Advertisement

ಉನ್ನತ ತನಿಖೆಗೆ ಪೇಜಾವರ ಶ್ರೀ ಮನವಿ

05:09 AM Jan 04, 2019 | Team Udayavani |

ಮಲ್ಪೆ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗುರುವಾರ ಮಲ್ಪೆ ಬಂದರಿಗೆ ಆಗಮಿಸಿ ಮೀನುಗಾರರೊಂದಿಗೆ ಸಮಾಲೋಚನೆ ನಡೆಸಿ ಅವರಲ್ಲಿ ಧೈರ್ಯ ತುಂಬಿದ್ದಾರೆ. ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಮರಳಿ ಬರುವಲ್ಲಿ ಉನ್ನತ ಮಟ್ಟದ ತನಿಖೆಗೆ ಸಂಬಂಧಪಟ್ಟ ಕೇಂದ್ರ ಮತ್ತು ರಾಜ್ಯದ ಸಚಿವರಿಗೆ ಸೂಚನೆ ನೀಡಲಾಗುವುದು ಎಂದು ಶ್ರೀಪಾದರು ಹೇಳಿದರು.

Advertisement

ಗುರುವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರ ಜತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು ಶ್ರೀಕೃಷ್ಣ ಮಠಕ್ಕೆ ಮತ್ತು ಅಷ್ಟಮಠಕ್ಕೆ ಅತ್ಯಂತ ನಿಕಟವಾಗಿರುವ ಮೀನುಗಾರರು ಮಠದ ಸೇವಕರಿದ್ದಂತೆ. ದೇಶದ ಉತ್ಪಾದನೆಯಲ್ಲಿ ಭಾಗಿಯಾಗಿರುವ ಮೀನುಗಾರರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರ ಅಸಡ್ಡೆ ತೋರುವುದು ಸಲ್ಲದು. ನಾಗರಿಕರ ರಕ್ಷಣೆ ಸರಕಾರದ ಕರ್ತವ್ಯ ಎಂದರು.

ನಿಮ್ಮ ಜತೆ ನಾನಿದ್ದೇನೆ
ಈ ಪ್ರಕರಣದಿಂದ ನೀವೆಲ್ಲ ಆತಂಕಿತರಾಗಿದ್ದೀರಿ. ನನ್ನಿಂದ ಯಾವ ರೀತಿಯ ಸಹಕಾರ ಬೇಕು, ಯಾವ ರೀತಿಯ ಹೋರಾಟ ಆಗಬೇಕು ಹೇಳಿ, ನಿಮ್ಮ ಜತೆ ಯಾವುತ್ತೂ ನಾನಿದ್ದೇನೆ, ಮೀನುಗಾರರು ಸುರಕ್ಷಿತವಾಗಿ ವಾಪಸ್‌ ಬರುವಂತಾಗಬೇಕು, ಅಲ್ಲಿಯವರೆಗೆ ಸಮಾಧಾನವಿಲ್ಲ ಎಂದರು. ಶೀಘ್ರ ಮರಳಿ ಬರುವಂತೆ ಪ್ರತಿನಿತ್ಯ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದವರು ತಿಳಿಸಿದರು.

ಮೀನುಗಾರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಮಾತನಾಡಿ ರಾಷ್ಟ್ರಮಟ್ಟದಲ್ಲಿ ತನಿಖೆಯನ್ನು ಚುರುಕುಗೊಳಿಸಲು ಪ್ರಧಾನಿ  ಮತ್ತು ರಕ್ಷಣಾ ಸಚಿವರಿಗೆ ನೇರ ಸಂಪರ್ಕವಾಗಿ ಮೀನುಗಾರರ ಪತ್ತೆಗೆ ತಾವು ನೆರವಾಗಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಿದರು.ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಕಾರ್ಯದರ್ಶಿ ಗೋಪಾಲ ಆರ್‌.ಕೆ., ಮತ್ತಿತರರ ಪ್ರಮುಖ ಮಖಂಡರು ಇದ್ದರು. 

ಜ. 6ರಂದು ಮೀನುಗಾರಿಕಾ ಬಂದ್‌
ಮಂಗಳೂರು:
ಬೋಟ್‌ ನಾಪತ್ತೆಯಾಗಿ 20 ದಿನ ಸಂದರೂ ಕೇಂದ್ರ ಮತ್ತು ರಾಜ್ಯ ಸರಕಾರ ಬೋಟು ಹಾಗೂ ಮೀನುಗಾರರನ್ನು ಹುಡುಕುವಲ್ಲಿ ವಿಫಲರಾಗಿರುವುದನ್ನು ಖಂಡಿಸಿ ಮಲ್ಪೆ ಮೀನುಗಾರರ ಸಂಘ ಜ. 6ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಯನ್ನು ಬೆಂಬಲಿಸಿ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಜ. 6ರಂದು ಮೀನುಗಾರಿಕೆ ಬಂದ್‌ ಆಚರಿಸಿ ಬಂದರಿನಲ್ಲಿ ನಡೆಯುವ ಎಲ್ಲ ಮೀನುಗಾರಿಕಾ ಚಟುವಟಿಕೆಗಳಿಗೆ ರಜೆ ಘೋಷಿಸಿದೆ. 

Advertisement

ವಿಳಂಬಕ್ಕೆ ವಿಷಾದ
ನಾನು ಪ್ರವಾಸದಲ್ಲಿದ್ದರಿಂದ ಬೋಟ್‌ ನಾಪತ್ತೆಯಾಗಿರುವ ವಿಷಯ ಗಮನಕ್ಕೆ ಬಂದಿಲ್ಲ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಎರಡು ದಿನ ಹಿಂದೆ ಫೇಸ್‌ಬುಕ್‌ನಲ್ಲಿ ಸಂದೇಶ ನೋಡಿದಾಗಲೇ ವಿಷಯ ಗೊತ್ತಾಗಿದೆ. ವಿಷಯ ತಿಳಿದು ಆತಂಕವಾಗಿದೆ. ಈ ಮೊದಲೇ ವಿಷಯ ಗೊತ್ತಿದ್ದರೆ ರಾಷ್ಟ್ರಪತಿ ಬಂದ ವೇಳೆ ಅವರ ಬಳಿ ಪ್ರಸ್ತಾವಿಸಿ ಶೀಘ್ರ ಕಾರ್ಯಾಚರಣೆಗೆ ಆಗ್ರಹಿಸುತ್ತಿದ್ದೆ ಎಂದು ಶ್ರೀಗಳು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next