ಶ್ರೀನಗರ : ಪಾಕಿಸ್ಥಾನದ ಸೇನೆ ಇಂದು ಮಂಗಳವಾರ ಕೂಡ, ಭಾರತದ ಕಟು ಎಚ್ಚರಿಕೆಯನ್ನು ಕಡೆಗಣಿಸಿ, ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಜಮ್ಮು ಕಾಶ್ಮೀರದ ಭಿಂಭೇರ್ ಗಾಲಿ ಮತ್ತು ಪೂಂಚ್ ವಲಯದಲ್ಲಿ ಗುಂಡಿನ ದಾಳಿ ನಡೆಸಿದೆ.
ಪಾಕ್ ಪಡೆಗಳ ಈ ದಾಳಿಗೆ ಭಾರತ ಅತ್ಯುಗ್ರ ಉತ್ತರ ನೀಡಿದೆ. ಇಂದು ಮಂಗಳವಾರ ಬೆಳಗ್ಗೆ 6.45ರ ಹೊತ್ತಿಗೆ ಗಡಿಯಲ್ಲಿ ಪಾಕ್‌ನಿಂದ ಅಪ್ರಚೋದಿತ ಗುಂಡಿನ ದಾಳಿ ಆರಂಭವಾಗಿದ್ದು ಈ ಹೊತ್ತಿನಲ್ಲೂ ಅದು ಮುಂದುವರಿದಿದೆ.
ಜಮ್ಮು ಕಾಶ್ಮೀರದ ಪೂಂಚ್, ರಾಜೋರಿ ಮತ್ತು ಬಾರಾಮೂಲಾ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆಗೈದು ಪಾಕ್ ಸೇನೆ ನಡೆಸಿದ್ದ ಭಾರೀ ಗುಂಡಿನ ಹಾಗೂ ಮೋರ್ಟಾರ್ ಶೆಲ್ಲಿಂಗ್ ದಾಳಿಗೆ ನಿನ್ನೆಯಷ್ಟೇ ಓರ್ವ ಭಾರತೀಯ ಜವಾನ ಹುತಾತ್ಮನಾಗಿ ಏಳು ವರ್ಷ ಪ್ರಾಯದ ಬಾಲಕಿ ಹತಳಾಗಿದ್ದಳು.
ಪಾಕಿಸ್ಥಾನದ ಈ ದಾಳಿಗೆ ಭಾರತ ಪ್ರಬಲ ಉತ್ತರ ನೀಡಿದ ಪರಿಣಾಮವಾಗಿ ನಾಲ್ವರು ಪಾಕ್ ಯೋಧರು ಮಡಿದಿರುವುದಾಗಿ ತಿಳಿದುಬಂದತ್ತು.
ಇದನ್ನು ಅನುಸರಿಸಿ ನಿನ್ನೆ ಸೋಮವಾರವೇ ಪಾಕ್ ಡಿಜಿಎಂಓ ಅವರು ಭಾರತದ ಡಿಜಿಎಂಏ ಜತೆಗೆ ಫೋನ್ ಸಂಭಾಷಣೆ ನಡೆಸಿದ್ದರು. ಸಾಮಾನ್ಯವಾಗಿ ಪ್ರತೀ ಮಂಗಳವಾರ ಈ ರೀತಿಯ ಫೋನ್ ಸಂಭಾಷಣೆ ನಡೆಯುತ್ತದೆ. ಆದರೆ ನಿನ್ನೆ ಸೋಮವಾರವೇ ಪಾಕ್ ಅಧಿಕಾರಿ ಫೋನಿನಲ್ಲಿ ಮಾತನಾಡಿದ್ದು ಗಡಿಯಲ್ಲಿ ಕಳವಳಕಾರಿ ಸಂಘರ್ಷದ ತೀವ್ರತೆಗೆ ಸಾಕ್ಷಿಯಾಗಿದೆ.