Advertisement

ಕರ್ಕಿ ಊರಿನ ಪುಟಗಳು

10:02 AM Oct 13, 2019 | Lakshmi GovindaRaju |

ಪಂಡಿತರು, ವೇದಾಂತಿಗಳೇ ತುಂಬಿಕೊಂಡಿದ್ದ ಊರು, ಹೊನ್ನಾವರದ ಕರ್ಕಿ. ಅಲ್ಲಿ ನಿಂತರೆ ಈಗ ಮಂತ್ರಗಳು ಕೇಳಿಸುತ್ತಿಲ್ಲ. ಕೆಲವು ಮನೆಗಳಿಗೆ ಬೀಗ; ಮತ್ತೆ ಕೆಲವು, ಉರುಳಿಬಿದ್ದಿವೆ. ಕೆಲವು ಮನೆಗಳನ್ನು ಕಾಯಲು, ತೆಂಗಿನಕಾಯಿ ಕೊಯ್ಯಲು ಯಾರೋ ಹೊರಗಿನವರ ಕಾವಲು. ಊರೊಂದು ವೃದ್ಧರ ಬೀಡಾಗುತ್ತಿರುವ ಚಿತ್ರಗಳಲ್ಲಿ, ಅಪಾರ ಕತೆಗಳಿದ್ದವು…

Advertisement

ಹೊನ್ನಾವರ ದಾಟಿ ಮುಂದೆ ಹೋಗುತ್ತಲೇ, ಬಸ್ಸಿನಲ್ಲಿ ಕುಳಿತಿದ್ದ ಹೆಗ್ಗಡೆಯವರಿಗೆ, ಕರ್ಕಿ ಊರು ಕಂಡಿತು. ಅಲ್ಲಿಯ ವಿಶ್ವಂಭರ ಶಾಸ್ತ್ರಿಗಳ ಜ್ಯೋತಿಷ್ಯ ಪಾಂಡಿತ್ಯ ಆ ಹೊತ್ತಿನಲ್ಲಿ ಅವರಿಗೆ ನೆನಪಿಗೆ ಬಂತು. ಅಳಿಯ ಗಣೇಶನ ಜಾತಕ ತಂದಿದ್ದರೆ, ತೋರಿಸಬಹುದಿತ್ತು…- ಡಾ. ಕೆ. ಶಿವರಾಮ ಕಾರಂತರು ತಮ್ಮ “ಕಣ್ಣಿದ್ದೂ ಕಾಣರು’ ಎಂಬ ಕಾದಂಬರಿಯಲ್ಲಿ “ಕರ್ಕಿ’ ಊರನ್ನು ಈ ಪರಿ ಪರಿಚಯಿಸುತ್ತಾರೆ. ಅದು ವೇದಾಂತಿಗಳ ಊರು. ಅಧ್ಯಾತ್ಮ ಸಾಧಕರ ಬೀಡು. ಬಾಲ್ಯದಿಂದಲೂ ಆ ಊರನ್ನು, ಅಲ್ಲಿನ ಮಹಾನ್‌ ಪಂಡಿತರನ್ನು ಬಲ್ಲ ನನಗೆ, ಮೊನ್ನೆ ಯಾಕೋ ಅಲ್ಲಿಗೆ ಹೋಗಿಬರಬೇಕೆನಿಸಿತ್ತು. ಕಾರಂತರ ಕಾಲದ ಆ ಚಿತ್ರಗಳೇಕೋ, ಒಂದೊಂದಾಗಿ ಮಬ್ಟಾದಂತೆ ಅನ್ನಿಸಿತು.

