Advertisement

ಹರ್ಯಾಣ ಗಲಭೆಗೆ ಪಾಕ್‌ ಯೂಟ್ಯೂಬ್‌ ಚಾನೆಲ್‌ ಕುಮ್ಮಕ್ಕು

08:18 AM Aug 06, 2023 | Team Udayavani |

ಚಂಡೀಗಢ: ಹರ್ಯಾಣದ ಮೇವತ್‌ನಲ್ಲಿ ಕೋಮು ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಪಾಕಿಸ್ತಾನದ ಯೂಟ್ಯೂಬ್‌ ಚಾನೆಲ್‌ “ಅಹ್ಸಾನ್‌ ಮೇವಾಟಿ ಪಾಕಿಸ್ತಾನಿ’ ಅನ್ನು ನಿಷೇಧಿಸಲಾಗಿದೆ.

Advertisement

ಮೇವತ್‌ನಲ್ಲಿ ಎರಡು ಕೋಮುಗಳ ನಡುವೆ ದ್ವೇಷ ಕೆರಳಿಸಲು ನಿರ್ದಿಷ್ಟವಾಗಿ ವಿಡಿಯೋ ಕಂಟೆಂಟ್‌ ತಯಾರಿಸಿ, ಈ ಚಾನೆಲ್‌ ಹರಿಬಿಟ್ಟಿದೆ ಎಂದು ಭಾರತೀಯ ಅಧಿಕಾರಿಗಳು ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ ಯೂಟ್ಯೂಬ್‌ ಈ ಕ್ರಮ ಕೈಗೊಂಡಿದೆ.

ಈ ಚಾನೆಲ್‌ ನಿಷೇಧಕ್ಕೂ ಮೊದಲು 273 ವಿಡಿಯೋಗಳು ಹಾಗೂ 80,000 ಫಾಲೋವರ್‌ಗಳನ್ನು ಹೊಂದಿತ್ತು. ಹರ್ಯಾಣ ಕೋಮು ಗಲಭೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ಹಿಂಸೆಯನ್ನು ಉತ್ತೇಜಿಸುವ ಕಾರ್ಯದಲ್ಲಿ ನಿರತವಾಗಿತ್ತು. ಈ ಚಾನೆಲ್‌ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ವಾಸಿಸುವ ಜೀಶಾನ್‌ ಮುಷ್ತಾಕ್‌ ಅಲಿಯಾಸ್‌ ಅಹ್ಸಾನ್‌ ಮೇವಾಟಿ ಪಾಕಿಸ್ತಾನ್‌ ಅವರಿಗೆ ಸೇರಿದ್ದಾಗಿದೆ.

ಇದರ ಐಪಿ ವಿಳಾಸ ಪಾಕಿಸ್ತಾನ ಶಿಕ್ಷಣ ಮತ್ತು ಸಂಶೋಧನಾ ಜಾಲ(ಪಿಇಆರ್‌ಎನ್‌)ಕ್ಕೆ ಸೇರಿದ್ದಾಗಿದೆ. ಇದು ಪಾಕಿಸ್ತಾನ ಸರ್ಕಾರದ ಮಾಹಿತಿ ತಂತ್ರಜ್ಞಾನ ಕ್ರಿಯಾ ಯೋಜನೆ-2002ರ ಭಾಗವಾಗಿದೆ. ಪಿಇಆರ್‌ಎನ್‌ ಪಾಕಿಸ್ತಾನದ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರೀಕೃತ ಅಂತರ್ಜಾಲ ನೆಟ್‌ವರ್ಕ್‌ ಅನ್ನು ಒದಗಿಸುತ್ತದೆ.

ಮುಂದುವರಿದ ಬುಲ್ಡೋಜರ್‌ ದಾಳಿ:
ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ನೂಹ್‌ ಜಿಲ್ಲಾಡಳಿತ ಮೂರನೇ ದಿನವಾದ ಶನಿವಾರವೂ ಮುಂದುವರಿಸಿದೆ. 2.6 ಎಕರೆ ಸರ್ಕಾರ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 20ಕ್ಕೂ ಹೆಚ್ಚು ಮೆಡಿಕಲ್‌ ಅಂಗಡಿಗಳು ಹಾಗೂ ಇತರೆ ಅಂಗಡಿಗಳನ್ನು ನೆಲಸಮಗೊಳಿಸಿದೆ. “ಈ ಅಕ್ರಮ ಕಟ್ಟಡಗಳ ಮಾಲೀಕರ ಪೈಕಿ ಕೆಲವರು ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ಮೇಲೆ ದಾಳಿ ನಡೆಸಿದ ಆರೋಪಿಗಳು ಸಹ ಇದ್ದಾರೆ. ಕಟ್ಟಡ ಖಾಲಿ ಮಾಡುವಂತೆ ಕಟ್ಟಡಗಳ ಮಾಲೀಕರಿಗೆ ತಿಂಗಳ ಹಿಂದೆಯೇ ನೋಟಿಸ್‌ ನೀಡಲಾಗಿತ್ತು” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇನ್ನೊಂದೆಡೆ, “ನೂಹ್‌ ಗಲಭೆಯ ಕುರಿತು ಗುಪ್ತಚರ ಇಲಾಖೆಗೆ ಮೊದಲೇ ಮಾಹಿತಿ ಇತ್ತೇ ಎಂಬುದರ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ ವಿಚಾರಿಸಿದೆ. ಅವರು ಕೂಡ ತಮಗೆ ಮೊದಲೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದರು” ಎಂದು ಹರ್ಯಾಣ ಗೃಹ ಸಚಿವ ಅನಿಲ್‌ ವಿಜ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next