮಾಡಿದೆ.
ಪಾಕ್-ಭಾರತ ಪಂದ್ಯಗಳನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಲು ನಾವು ಸಿದ್ಧರಿದ್ದೇವೆ. ಉಳಿದ ಪಂದ್ಯಗಳು ಪಾಕ್‌ನಲ್ಲೇ ನಡೆಯಬೇಕೆಂದು ನಮ್ಮ ಬಯಕೆ. ಆದರೆ ಬಿಸಿಸಿಐ ಸಂಪೂರ್ಣ ಏಷ್ಯಾ ಕಪ್ ಸ್ಥಳಾಂತರಕ್ಕೆ ಒತ್ತಾಯಿಸುತ್ತಿದೆ ಎನ್ನುವುದು ಪಾಕ್ ಆಕ್ರೋಶ. ಭಾರತಕ್ಕೆ ತಾನೇನು ಮಾಡುತ್ತಿದ್ದೇನೆ ಎನ್ನುವುದು ಗೊತ್ತಿಲ್ಲ. ಈಗವರು ಏಷ್ಯಾ ಕಪ್‌ಗೆ ಬರದಿದ್ದರೆ, ನಾವು ವಿಶ್ವಕಪ್‌ಗೆ ಹೋಗುವುದಿಲ್ಲ, ಆಮೇಲೆ ಪಾಕ್‌ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅವರು ಬರುವುದಿಲ್ಲ. ಇದು ದೊಡ್ಡ ಸಮಸ್ಯೆಯನ್ನೇ ತಂದೊಡ್ಡುತ್ತದೆ ಎಂದು ಸೇಥಿ ಹೇಳಿದ್ದಾರೆ.