ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಗೊತ್ತಾಗುತ್ತಿದ್ದಂತೆ, ವಿಶ್ವಾಸಮತ ಸಾಬೀತುಪಡಿಸಲು ಒಂದು ದಿನ ಬಾಕಿಯಿದ್ದಾಗ ಇಮ್ರಾನ್ ಖಾನ್ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣವನ್ನು ನಾವಿಲ್ಲಿ ಗಮನಿಸಬೇಕು. ಅಂದು ತೀರಾ ಹತಾಶರಾಗಿ ಮಾತನಾಡಿದ್ದ ಇಮ್ರಾನ್ ಖಾನ್, ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ್ದರು. “ಪಾಕಿಸ್ಥಾನಕ್ಕೂ ಭಾರತದಂತೆಯೇ ಸ್ವತಂತ್ರ ವಿದೇಶಾಂಗ ನೀತಿ ಬೇಕಿತ್ತು’ ಎಂದು ನುಡಿದಿದ್ದರು.
Advertisement
ತಮ್ಮ ಈ ಆಲೋಚನೆಯನ್ನು ಸಮರ್ಥಿಸಿಕೊಳ್ಳುತ್ತಾ ಮಾತನಾಡಿದ್ದ ಅವರು, “ಭಾರತವು ತನ್ನ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾರ ಪರವೂ ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ನಮ್ಮ ಸ್ಥಿತಿ ನೋಡಿ. ನೀವು ರಷ್ಯಾ ವಿರುದ್ಧ ಮಾತನಾಡಲೇಬೇಕು ಎಂದು ಐರೋಪ್ಯ ಒಕ್ಕೂಟ ಮತ್ತು ಅಮೆರಿಕದಿಂದ ಒತ್ತಡದ ಮೇಲೆ ಒತ್ತಡ ಬರುತ್ತಿದೆ. ಅದೇ ರೀತಿ ಒತ್ತಡವನ್ನು ಅವರು ಭಾರತಕ್ಕೆ ಹೇರಲು ಸಾಧ್ಯವಿಲ್ಲ. ಏಕೆಂದರೆ ಭಾರತ ಒಂದು ಸಾರ್ವಭೌಮ ರಾಷ್ಟ್ರ. ಅದು ಅಲಿಪ್ತ ನೀತಿ ಅನುಸರಿಸುತ್ತಿದೆ.
Related Articles
ಅಂದಹಾಗೆ ಪಾಕ್ ವಿದೇಶಾಂಗ ನೀತಿಗೂ ಇಮ್ರಾನ್ ಹುದ್ದೆ ಕಳೆದುಕೊಳ್ಳುವುದಕ್ಕೂ ಏನು ಸಂಬಂಧ? ಒಂದು ರೀತಿಯಲ್ಲಿ ಇಮ್ರಾನ್ ಖಾನ್‌ರನ್ನು ರಷ್ಯಾ ಮತ್ತು ಉಕ್ರೇನ್ ಯುದ್ಧದ ನೇರ ಬಲಿಪಶು ಎಂದೂ ಹೇಳಬಹುದು. ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದಾಗಿನಿಂದಲೂ ಪಾಶ್ಚಾತ್ಯ ದೇಶಗಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದರು. ಹಲವು ವರ್ಷಗಳಿಂದಲೂ ಪಾಕಿಸ್ಥಾನವನ್ನು ನ್ಯಾಟೋಯೇತರ ವ್ಯೂಹಾತ್ಮಕ ಮಿತ್ರರಾಷ್ಟ್ರ ಎಂದೇ ಪರಿಗಣಿಸಿಕೊಂಡು ಬಂದಿದ್ದ ಅಮೆರಿಕದಿಂದಲೂ ದೂರವಾಗುತ್ತಾ ಹೋದರು. ರಷ್ಯಾ ಮತ್ತು ಚೀನದೊಂದಿಗೆ ಕೈಕುಲುಕಿದ್ದೂ ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಅಲ್ಲದೇ ಇಮ್ರಾನ್ ಅವರ ಖಟ್ಟರ್ ಬಲಪಂಥೀಯವಾದ, ತಾಲಿಬಾನ್ ಬಗೆಗಿನ ಸಹಾನುಭೂತಿ, ಚೀನದೊಂದಿಗಿನ ಒಡನಾಟವೂ ಅಮೆರಿಕದ ಕಣ್ಣಲ್ಲಿ ಪಾಕಿಸ್ಥಾನ “ವಿಲನ್’ ಆಗಿ ಕಾಣುವಂತೆ ಮಾಡಿತು. ಪರಿಸ್ಥಿತಿ ಹೀಗಿರು ವಾಗಲೇ ರಷ್ಯಾವು ಉಕ್ರೇನ್ ಮೇಲೆ ಯುದ್ಧ ಘೋಷಿಸಿ ದಂದು ಇಮ್ರಾನ್ ಖಾನ್ ರಷ್ಯಾ ಅಧ್ಯಕ್ಷರ ಅರಮನೆಯಲ್ಲಿದ್ದರು. ಅವರ ಈ ನಡೆಯು ಇಡೀ ಜಗತ್ತನ್ನೇ ಬೆರಗಾಗಿಸಿತ್ತು. ಮಾಸ್ಕೋಗೆ ಹೋಗಬಾರದು ಎಂಬ ಅಮೆರಿಕದ ಸೂಚನೆ ಹೊರತಾಗಿಯೂ ಪುತಿನ್‌ರನ್ನು ಭೇಟಿಯಾದ ಇಮ್ರಾನ್ ಅಂದೇ ಅಮೆರಿಕದ ಕೆಂಗಣ್ಣಿಗೆ ಗುರಿಯಾದರು. ಈ ಬೆಳವಣಿಗೆಗೂ, “ಸರಕಾರ ಪತನಗೊಳಿಸಲು ಅಮೆರಿಕ ಸಂಚು ರೂಪಿಸಿದೆ’ ಎಂಬ ಇಮ್ರಾನ್ ಆರೋಪಕ್ಕೂ ನಂಟಿರುವುದನ್ನು ನಾವಿಲ್ಲಿ ಗಮನಿಸಬಹುದು. ಪಾಕ್ ಸರಕಾರವನ್ನು ಕೆಡವಲು ಅಮೆರಿಕದ ಕಡೆಯಿಂದ ಬಂದಿತ್ತು ಎನ್ನಲಾದ ಪತ್ರವನ್ನು ಇತ್ತೀಚೆಗೆ ಇಮ್ರಾನ್ ಬಹಿರಂಗಪಡಿಸಿದ್ದರು.
Advertisement
ಇದಿಷ್ಟೇ ಅಲ್ಲದೆ ಚೀನದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆ ಖಂಡಿಸಿ ಬಹುತೇಕ ಎಲ್ಲ ರಾಷ್ಟ್ರಗಳೂ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನ ಸಮಾರಂಭಕ್ಕೆ ಬಹಿಷ್ಕಾರ ಹಾಕಿದ್ದವು. ಆಗಲೂ, ಎಲ್ಲರನ್ನೂ ಧಿಕ್ಕರಿಸಿ ಆ ಸಮಾರಂಭದಲ್ಲಿ ಇಮ್ರಾನ್ ಭಾಗಿಯಾಗಿದ್ದರು. ಚೀನಾದ ಒನ್ ಚೈನಾ ಪಾಲಿಸಿ, ದಕ್ಷಿಣ ಚೀನ ಸಮುದ್ರ, ಹಾಂಕಾಂಗ್, ಕ್ಸಿನ್‌ಜಿಯಾಂಗ್, ಟಿಬೆಟ್ ವಿಚಾರದಲ್ಲಿ ಚೀನದ ನಿಲುವನ್ನು ಪಾಕ್ ಬೆಂಬಲಿಸಿತ್ತು. ಒಟ್ಟಿನಲ್ಲಿ “ತಟಸ್ಥ ನಿಲುವು’ ತಳೆಯಲು ಬಿಡದಂತಹ ವಿದೇಶಾಂಗ ನೀತಿ ಮತ್ತು ತಾವು ಇಟ್ಟ ತಪ್ಪು ಹೆಜ್ಜೆಗಳು ತಮ್ಮ ಪತನಕ್ಕೆ ಕಾರಣವಾ ದವು ಎಂಬುದು ಕೊನೇ ಕ್ಷಣದಲ್ಲಿ ಇಮ್ರಾನ್‌ಗೆ ಅರಿವಾಯಿತು.
