ಹೊಸದಿಲ್ಲಿ : ವಿಶ್ವಾದ್ಯಂತ ಸಂಭಾವ್ಯ ಉಗ್ರ ದಾಳಿ ಮತ್ತು ಬೆದರಿಕೆಗಳನ್ನು ವಿಶ್ಲೇಷಿಸುವ ಅಮೆರಿಕದ ಗುಪ್ತಚರ ಸಮುದಾಯವು ಭಾರತ – ಪಾಕ್ ನಡುವಿನ ಗಡಿ ಉದ್ರಿಕ್ತತೆಯು ತಾರಕಕ್ಕೇರಿರುವ ಹಿನ್ನೆಯಲ್ಲಿ ಪಾಕ್ ಉಗ್ರರು ಭಾರತ ಮತ್ತು ಅಫ್ಘಾನಿಸ್ಥಾನದಲ್ಲಿ ಈ ವರ್ಷ ಮತ್ತೆ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಪಾಕಿಸ್ಥಾನ ಗಡಿ ದಾಟಿ ಭಾರತವನ್ನು ಪ್ರವೇಶಿಸಿರುವ ಪಾಕ್ ಉಗ್ರರು 2016ರಲ್ಲಿ ಎರಡು ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆಸಿರುವ ಕಾರಣ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು ಗಡಿ ಉದ್ರಿಕ್ತತೆ ತಾರಕಕ್ಕೇರಿದೆ ಎಂದು ಹೇಳಿದೆ.
ಈ ವರ್ಷ 2017ರಲ್ಲಿ ಮತ್ತೆ ಪಾಕ್ ಉಗ್ರರು ಪಾಕ್ ಗಡಿ ದಾಟಿ ಭಾರತವನ್ನು ಪ್ರವೇಶಿಸಿ ದೊಡ್ಡ ಮಟ್ಟ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ. ಪಾಕ್ ಉಗ್ರರಿಗೆ ಅಲ್ಲಿನ ಸರಕಾರ, ಸೇನೆ ಮತ್ತು ಐಎಸ್‌ಐನೆರವು ನೀಡುತ್ತಿರುವುದರಿಂದ ಅವರು ಭಯೋತ್ಪಾದಕ ಕೃತ್ಯಗಳನ್ನು ಮನಸೋ ಇಚ್ಛೆ ನಡೆಸುತ್ತಿದ್ದಾರೆ ಎಂದು ಭಾರತ ದೂರುತ್ತಿದೆ ಎಂಬುದಾಗಿ ಅಮೆರಿಕ ಗುಪ್ತಚರ ವರದಿ ತಿಳಿಸಿದೆ.
ಭಾರತವನ್ನು ಗುರಿ ಇರಿಸಿ ದಾಳಿ ನಡೆಸುವ ಉಗ್ರರನ್ನು ಮಟ್ಟ ಹಾಕುವಲ್ಲಿ ಪಾಕ್ ಸರಕಾರ ಸೋತಿರುವುದು, 2016ರ ಪಠಾಣ್‌ಕೋಟ್ ದಾಳಿ ಕುರಿತಾದ ಪಾಕ್ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ 2016ರಲ್ಲಿ ಸಂಪೂರ್ಣವಾಗಿ ಹದಗೆಡಲು ಕಾರಣವಾಗಿದೆ.
ಮಾತ್ರವಲ್ಲದೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಸೇನೆ, ಉಗ್ರರನ್ನು ಭಾರತದೊಳಗೆ ನುಸುಳಿಸುವ ಸಲುವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು, ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ಕಾಳಗ ನಡೆಸುವುದು, ಉಭಯ ದೇಶಗಳ ನಡುವಿನ ಗಡಿ ಉದ್ರಿಕ್ತತೆ ಹೆಚ್ಚಲು ಕಾರಣವಾಗಿದೆ ಎಂದು ಅಮೆರಕ ಗುಪ್ತಚ ದಳ ಹೇಳಿದೆ.
ಒಂದೊಮ್ಮೆ ಈ ವರ್ಷ ಮತ್ತೆ ಪಾಕ್ ಉಗ್ರರು ಭಾರತದ ಮೇಲೆ ದೊಡ್ಡ ಮಟ್ಟದ ಉಗ್ರ ದಾಳಿ ನಡೆಸಿದಲ್ಲಿ ಭಾರತ ಸರಕಾರ ಪೂರ್ಣ ಪ್ರಮಾಣದ ಯುದ್ಧಕ್ಕೆ ಮುಂದಾಗುವ ಸಾಧ್ಯತೆ ಇರುವುದರಿಂದ ಇದನ್ನು ಪಾಕ್ ಸರಕಾರ ಚೆನ್ನಾಗಿ ಮನಗಾಣಬೇಕಿದೆ ಎಂದು ಗುಪ್ತಚರ ದಳ ಎಚ್ಚರಿಸಿದೆ.
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ಕೂಡ ಪಾಕಿಸ್ಥಾನಕ್ಕೆ ಈ ನಿಟ್ಟಿನಲ್ಲಿ ಕಟುವಾದ ಎಚ್ಚರಿಕೆಯನ್ನು ನೀಡಿರುವುದಾಗಿ ವರದಿಯಾಗಿದೆ.