ಜಮ್ಮು : ಪಾಕ್ ಸೇನಾ ಪಡೆ ಜಮ್ಮು ಕಾಶ್ಮೀರದ ರಾಜೋರಿ ಮತ್ತು ಪೂಂಚ್ ನ ಮೂರು ಸೆಕ್ಟರ್ ಗಳಲ್ಲಿರುವ ಭಾರತೀಯ ಸೇನೆಯ ಮುಂಚೂಣಿ ಹೊರ ಠಾಣೆಗಳನ್ನು ಗುರಿ ಇರಿಸಿ ಇಂದು ಶುಕ್ರವಾರ ಬೆಳಗ್ಗೆ ಫೈರಿಂಗ್ ಮತ್ತು ಮೋರ್ಟಾರ್ ಶೆಲ್ಲಿಂಗ್ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಭಾರತೀಯ ಸೇನಾ ಪಡೆ ಪಾಕ್ ಸೇನೆಯ ಗುಂಡಿನ ದಾಳಿಗೆ ಅತ್ಯಂತ ಪ್ರಬಲ ಪ್ರತ್ಯುತ್ತರ ನೀಡಿ ಅದರ ಗುಂಡಿನ ಸದ್ದನ್ನು ಅಡಗಿಸಿದೆ ಎಂದು ಸೇನಾ ಪಿಆರ್‌ಓ ತಿಳಿಸಿದ್ದಾರೆ.
ಪಾಕ್ ಗುಂಡಿನ ದಾಳಿ, ಮೋರ್ಟಾರ್ ಶೆಲ್ಲಿಂಗ್ ಇಂದು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾಯಿತು. ಅಪ್ರಚೋದಿತವಾಗಿ ನಡೆಸಲಾದ ಈ ದಾಳಿಯಲ್ಲಿ ಪಾಕ್ ಪಡೆಗಳು ಮೊದಲು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡರೂ ಆ ಬಳಿಕದಲ್ಲಿ ಮೋರ್ಟಾರ್ ಶೆಲ್ ಹಾರಿಸಲು ಆರಂಭಿಸಿತು. ಎಲ್‌ಓಸಿಯಲ್ಲಿನ ಪೂಂಚ್ ನ ಮಾನ್‌ಕೋಟ್, ಕೃಷ್ಣ ಘಾಟಿ ಸೆಕ್ಟರ್‌ಗಳಲ್ಲಿರುವ ಭಾರತೀಯ ಸೇನಾ ಪಡೆಯ ಮುಂಚೂಣಿ ಠಾಣೆಗಳನ್ನು ಗುರಿ ಇರಿಸಿಕೊಂಡಿತು.
ಪಾಕ್ ಗುಂಡಿನ ದಾಳಿಗೆ ಭಾರತ ಅತ್ಯಂತ ಪ್ರಬಲ ಉತ್ತರ ನೀಡಿದೆ. ಪಾಕ್ ಗುಂಡಿನ ದಾಳಿಯಲ್ಲಿ ಭಾರತೀಯ ಪಾಳಯದಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.