ಭಾರತದ ತಟಸ್ಥ ನಿಲುವುಇನ್ನು, ಜಾಗತಿಕ ಸಂಘರ್ಷಗಳ ವಿಚಾರಕ್ಕೆ ಬಂದಾಗ ಭಾರತವು ವಹಿಸುತ್ತಾ ಬಂದಿರುವ ತಟಸ್ಥ ನಿಲುವು ನಮ್ಮ ದೇಶಕ್ಕೆ ವರವಾಗಿದೆ. 1926ರಲ್ಲಿ ಬ್ರುಸೆಲ್ಸ್ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾಗಲೇ ಪಂಡಿತ್ ಜವಾಹರಲಾಲ್ ನೆಹರೂ ಅವರ ಮನದಲ್ಲಿ ಅಲಿಪ್ತ ತತ್ವದ ಬೀಜ ಮೊಳಕೆಯೊಡೆದಿತ್ತು. ಅನಂತರ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ, “ಮುಂದೆ ಯಾವುದೇ ದೇಶಗಳ ನಡುವೆ ಯುದ್ಧ ನಡೆದರೂ ಭಾರತ ಮಾತ್ರ ಯಾವುದೇ ಗುಂಪಿನೊಂ ದಿಗೂ ಗುರುತಿಸಿಕೊಳ್ಳುವುದು ಬೇಡ ಎಂಬ ಅಲಿಪ್ತ ನೀತಿಯನ್ನು ಪಾಲಿಸೋಣ’ ಎಂದಿದ್ದರು. ಭಾರತದ, ಭಾರತೀಯರ ಹಿತಾಸಕ್ತಿ ಯಿಂದ ಯಾವುದೇ ಶಕ್ತಿಶಾಲಿ ರಾಷ್ಟ್ರದ ದ್ವೇಷ ಕಟ್ಟಿಕೊಳ್ಳುವುದು ಬೇಡ ಎಂಬ ಒಳ್ಳೆಯ ಆಲೋಚನೆ ಇದರ ಹಿಂದಿತ್ತು.
ಅಷ್ಟೇ ಅಲ್ಲ, ಅಲಿಪ್ತ ನೀತಿಯನ್ನು ಒಪ್ಪಿಕೊಳ್ಳುವಂಥ ಸಮಾನ ಮನಸ್ಕ ದೇಶಗಳನ್ನು ಒಗ್ಗೂಡಿಸಿ ತೃತೀಯ ಶಕ್ತಿಯನ್ನು ಹುಟ್ಟು ಹಾಕುವ ಕೆಲಸವನ್ನೂ ಅವರು ಮಾಡಿದ್ದರು. 1961ರಲ್ಲಿ ಬೆಲ್‌ಗೆಡ್‌ನಲ್ಲಿ ಅಲಿಪ್ತ ಚಳವಳಿ ಹುಟ್ಟಿಕೊಂಡಿತು. ಆ ಸಮಯದಲ್ಲಿ “ಅಲಿಪ್ತ ನೀತಿಯು ದುರ್ಬಲರ ಅಸ್ತ್ರ’ ಎಂಬ ಟೀಕೆಗಳೂ ಕೇಳಿಬಂದವು. ಆಗ ಭಾರತದ ನಿಲುವನ್ನು ಟೀಕಿಸಿದ ದೇಶಗಳ ಪೈಕಿ ಪಾಕಿಸ್ಥಾನವೂ ಒಂದು. ಪಾಕ್‌ನ ಮಾಜಿ ಅಧ್ಯಕ್ಷ ಜ. ಅಯ್ಯುಬ್ ಖಾನ್ ಅವರು “ಅಲಿಪ್ತ ನೀತಿಯು ಒಂದು ಬೂಟಾ ಟಿಕೆ. ಬೇಲಿಯ ಮೇಲೆ ಕುಳಿತು, ನಾವು ಆ ಕಡೆಗೂ ಇಲ್ಲ, ಈ ಕಡೆಗೂ ಇಲ್ಲ ಎಂದು ಬೊಬ್ಬಿಡುತ್ತಾ ಎರಡೂ ಕಡೆಯಿಂದ ಲಾಭ ಪಡೆಯುವ ತಂತ್ರ’ ಎಂದು ಮೂದಲಿಸಿದ್ದರು. ಎಷ್ಟೇ ವಿರೋಧಗಳು, ಮೂದಲಿಕೆಯ ಮಾತುಗಳು ಕೇಳಿಬಂದರೂ ನೆಹರೂ ಮಾತ್ರ ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದರು. ಅಂದಿನಿಂದ ಇಂದಿನವರೆಗೂ ಭಾರತ ತನ್ನ ಈ ನೀತಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ಶಕ್ತಿಶಾಲಿ ರಾಷ್ಟ್ರವಿರಲೀ ದುರ್ಬಲ ದೇಶವೇ ಇರಲಿ, ಎರಡೂ ದೇಶಗಳ ನಡುವೆ ಸಂಘರ್ಷ ಏರ್ಪಟ್ಟಾಗ ಭಾರತವು ಯಾರನ್ನೂ ಬೆಂಬಲಿಸದೇ ಯಾರನ್ನೂ ವಿರೋಧಿಸದೇ ಈ ತಟಸ್ಥ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಈಗ ನಡೆಯುತ್ತಿರುವ ರಷ್ಯಾ – ಉಕ್ರೇನ್ ಯುದ್ಧದಲ್ಲೂ ಅಷ್ಟೆ. ಭಾರತದ ಈ ವಿದೇಶಾಂಗ ನೀತಿಯ ಪರಿಣಾಮವಾಗಿಯೇ ನಾವು ರಷ್ಯಾವನ್ನು ವಿರೋಧಿಸಲಿಲ್ಲ ಎಂಬ ನೆಪವನ್ನು ಇಟ್ಟು ಕೊಂಡು ಅಮೆರಿಕ ಸೇರಿದಂತೆ ಯಾವುದೇ ಬಲಿಷ್ಠ ರಾಷ್ಟ್ರವೂ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ರಾಷ್ಟ್ರಗಳ ನಿರ್ಬಂಧದ ನಡುವೆಯೂ ನಿರ್ಭೀತಿಯಿಂದ ಭಾರತ ವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ, ಎಸ್400 ಕ್ಷಿಪಣಿ ರಕ್ಷಣ ವ್ಯವಸ್ಥೆ ಖರೀದಿಸಲೂ ಸಾಧ್ಯವಾಗುತ್ತಿದೆ. ಯಾರ ವೈರತ್ವವನ್ನೂ ಕಟ್ಟಿಕೊಳ್ಳದೇ ಯಾರ ಹಂಗೂ ಇಲ್ಲದೇ, ಶಾಂತಿಯು ತ ವಾಗಿ ಬದುಕುವ ವ್ಯವಸ್ಥೆಯನ್ನು “ಅಲಿಪ್ತ ನೀತಿ’ಯು ಭಾರತಕ್ಕೆ ಒದಗಿಸಿದೆ. ಆದರೆ ಸ್ವತಂತ್ರವಾದ ವಿದೇಶಾಂಗ ನೀತಿಯಿ ಲ್ಲದೇ ಯಾರನ್ನೋ ಅವಲಂಬಿಸುತ್ತಾ, ಅವರನ್ನೇ ಆರಾಧಿಸುತ್ತ ಅವರ ಮುಂದೆ ಕೈಯ್ಯೊಡ್ಡುತ್ತಾ ಬಂದಿರುವ ಕಾರಣಕ್ಕೇ ಪಾಕಿಸ್ಥಾನವು ಈಗ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಭಾರತದಂತಹ ತಟಸ್ಥ ನೀತಿಯನ್ನು ಅನುಸರಿಸುವ ಅವಕಾಶ ಪಾಕಿಸ್ಥಾನಕ್ಕೆ ಇದ್ದಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ ಎಂಬುದು ಅರ್ಥವಾಗುವ ಹೊತ್ತಿಗೆ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯನ್ನೇ ಕಳೆದುಕೊಂಡಿದ್ದಾರೆ. ಭಾರತಕ್ಕೇನು ಲಾಭ?
ಇಮ್ರಾನ್ ಖಾನ್ ಹುದ್ದೆಯಿಂದ ಇಳಿದಿದ್ದು ಭಾರತಕ್ಕೇ ಲಾಭವೇ? ಇಂಥದ್ದೊಂದು ವಿಶ್ಲೇಷಣೆಗಳು ಶುರುವಾಗಿವೆ. ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧ ಸುಧಾರಿಸಲಾಗದ ಹಂತಕ್ಕೆ ತಲುಪಿದ್ದು ಇಮ್ರಾನ್ ಕಾಲದಲ್ಲೇ. ಅದಕ್ಕೂ ಹಿಂದೆ ನವಾಜ್ ಷರೀಫ್ ಕಾಲದಲ್ಲಿ ಪರ್ವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಇತ್ತು. ಮುಷರ್ರಫ್ ಅವಧಿಯಲ್ಲೂ ಎರಡು ದೇಶಗಳು ಪರಸ್ಪರ ಕುಳಿತು ಮಾತುಕತೆಯನ್ನಾದರೂ ನಡೆಸಿದ್ದವು. ಆದರೆ, ಇಮ್ರಾನ್ ಕಾಲದಲ್ಲಿ ಇದ್ಯಾವುದೂ ಆಗಲೇ ಇಲ್ಲ. ಮುಂದೆ ಬರಲಿರುವ ಶಹಬಾಜ್ ಷರೀಫ್, ನವಾಜ್ ಷರೀಫ್ ಸಹೋದರ. ಇವರು ಭಾರತದ ಜತೆ ಸಂಬಂಧ ಸುಧಾರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಇದಕ್ಕೆ ಪೂರಕವೆಂಬಂತೆ, ಇತ್ತೀಚೆಗಷ್ಟೇ ಸೇನಾ ಮುಖ್ಯಸ್ಥ ಜ| ಬಾಜ್ವಾ ಭಾರತದ ಜತೆ ಮಾತುಕತೆ ಮೂಲಕವೇ ಸಂಬಂಧ ಸುಧಾರಿಸಿಕೊಳ್ಳೋಣ ಎಂದಿದ್ದಾರೆ. – ಹಲೀಮತ್ ಸಅದಿಯಾ