Advertisement

ಐಎಂಎಫ್ ಮುಂದೆ ತಲೆಬಾಗಿದ ಪಾಕ್‌

12:22 AM Feb 04, 2023 | Team Udayavani |

ಪಾಕಿಸ್ಥಾನದಲ್ಲಿ ನಾಗರಿಕರು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ಸೃಷ್ಟಿ ಯಾಗಿದ್ದು, ದೇಶ ಬಹುತೇಕ ದಿವಾಳಿಯಂಚಿನಲ್ಲಿದೆ. ಆರ್ಥಿಕ ನೆರವಿಗಾಗಿ ವಿದೇಶಗಳನ್ನು ಅಂಗಲಾಚಿದರೂ ಯಾವೊಂದು ದೇಶವೂ ಪಾಕಿಸ್ಥಾನಕ್ಕೆ ನೆರವು ನೀಡಲು ಮುಂದೆ ಬರುತ್ತಿಲ್ಲ. ಏತನ್ಮಧ್ಯೆ ಸಾಲ ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೆಲವೊಂದು ಕಠಿನ ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಒಪ್ಪಿಕೊಂಡು ಅದನ್ನು ತತ್‌ಕ್ಷಣದಿಂದ ಜಾರಿಗೆ ತಂದದ್ದೇ ಆದಲ್ಲಿ ಸಾಲ ನೀಡುವುದಾಗಿ ಪಾಕಿಸ್ಥಾನ ಸರಕಾರಕ್ಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಸದ್ಯಕ್ಕಂತೂ ಹಾಲಿ ಬಿಕ್ಕಟ್ಟಿನಿಂದ ಪಾರಾದರೆ ಸಾಕು ಎಂಬ ಮನಃಸ್ಥಿತಿಯಲ್ಲಿರುವ ಪಾಕ್‌ ಸರಕಾರ ಅನ್ಯಮಾರ್ಗವಿಲ್ಲದೆ ಐಎಂಎಫ್  ನ ಎಲ್ಲ ಷರತ್ತುಗಳಿಗೆ ಸಮ್ಮತಿಯನ್ನು ಸೂಚಿಸುವ ಇಂಗಿತ ವ್ಯಕ್ತಪಡಿಸಿದ್ದು ತನ್ಮೂಲಕ ಐಎಂಎಫ್ ಮುಂದೆ ಮಂಡಿಯೂರಿದೆ.

Advertisement

ಕಳೆದೊಂದು ದಶಕದಿಂದೀಚೆಗೆ ಪಾಕಿಸ್ಥಾನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ. ಇದರ ಹೊರತಾಗಿಯೂ ಚೀನ ಸಹಿತ ತನ್ನ ಕೆಲವೊಂದು ಆಪ್ತ ರಾಷ್ಟ್ರಗಳ ನೆರವಿನಿಂದ ಏದುಸಿರು ಬಿಡುತ್ತ ದಿನದೂಡುತ್ತಲೇ ಬಂದಿದ್ದ ಪಾಕಿಸ್ಥಾನ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಆರ್ಥಿಕವಾಗಿ ಸಂಪೂರ್ಣವಾಗಿ ಜರ್ಝ ರಿತವಾಗಿದೆ. ಜನರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿರುವಂತೆಯೇ ಪಾಕಿಸ್ಥಾನದ ಪ್ರಧಾನಿ ಶೆಹಬಾಜ್‌ ಶರೀಫ್ ಅವರು ದೇಶವನ್ನು ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಲು ಹೆಣಗಾಡುತ್ತಿದ್ದಾರೆ. ಈ ಹಿಂದೆ ಸದಾ ತನ್ನ ಬೆಂಗಾವಲಿಗೆ ನಿಲ್ಲುತ್ತಿದ್ದ ಚೀನ ಸಹಿತ ಪಾಕ್‌ನ ಪರಮಾಪ್ತ ರಾಷ್ಟ್ರಗಳು ಇದೀಗ ನಡುನೀರಿನಲ್ಲಿ ಕೈಬಿಟ್ಟಿವೆ.
ವಿದ್ಯುತ್‌, ತೈಲ, ಆಹಾರ, ಇಂಧನ ಸಹಿತ ಪ್ರತಿಯೊಂದೂ ಸೇವೆ ಮತ್ತು ವಸ್ತುಗಳ ಬೆಲೆ ಭಾರೀ ಏರಿಕೆಯನ್ನು ಕಂಡಿದೆ. ದೇಶದಲ್ಲಿನ ಹಣದುಬ್ಬರ ಸರಿಸುಮಾರು 5 ದಶಕಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಇನ್ನು ಬಾಹ್ಯ ಸಾಲ ಮರುಪಾವತಿಗೆ ಪರದಾಡುತ್ತಿರುವ ಪಾಕ್‌ನಲ್ಲಿನ ವಿದೇಶಿ ವಿನಿಮಯ ಮೀಸಲು 3.1 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದ್ದು ಸದ್ಯದ ಸ್ಥಿತಿಯಲ್ಲಿ ಇದು ಮೂರು ವಾರಗಳಲ್ಲಿಯೇ ಮುಗಿಯಲಿದೆ. ಇದೇ ವೇಳೆ ದೇಶದಲ್ಲಿ ರಾಜಕೀಯ ಅಸ್ಥಿರತೆ, ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಅಲ್ಲಿನ ಸರಕಾರವನ್ನು ಮತ್ತಷ್ಟು ಕಂಗೆಡುವಂತೆ ಮಾಡಿದೆ.