ಮುಂಜಾನೆ ಎದ್ದು, ಹಾಲು ಕರೆದು, ಕೊಟ್ಟಿಗೆಯ ಬಾಗಿಲು ತೆರೆದಿಟ್ಟರೂ, ಹೊರಬರಲು ಕರೆಗಾಗಿ ಕಾಯುತ್ತಿದ್ದ ಗಂಗೆ, ಗೌರಿ, ಕಪಿಲೆಯರನ್ನು ಅಲ್ಲಿ ನೋಡುವುದೇ ಚೆಂದವಿತ್ತು. ಬೀರು, ಈರು, ಶಂಕ್ರ ಗೌಡನ ಕರೆಗೆ ಓಗೊಟ್ಟು ಸಾಲುಸಾಲಾಗಿ ಶಾಲೆಗೆ ಹೊರಟ ಮಕ್ಕಳಂತೆ ತೋರುತ್ತಿದ್ದ, ಆ ಗೋವುಗಳ ಗಮಕ ಅಲ್ಲೀಗ ಕೇಳದಾದೆ. ಆ ಬೀದಿಗಳಲ್ಲಿ ಬೆಳಗ್ಗೆ ಸುಮ್ಮನೆ ನಿಂತುಬಿಟ್ಟರೆ, ಕಿವಿಯನ್ನು ಸುಶ್ರಾವ್ಯವಾಗಿ ತುಂಬುತ್ತಿದ್ದುದ್ದು, ಶಾಸ್ತ್ರಿ, ಭಟ್ಟ, ಅವಧಾನಿಗಳ ಮನೆಗಳಿಂದ ಹೊಮ್ಮುತ್ತಿದ್ದ ಮಂತ್ರಗಳು. ಪರಂಪರೆಯಿಂದ ಶಾಸ್ತ್ರ, ವೇದ, ಪುರಾಣಗಳನ್ನು ಕಾಯ್ದುಕೊಂಡು ಬಂದ ಆ ಯಜಮಾನರೇ ಈಗಿಲ್ಲ. ಕಾಸಗಲ ಕುಂಕುಮ ಇಟ್ಟು, ಪಟ್ಟೆ ಮಡಿ- ಖಾಸೆ ಉಡುಗೆಯ, ಪಾವನ ಸರದ ಗೃಹಿಣಿಯರು ಕಾಣಿಸುತ್ತಿಲ್ಲ.

ಜುಟ್ಟು ಬಿಟ್ಟು ಗಾಯತ್ರಿ ಮಂತ್ರ ಹೇಳುತ್ತಾ ಪಟಪಟ ಓಡಾಡುವ ಮಾಣಿಗಳಿಲ್ಲ. ಇವರ್ಯಾರೂ ಇಲ್ಲ ಎಂದ ಮೇಲೆ, ಬಹುಪಾಲು ಅವರ ಮನೆಗಳೂ ಇಲ್ಲ. ಕೆಲವು ಮನೆಗಳಿಗೆ ಬೀಗ; ಮತ್ತೆ ಕೆಲವು, ಉರುಳಿಬಿದ್ದಿವೆ. ಕೆಲವು ಮನೆಗಳನ್ನು ಕಾಯಲು, ತೆಂಗಿನಕಾಯಿ ಕೊಯ್ಯಲು ಯಾರೋ ಹೊರಗಿನವರ ಕಾವಲು. ಊರೊಂದು ವೃದ್ಧರ ಬೀಡಾಗುತ್ತಿರುವ ಚಿತ್ರಗಳಲ್ಲಿ, ಅಪಾರ ಕತೆಗಳಿದ್ದವು. ಅಂದು ಹೆಬ್ಟಾರ, ಮಾದಟ್ಟಿ, ಶಿವಟ್ಟಿ, ಕರಿಭಟ್ಟ- ಹೀಗೆ ಕೆಲವೇ ಕುಟುಂಬಗಳು ಈ ಊರಿಗೆ ಬಂದು ನೆಲೆಸಿದ್ದವು. ಮೂರು ಕುಟುಂಬಗಳು ನೂರಾಗಿ, ಮುನ್ನೂರಾಗಿ ಬೆಳೆದಿದ್ದವು. ಕಾಲಚಕ್ರದಲ್ಲಿ ಇಳಿಕೆ ಆರಂಭವಾಗಿ ಪುನಃ ಮೂವತ್ತಕ್ಕೆ ಬಂದು ಇಳಿದಿದೆ, ಇಳಿಯುತ್ತಲೇ ಇದೆ.

ವಿದೇಶ ಸೆಳೆಯಿತು…: ಜೀವನದ ಕಡುಕಷ್ಟವನ್ನು ಸವೆಸುತ್ತ, ಬೆವರು ಹರಿಸಿ ದುಡಿಯುತ್ತ, ಉದ್ಯೋಗಗಳನ್ನು ಬದಲು ಮಾಡುತ್ತ ಕಳೆದುಹೋದ ತಲೆಮಾರುಗಳು ಮಕ್ಕಳನ್ನು ಶಾಲೆಗೆ ಕಳಿಸಿದವು. ಕಲಿತ ಮಕ್ಕಳೆಲ್ಲಾ ಅನ್ನ ಹುಡುಕಿಕೊಂಡು ಮೊದಲು ಮುಂಬೈಗೆ, ನಂತರ ಬೆಂಗಳೂರಿಗೆ ಹೊರಟರು. ಈಗಿನ ಅನೇಕರು, ಅಮೆರಿಕ, ಚೀನಾ, ಜಪಾನ್‌, ಸ್ವಿಜ್ಜರ್ಲೆಂಡಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಜಗತ್ತಿನಾದ್ಯಂತ, ಈ ಊರಿನ ನಾಲ್ಕನೇ ತಲೆಮಾರು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದೆ. ಊರು ಬದಲಾಯಿತು, ವೃತ್ತಿಗಳು ಬದಲಾದವು.

Advertisement

ಆ ನೆನಪಿನ ಚಿತ್ರಗಳೆಲ್ಲ, ಇಲ್ಲಿನ ಬೀದಿಯ ಹಿರಿಯ ಕಂಗಳಲ್ಲಿ ಹಾಗೆಯೇ ಇವೆ. ವೇದಾಧ್ಯಯನ ಆರಂಭಿಸಿದ ಕುಟುಂಬಗಳು, ಶಾಸ್ತ್ರಿ, ಬಚ್ಚನ್‌, ದೇವೇಂದ್ರನ್‌, ಜೋಶಿ, ಅವಧಾನಿಗಳೆಲ್ಲ ಈ ಊರಿನ ಹಿರಿಮೆಯಂತಿದ್ದರು. ನಾಲ್ಕು ವೇದಗಳಲ್ಲಿ ಪರಿಣತಿ ಗಳಿಸಿ, ಮಠಾಧೀಶರಿಗೆ ಪಾಠ ಹೇಳುವಷ್ಟು ಸಮರ್ಥರಿದ್ದರು. ಮಠಾಧೀಶರು ಇಹಲೋಕ ತ್ಯಜಿಸಿದಾಗ, ಸಂಸ್ಕಾರಕ್ಕೂ ಈ ಊರಿನವರೇ ಬರಬೇಕಿತ್ತು. ಬಿಳಿ ಕೊಡೆಯ ಭಟ್ಟರು… ನಿತ್ಯ ಬೆಳಗ್ಗೆ ಎದ್ದು ಸಂಧ್ಯಾವಂದನೆ ಮುಗಿಸಿ, ಅಲ್ಪೋಪಹಾರ ಸೇವಿಸಿ, ಮಳೆಗಾಲದಲ್ಲಿ ಕಪ್ಪು ವಸ್ತ್ರದ ಕೊಡೆಗೆ ಬೇಸಿಗೆಯ ಬಿಸಿಲು ತಡೆಯಲು ದಾನವಾಗಿ ಬಂದ ಬಿಳೆ ವಸ್ತ್ರವನ್ನು ಹೊಲಿಸಿಕೊಂಡು,

ಬಿಳಿಯ ಕೊಡೆ ಹಿಡಿದು ಭಟ್ಟರು ಹೊರಟರೆಂದರೆ ಯಾವುದೋ ಮನೆಯ ಸತ್ಯನಾರಾಯಣ ಪೂಜೆ, ಗಣಹೋಮ, ಶ್ರಾದ್ಧ ಇರಬೇಕು ಎಂದು ಆಳುಗಳು ಮಾತನಾಡಿಕೊಳ್ಳುತ್ತಿದ್ದರು. ಕೆಲವು ಊರುಗಳಿಗೆ ಬಸ್ಸುಗಳಿದ್ದರೂ, ಸಿಗುವ ಎರಡು ತೆಂಗಿನ ಕಾಯಿ, ಒಂದು ಪಂಚೆ, ನಾಲ್ಕಾಣೆ ಸಂಭಾವನೆಯು ಬಸ್‌ ಟಿಕೆಟ್‌ಗೆ ಸಾಲದು ಎಂದು ಗುಡ್ಡ ಏರಿ, ನಾಲ್ಕು ತಾಸು ನಡೆದು ಶಿಷ್ಯವರ್ಗದ ಮನೆ ಮುಟ್ಟುತ್ತಿದ್ದರು. ಕಾರ್ಯ ಮುಗಿಸಿ, ಭೂರಿ ಭೋಜನ ಮಾಡಿ, ಮರಳಿ ಮನೆ ಹಾದಿ ಹಿಡಿದರೆ ಸಂಧ್ಯಾವಂದನೆಯ ಸಮಯ.

