ಕುಂಬಳೆ: ಪೈವಳಿಕೆ ಬಳಿಯ ಕಳಾಯಿಯಲ್ಲಿ ಶುಕ್ರವಾರ ರಾತ್ರಿ ಪ್ರಭಾಕರ ನೋಂಡ (42) ಎಂಬವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಆರೋಪಿ, ಸಹೋದರ ಜಯರಾಮ ನೋಂಡ (45) ಅವರನ್ನು ಪುತ್ತೂರಿನಿಂದ ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿಯಂತೆ ಮೊಗ್ರಾಲ್ ಪುತ್ತೂರು ನಿವಾಸಿ ಇಸ್ಮಾಯಿಲ್ (28) ಮತ್ತು ಪೈವಳಿಕೆ ಅಟ್ಟೆಗೋಳಿಯ ಖಾಲಿದ್ (35) ಅವರನ್ನು ಕಾಸರಗೋಡು ಡಿವೈಎಸ್‌ಪಿ ಪಿ. ಕೆ. ಸುಧಾಕರನ್ ಬಂಧಿಸಿದ್ದಾರೆ.
ಪೈವಳಿಕೆಯ ಕಳಾಯಿ ಮತ್ತು ಕರ್ನಾಟಕದ ಪುತ್ತೂರಿನಲ್ಲಿ ಬೆಲೆಬಾಳುವ ಸ್ಥಳದ ಪಾಲಿನ ವಿಷಯದಲ್ಲಿ ಸಹೋದರರ ನಡುವೆ ವಿವಾದವಿತ್ತು. ಸ್ಥಳದಿಂದ ಬರುವ ಕೃಷಿ ಆದಾಯವನ್ನು ಪ್ರಭಾಕರ ನೋಂಡ ಮಾತ್ರ ಬಳಸುತ್ತಿದ್ದುದಲ್ಲದೆ, ಸ್ಥಳವನ್ನು ಪಾಲು ಮಾಡಲು ಒಪ್ಪದಿರುವುದೇ ಕೊಲೆ ಕಾರಣ ಎಂದು ಹೇಳಲಾಗಿದೆ.
ಬಾಡಿಗೆ ಹಂತಕರು
ಪ್ರಭಾಕರ ನೋಂಡರ ಕೊಲೆಗೆ ಇಸ್ಮಾಯಿಲ್ ಮತ್ತು ಖಾಲಿದ್ ಎಂಬ ಬಾಡಿಗೆ ಹಂತಕರಿಗೆ 10 ಲಕ್ಷ ರೂ. ಸುಪಾರಿ ನೀಡಿರುವುದಾಗಿ ಜಯರಾಮ ನೋಂಡ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿಯನ್ನು ಘಟನೆಯ ಸ್ಥಳಕ್ಕೆ ಕರೆ ತಂದು ತನಿಖೆ ನಡೆಸಲಾಗಿದೆ.
Related Articles
ದೇಹದಲ್ಲಿ 48 ಗಾಯ
ಪ್ರಭಾಕರ ನೋಂಡ ಅವರ ದೇಹದಲ್ಲಿ 48 ಇರಿತದ ಗಾಯಗಳಿದ್ದವು. ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆ ಪರಿಸರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.