ಕ್ಯಾನ್‌ಬೆರಾ: ಪಾಕ್ ವನಿತೆಯರು ಟಿ20 ವಿಶ್ವಕಪ್ ಕೂಟದ ಮೊದಲ ಪಂದ್ಯದಲ್ಲೇ ಭರ್ಜರಿ ಬೇಟೆ ಯಾಡಿದ್ದಾರೆ. ಬಲಿಷ್ಠ ವೆಸ್ಟ್ ಇಂಡೀಸನ್ನು 8 ವಿಕೆಟ್‌ಗಳಿಂದ ಮಣಿಸಿದ್ದಾರೆ.
ಬುಧವಾರ ನಡೆದ “ಬಿ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 7 ವಿಕೆಟಿಗೆ 124 ರನ್ ಗಳಿಸಿದರೆ, ಪಾಕ್ 18.2 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಪಾಕ್ ಪರ ಆರಂಭಿಕರಾದ ಮುನೀಬಾ ಅಲಿ (25)-ಜವೇರಿಯಾ ಖಾನ್ (35) 7.2 ಓವರ್‌ಗಳಿಂದ 58 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ನಾಯಕಿ ಬಿಸ್ಮಾ ಮರೂಫ್ (ಔಟಾಗದೆ 39) ಮತ್ತು ನಿದಾದರ್ (ಔಟಾಗದೆ 18) 3ನೇ ವಿಕೆಟಿಗೆ ಭರ್ತಿ 50 ರನ್ ಪೇರಿಸಿ ಕೆರಿಬಿಯನ್ನರನ್ನು ಕಾಡಿದರು.
ವೆಸ್ಟ್ ಇಂಡೀಸ್ ಮೊದಲ ಎಸೆತದಲ್ಲೇ ಹ್ಯಾಲಿ ಮ್ಯಾಥ್ಯೂ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ದಿಯಾನಾ ಬೇಗ್ ಆರಂಭಿಕರಿಬ್ಬರನ್ನೂ ಪೆವಿಲಿಯನ್ನಿಗೆ ಅಟ್ಟಿದರು. 28 ರನ್ನಿಗೆ 3 ವಿಕೆಟ್ ಬಿತ್ತು. ನಾಯಕಿ ಸ್ಟಫಾನಿ ಟೇಲರ್ ಮತ್ತು ಕೀಪರ್ ಶಿಮೇನ್ ಕ್ಯಾಂಪ್‌ಬೆಲ್ 4ನೇ ವಿಕೆಟಿಗೆ 63 ರನ್ ಪೇರಿಸಿದಾಗ ವಿಂಡೀಸ್ ಸವಾಲಿನ ಮೊತ್ತ ಪೇರಿಸುವ ನಿರೀಕ್ಷೆ ಇತ್ತು. ಇಬ್ಬರೂ ತಲಾ 43 ರನ್ ಹೊಡೆದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಅನಾಮ್ ಅಮಿನ್ ಮತ್ತೆ ಪಾಕಿಗೆ ಮೇಲುಗೈ ಒದಗಿಸಿದರು.
ಸಂಕ್ಷಿಪ್ತ ಸ್ಕೋರ್: ವಿಂಡೀಸ್-7 ವಿಕೆಟಿಗೆ 124 (ಟೇಲರ್ 43, ಕ್ಯಾಂಪ್‌ಬೆಲ್ 43, ಕಿರ್ಬಿ 16, ದಿಯಾನಾ 19ಕ್ಕೆ 2, ನಿದಾ 30ಕ್ಕೆ 2, ಐಮಾನ್ 32ಕ್ಕೆ 2, ಅನಾಮ್ 19ಕ್ಕೆ 1). ಪಾಕಿಸ್ಥಾನ-18.2 ಓವರ್‌ಗಳಲ್ಲಿ 2 ವಿಕೆಟಿಗೆ 127 (ಮುನೀಬಾ 25, ಜವೇರಿಯಾ 35, ಬಿಸ್ಮಾ ಔಟಾಗದೆ 39, ನಿದಾ ಔಟಾಗದೆ 18).
ಪಂದ್ಯಶ್ರೇಷ್ಠ: ಜವೇರಿಯಾ ಖಾನ್.