ಘಟ್ಟದ ಮೇಲೆ ಹೊಟ್ಟೆಪಾಡು: ಮತ್ತೂಂದಿಷ್ಟು ಮಂದಿ, ಶಿರಸಿ, ಸಾಗರದ ದಿಕ್ಕಿಗೆ ಹೊರಡುತ್ತಿದ್ದರು. “ವಿದ್ವಾಂಸರು ಬಂದರು’ ಎಂದು ಮಣೆ ಕೊಟ್ಟು ಕೂರಿಸಿ, ಊಟ ಹಾಕಿ, ನೂರೋ, ಇನ್ನೂರೋ ಅಡಕೆಗಳನ್ನು ಇವರ ಜೋಳಿಗೆಗೆ ಹಾಕುತ್ತಿದ್ದರು, ಆಪ್ತರು. ದೂರದೂರ ಇರುವ ನಾಲ್ಕಾರು ಮನೆ ತಿರುಗುವಷ್ಟರಲ್ಲಿ ಸಂಜೆಯಾಗಿ, ಸನಿಹದ ಹೆಗಡೆಯವರ ಮನೆಯಲ್ಲಿ ಉಳಿದು, ಅಲ್ಲಿಯೇ ಆತಿಥ್ಯ ಪಡೆದು, ಮರುದಿನ ಮತ್ತೂಂದು ಹಾದಿ…- ಹೀಗೆ ಮೂರು ತಿಂಗಳು ಘಟ್ಟದ ಸಂಭಾವನೆ. ಇನ್ನೂ ಕೆಲವರು ಜನಿವಾರವನ್ನು ತುಂಬಿಕೊಂಡು ಮನೆಮನೆಗೆ ಹೋಗಿ, ಮಾರುತ್ತಿದ್ದರು. ಮಹಾರಾಷ್ಟ್ರಕ್ಕೂ ಹೋಗಿ, ಜನಿವಾರ ಮಾರಿ ಬರುತ್ತಿದ್ದರು. ಆಗ ಘಟ್ಟದ ಮೇಲೆ ವೈದಿಕರ ಕೊರತೆ ಇತ್ತು. ಅಲ್ಲಿನ ಧಾರೆಪೂಜೆಗಳಿಗೆ ಇಲ್ಲಿನವರೇ ಬೇಕಿತ್ತು. ನವರಾತ್ರಿ, ಗಣೇಶ ಪೂಜೆಗಳೇ ಇವರ ಬದುಕಿಗೆ ಆದಾಯ.

ಕನ್ನಡದ ಮೊದಲ ನಾಟಕ ಬರೆದವರು, ಪತ್ರಿಕೆ ಹೊರತಂದವರು ಇದೇ ಊರಿನವರು. ಒಂದಾನೊಂದು ಕಾಲದಲ್ಲಿ ಮಹಾರಾಷ್ಟ್ರದ ರಂಗಭೂಮಿಗೆ ಸ್ಫೂರ್ತಿ ನೀಡಿದ ಯಕ್ಷಗಾನ ಕಲಾವಿದರೂ ಇಲ್ಲಿಯವರೇ. ತೆಂಗಿನಕಟ್ಟು, ಕೆಳಗಿನಕೇರಿ, ಭೂಸ್ವರ್ಗ- ಹೀಗೆ ಕೇರಿಗಳಲ್ಲಿ ವಾಸಿಸುವ ಇವರು ಸಂಚಾರಕ್ಕೆ ಹೋದಾಗ ಅಪರೂಪದ ಮಾವಿನತಳಿಗಳನ್ನು ತಂದು ನೆಟ್ಟಿದ್ದರು. ಆ ಮಾವಿನ ಮರಗಳು ಈಗ ನೆರಳು ಕೊಡುತ್ತಿವೆ. ಆ ನೆರಳಿನಡಿ, ನೆಟ್ಟವರನ್ನು ಕಾಣದಾದೆ. ಇಂದು ಈ ಊರಿನಲ್ಲಿ ಬಹುಸಂಖ್ಯೆಯಲ್ಲಿ ಹಿಂದುಳಿದ ಹಾಲಕ್ಕಿ, ನಾಮಧಾರಿ, ದಲಿತ ಸಮಾಜದವರು ಬೀಡು ಬಿಟ್ಟಿದ್ದಾರೆ.

