Advertisement

ಕಾಶ್ಮೀರಕ್ಕೆ ನುಗ್ಗಲು ಆದೇಶ

10:54 AM Oct 09, 2019 | Team Udayavani |

ಹೊಸದಿಲ್ಲಿ/ಶ್ರೀನಗರ: “ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದು ಕೊಂಡು ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಾ ಕೂರಬೇಡಿ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಹೋಗಿ ನೇರವಾಗಿ ಜಮ್ಮು ಕಾಶ್ಮೀರದೊಳಕ್ಕೆ ನುಗ್ಗಿ, ಅಲ್ಲಿ ಜೆಹಾದ್‌ ಆರಂಭಿಸಿ’ ಎಂದು ಪಾಕ್‌ನಲ್ಲಿನ ಉಗ್ರ ಸಂಘಟನೆಗಳಿಗೆ ಸ್ವತಃ ಪಾಕಿಸ್ಥಾನ ಸರಕಾರವೇ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

Advertisement

ಜತೆಗೆ, “ರಾವಲ್ಪಿಂಡಿಯಲ್ಲಿನ ಎಲ್ಲ ಉಗ್ರ ಸಂಘಟನೆಗಳು ತಮ್ಮ ಕಚೇರಿಯನ್ನು ಮುಚ್ಚಿ, ಪಿಒಕೆಯ ರಾಜಧಾನಿ ಮುಜಫ‌#ರಾಬಾದ್‌ಗೆ ಹೋಗಿ ಹೊಸ ಮಾದರಿಯ ಉಗ್ರವಾದಿ ಚಳವಳಿ ರೂಪಿಸಬೇಕೆಂದು ಸೂಚನೆ ನೀಡಿದೆ’ ಎಂದು “ದ ಟ್ರಿಬ್ಯೂನ್‌’ ವರದಿ ಮಾಡಿದೆ. ಇತ್ತೀಚೆಗೆ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆನ್ನಲ್ಲೇ ಕಿಡಿಕಾರಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಭಾರತ ಸರಕಾರದ ಈ ಕ್ರಮದಿಂದ ಕಾಶ್ಮೀರದಲ್ಲಿ ರಕ್ತಪಾತವಾಗುತ್ತದೆ ಎಂದಿದ್ದರು. ಈಗ, ಆ ಹೇಳಿಕೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸಲು ಪಾಕ್‌ ಸಜ್ಜಾಗಿದೆ. ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವಾಗಿಸಲು ಸತತ ಪ್ರಯತ್ನ ನಡೆಸಿ ವಿಫ‌ಲವಾದ ನಂತರ ಈಗ ಉಗ್ರವಾದದ ತನ್ನ ಹಳೆಯ ಮಾರ್ಗಕ್ಕೆ ಪಾಕ್‌ ಮತ್ತೆ ಮನಸ್ಸು ಮಾಡಿದೆ ಎಂದು “ದ ಟ್ರಿಬ್ಯೂನ್‌’ನ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಶಂಕಿತನ ವಶ: ಜಮ್ಮು – ಕಾಶ್ಮೀರದ ಬಾರಾಮುಲ್ಲಾದಲ್ಲಿ ಜೈಶ್‌ – ಎ – ಮೊಹಮ್ಮದ್‌ ಸಂಘಟನೆಗೆ ಸೇರಿದಾತ ಎನ್ನಲಾದ ಮೊಹ್ಸಿನ್‌ ಮನ್ಸೂರ್‌ ಸಾಲಿØಯಾ ಎಂಬಾತನನ್ನು ಭದ್ರತಾ ಪಡೆಗಳು ರವಿವಾರ ಬಂಧಿಸಿವೆ.
ಎಲ್‌ಒಸಿ ಕಡೆ ಹೊರಟವರಿಗೆ ತಡೆ: ಇನ್ನೊಂದೆಡೆ, ರವಿವಾರ ಪಾಕ್‌ ಆಕ್ರಮಿತ ಕಾಶ್ಮೀರದ ಸಾವಿರಾರು ಮಂದಿ ಎಲ್‌ಒಸಿಯತ್ತ ಪಾದಯಾತ್ರೆ ಕೈಗೊಂಡರು.

ಆದರೆ, ಎಲ್‌ಒಸಿಯಿಂದ 6-8 ಕಿ.ಮೀ. ದೂರದ ಜಿಸ್ಕೂಲ್‌ನಲ್ಲೇ ಅವರನ್ನು ತಡೆದು ವಾಪಸ್‌ ಕಳುಹಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್‌ ಖಂಡಿಸಿ ಹಾಗೂ ಕಾಶ್ಮೀರಿಗರಿಗೆ ಬೆಂಬಲ ಸೂಚಿಸಿ ಜಮ್ಮು-ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆಕೆಎಲ್‌ಎಫ್) ಈ ಪಾದಯಾತ್ರೆ ಆಯೋಜಿಸಿತ್ತು.

