ಇಸ್ಲಾಮಾಬಾದ್ : ಪಾಕಿಸ್ಥಾನ ಪೊಲೀಸರು ಭಾನುವಾರ ಇಮ್ರಾನ್ ಖಾನ್ ಮತ್ತು ಹನ್ನೆರಡು ಪಿಟಿಐ ನಾಯಕರ ವಿರುದ್ಧ ಭಯೋತ್ಪಾದನೆ ಪ್ರಕರಣವನ್ನು ದಾಖಲಿಸಿದ್ದಾರೆ.
ತೋಷಖಾನಾ ಪ್ರಕರಣದ ಬಹು ನಿರೀಕ್ಷಿತ ವಿಚಾರಣೆಗೆ ಹಾಜರಾಗಲು ಖಾನ್ ಅವರು ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಆಗಮಿಸಿದಾಗ ಶನಿವಾರ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಹೊರಗೆ ಘರ್ಷಣೆಗಳು ಸಂಭವಿಸಿದ್ದವು. ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ, ಭದ್ರತಾ ಸಿಬಂದಿಗಳ ಮೇಲೆ ದಾಳಿ ಮಾಡಿದ್ದಾರೆ ಮತ್ತು ಇಲ್ಲಿನ ನ್ಯಾಯಾಂಗ ಸಂಕೀರ್ಣದ ಹೊರಗೆ ಅಶಾಂತಿ ಸೃಷ್ಟಿಸಿದ್ದಾರೆಂದು ನ್ಯಾಯಾಲಯದ ವಿಚಾರಣೆಗೆ ಮುಂಚಿತವಾಗಿ ಉಚ್ಚಾಟಿತ ಪ್ರಧಾನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಾಕಿಸ್ಥಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ 25 ಕ್ಕೂ ಹೆಚ್ಚು ಭದ್ರತಾ ಸಿಬಂದಿ ಗಾಯಗೊಂಡಿದ್ದರು, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಾಫರ್ ಇಕ್ಬಾಲ್ ಅವರು ಮಾರ್ಚ್ 30 ರವರೆಗೆ ನ್ಯಾಯಾಲಯದ ವಿಚಾರಣೆಯನ್ನು ಮುಂದೂಡಿದ್ದಾರೆ.
ಬಂಧಿತ ಪಿಟಿಐ ಕಾರ್ಯಕರ್ತರು ಮತ್ತು ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಸ್ಲಾಮಾಬಾದ್ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಸುಮಾರು 17 ಪಿಟಿಐ ನಾಯಕರನ್ನು ಹೆಸರಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
Related Articles
ಖಾನ್ ಅವರ ಪಿಟಿಐ ಪಕ್ಷವನ್ನು ನಿಷೇಧಿತ ಸಂಘಟನೆ ಎಂದು ಪರಿಗಣಿಸಲು ಪಾಕ್ ಸರಕಾರ ಚಿಂತನೆ ನಡೆಸಿದ್ದು ಈಗಾಗಲೇ ಕಾನೂನು ತಜ್ಞರ ಜತೆಗೆ ಸಮಾಲೋಚನೆಯನ್ನೂ ನಡೆಸಲು ಆರಂಭಿಸಿರುವುದಾಗಿ ವರದಿಯಾಗಿದೆ.
70 ವರ್ಷದ ಇಮ್ರಾನ್ ಖಾನ್ ಅವರು ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸಿದ್ದರು. ಬೆಂಗಾವಲು ಪಡೆಯಲ್ಲಿ ಅವರ ಬೆಂಬಲಿಗರು ಇದ್ದರು. ಅದೇ ವೇಳೆಯಲ್ಲಿ 10,000 ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಪಂಜಾಬ್ ಪೋಲೀಸ್ ಸಿಬಂದಿಗಳು ಲಾಹೋರ್‌ನಲ್ಲಿರುವ ಖಾನ್ ಅವರ ಜಮಾನ್ ಪಾರ್ಕ್ ನಿವಾಸಕ್ಕೆ ದಾಳಿ ಮಾಡಿ ಅವರ ಪಕ್ಷದ ಡಜನ್ ಗಟ್ಟಲೆ ಕಾರ್ಯಕರ್ತರನ್ನು ಬಂಧಿಸಿದ್ದರು.