ಸಾಮರಸ್ಯದ ಸೌಂದರ್ಯ ಏರ್ಪಟ್ಟಿದೆ. ಇವರ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಅವರೂ ಮುಂದೊಂದು ದಿನ ಕೆಲಸಕ್ಕಾಗಿ, ಹೊಟ್ಟೆಪಾಡಿಗಾಗಿ ಪರಊರನ್ನು ಆಶ್ರಯಿಸಬೇಕಾದ ಅನಿವಾರ್ಯತೆಯಂತೂ ಇದ್ದೇ ಇದೆ. ಅದು ಇನ್ನೊಂದು ಅಧ್ಯಾಯ. ಅದೇನೇ ಇರಲಿ, 300 ಮನೆಗಳಿದ್ದ, ಕರ್ಕಿಯ ಹವ್ಯಕರ ಅಗ್ರಹಾರದಲ್ಲಿ ಈಗ ಇರುವುದು 30 ಮನೆಗಳು ಮಾತ್ರ. ಬ್ರಾಹ್ಮಣ ಸಮಾಜದ ಮನೆಗಳು ಬಹುಪಾಲು ತೆರವಾದ ದೊಡ್ಡ ಉದಾಹರಣೆ ಇಲ್ಲಿಯದ್ದು. ಕರ್ಕಿಯವರು ಇಲ್ಲೊಂದಿಷ್ಟು ಕಳಕೊಂಡರೂ, ಎಲ್ಲೇ ಹೋದರೂ ಹೊಸಹೊಸದನ್ನು ಗಳಿಸುತ್ತಾ ಮೌಲ್ಯ ಉಳಿಸಿಕೊಂಡಿದ್ದಾರೆ. ಆ ಹೆಮ್ಮೆ, ಊರಿನ ಹಿರಿಯ ಮೊಗಗಳಲ್ಲಿ ಕಾಣಿಸಿತು.

ಕನಸುಗಳ ಬೆನ್ನು ಹತ್ತಿ…: ಕರ್ಕಿ ಊರಿನಲ್ಲಿ ಕಣ್ಣುಬಿಟ್ಟ ವೇದಾಂತಿಗಳ ಮಕ್ಕಳು, ಅಕ್ಷರ ಕಲಿಯಲು ಶಾಲೆ ಸೇರಿಕೊಂಡಾದ ಮೇಲೆ, ಊರಿನವರ ಕನಸುಗಳೇ ಬದಲಾದವು. ತಾಲೂಕು ಕೇಂದ್ರಗಳಲ್ಲಿ ಓದಿದವರನ್ನು ಮುಂಬೈ ಕೆಲಸಕ್ಕೆ ಕರೆಯಿತು. ಕೆಲವು ಸಾಹಸಿಗಳು ಅಲ್ಲಿ ಕಂಪನಿ ಕಟ್ಟಿದರು; ಬಟ್ಟೆ ಅಂಗಡಿ ತೆರೆದರು. ಸ್ವಲ್ಪ ಹಣವಿದ್ದವರು, ಹೆಂಚಿನ ಕಾರ್ಖಾನೆ ತೆರೆದರು. ವಿದೇಶಕ್ಕೆ ಜಿಗಿದರು. ಇಲ್ಲಿನ ವೈದಿಕರ, ಈ ಊರಿನ ಕುರಿತು ಅಧ್ಯಯನ ಮಾಡಿರುವ ಕೆ.ಎಸ್‌. ಭಟ್‌, “ತಮ್ಮ ಸಮಾಜದ ಬಾಂಧವರು ಚದುರಿ ಹೋದರೂ, ಪರಂಪರೆ ಹಾಗೂ ಜೀವದ್ರವವಾದ ಕಷ್ಟಪಡುವ ಗುಣ, ತತ್ವನಿಷ್ಠೆಯನ್ನು ಉಳಿಸಿಕೊಂಡಿದ್ದಾರೆ’ ಎನ್ನುತ್ತಾರೆ.

* ಜಿ.ಯು. ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next