ನುಸುಳು ಯತ್ನ ವಿಫ‌ಲ: ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನೌಗಾಮ್‌ ವಲಯದ ಮೂಲಕ ಭಾರತ ಪ್ರವೇಶಿಸಲು ಯತ್ನಿಸಿದ ಪಾಕಿಸ್ಥಾನದ ನುಸುಳುಕೋರರನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ನುಸುಳುಕೋರರನ್ನು ಕಂಡೊಡನೆ ಸೇನೆ ಗುಂಡಿನ ದಾಳಿ ಆರಂಭಿಸಿದ ಕಾರಣ, ಅವರು ಅಲ್ಲಿಂದ ಕಾಲ್ಕಿತ್ತರು.

Advertisement

ರಾಜಕೀಯ ಚಟುವಟಿಕೆ ಪುನರಾರಂಭ
ಶೀಘ್ರದಲ್ಲಿಯೇ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರನ್ನು ಒಬ್ಬೊಬ್ಬರನ್ನಾಗಿ ಬಿಡುಗಡೆ ಮಾಡುವ ವಾಗ್ಧಾನ ಮಾಡಿರುವ ಕೇಂದ್ರ, ರಾಜ್ಯ ಸರಕಾರಗಳು ಅದಕ್ಕೆ ಪೂರಕವಾಗಿ ನಡೆದುಕೊಳ್ಳಲಾರಂಭಿಸಿದ್ದು, ಕಣಿವೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಆರಂಭವಾಗಿವೆ. ಅ.24ರಂದು ಬ್ಲಾಕ್‌ ಅಭಿವೃದ್ಧಿ ಮಂಡಳಿ ಚುನಾವಣೆಗೆ ಪೂರಕವಾಗಿ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕರಾಗಿರುವ ಡಾ| ಫಾರೂಕ್‌ ಅಬ್ದುಲ್ಲಾ, ಉಮರ್‌ ಅಬ್ದುಲ್ಲಾರನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಅವರ ಪಕ್ಷದ 15 ಮಂದಿ ಸದಸ್ಯರಿಗೆ ಅವಕಾಶ ನೀಡಲಾಗಿದೆ. ಅದರಂತೆ, ಎನ್‌ಸಿ ನಾಯಕ ದೇವೇಂದ್ರ ಸಿಂಗ್‌ ರಾಣಾ ನೇತೃತ್ವದ ನಿಯೋಗ ರವಿವಾರ ಅರ್ಧ ಗಂಟೆ ಕಾಲ ಉಮರ್‌ ಜತೆ ಮಾತುಕತೆ ನಡೆಸಿತು. ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಇದು ಮೊದಲ ರಾಜಕೀಯ ಬೆಳವಣಿಗೆಯಾಗಿದೆ. ಬಳಿಕ ಮಾತನಾಡಿದ ರಾಣಾ “ರಾಜ್ಯದಲ್ಲಿ ಯಾವುದೇ ರೀತಿಯ ರಾಜಕೀಯ ಪ್ರಕ್ರಿಯೆ ಶುರುವಾಗಬೇಕಾಗಿದ್ದರೆ ನಾಯಕರ ಬಿಡುಗಡೆ ಆಗಬೇಕು. ಈ ಬಗ್ಗೆ ಎಲ್ಲರಲ್ಲಿಯೂ ಒಂದು ರೀತಿಯ ಆತಂಕ ಇದೆ’ ಎಂದಿದ್ದಾರೆ. 24ರ ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ ಉತ್ತರಿಸಿದ ಅವರು, ರಾಜ್ಯ ಪಾಲರನ್ನು ಭೇಟಿಯಾಗಿ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಜನರ ಜತೆಗೆ ಸಭೆ ನಡೆಸಲು ಅನುಮತಿ ಕೋರಲಿದ್ದೇವೆ ಚುನಾವಣ ಪ್ರಕ್ರಿಯೆಯಲ್ಲಿ ಪಕ್ಷ ಭಾಗವಹಿಸಲಿದೆ ಎಂದಿದ್ದಾರೆ.

ಇಂದು ಮೆಹಬೂಬಾ ಭೇಟಿ: ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷದ ಮುಖಂಡರಿಗೆ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲು ಅವಕಾಶ ನೀಡಿದ ಬಳಿಕ ಪಿಡಿಪಿ ಮುಖಂಡರಿಗೆ ಸೋಮವಾರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next