ಕೊರೊನಾ ಹಾಗೂ ರಷ್ಯಾ-ಉಕ್ರೇನ್‌ ನಡುವಣ ಯುದ್ಧದ ಬಳಿಕ ಬಹುತೇಕ ದೇಶಗಳು ಆರ್ಥಿಕ ಸಂಕಷ್ಟಕ್ಕೀಡಾಗಿವೆ. ಅಷ್ಟು ಮಾತ್ರವಲ್ಲದೆ ಆಹಾರ ಪೂರೈಕೆ ಸರಪಳಿಯ ಮೇಲೂ ಯುದ್ಧ ಗಂಭೀರ ಪರಿಣಾಮ ಬೀರಿದೆ. ಇದರ ಜತೆಯಲ್ಲಿ ಆರ್ಥಿಕವಾಗಿ ಬಲಾಡ್ಯವಾಗಿರುವ ರಾಷ್ಟ್ರಗಳು ಪ್ರಸಕ್ತ ವರ್ಷ ತೀವ್ರ ಆರ್ಥಿಕ ಹಿಂಜರಿತಕ್ಕೊಳಗಾಗುವ ಸಾಧ್ಯತೆಗಳು ದಟ್ಟವಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ರಾಷ್ಟ್ರಗಳು ಉಳಿತಾಯ ಮತ್ತು ಸ್ವರಕ್ಷಣೆಯ ಮಂತ್ರವನ್ನು ಜಪಿಸ ಲಾರಂಭಿಸಿವೆ. ಈ ಎಲ್ಲ ಕಾರಣಗಳಿಂದಾಗಿ ಪಾಕಿಸ್ಥಾನಕ್ಕೆ ಯಾರೂ ನೆರವು ನೀಡಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಸಾಲಕ್ಕಾಗಿ ಐಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಸದ್ಯ ಪಾಕಿಸ್ಥಾನದಲ್ಲಿರುವ ಐಎಂಎಫ್ ನಿಯೋಗ ದೇಶದ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸಾಲ ನೀಡಲು ವಿದ್ಯುತ್‌ ದರ ಹೆಚ್ಚಳ, ಸಬ್ಸಿಡಿಯಲ್ಲಿ ಇಳಿಕೆ ಸಹಿತ ಕೆಲವೊಂದು ಕಠಿನ ಷರತ್ತುಗಳನ್ನು ವಿಧಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ “ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ’ ಎಂಬ ಸ್ಥಿತಿಯಲ್ಲಿರು ವುದರಿಂದ ಪಾಕಿಸ್ಥಾನ ಈ ಎಲ್ಲ ಷರತ್ತುಗಳಿಗೆ ತಲೆಬಾಗಿದೆ. ಅಷ್ಟು ಮಾತ್ರವಲ್ಲದೆ ದೇಶದಲ್ಲಿ ಭಯೋತ್ಪಾದಕರು ತಿರುಗಾಡುತ್ತಿರುವುದಾಗಿ ಸ್ವತಃ ಪ್ರಧಾನಿ ಶೆಹಬಾಜ್‌ ಶರೀಫ್ ಒಪ್ಪಿಕೊಳ್ಳುವ ಮೂಲಕ ವಿಶ್ವ ಸಮುದಾಯದ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಪಾಕಿಸ್ಥಾನ ಈ ಹಿಂದಿನ ಘಟನಾವಳಿಗಳಿಂದ ಪಾಠ ಕಲಿ ಯದೇ ಹೋದುದರಿಂದ ಮತ್ತು ಸ್ವಯಂಕೃತ ಅಪರಾಧಗಳಿಂದ ಇನ್ನಿಲ್ಲದ ಸಂಕಷ್ಟವನ್ನು ಎದುರಿಸುತ್ತಿದೆ. ಸದ್ಯಕ್ಕಂತೂ ಪಾಕಿಸ್ಥಾನದ ಪಾಲಿಗೆ ಭವಿಷ್ಯಕ್ಕಿಂತ ವರ್ತಮಾನದ್ದೇ ಬಲುದೊಡ್ಡ ಚಿಂತೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next