ಬಡಗನ್ನೂರು: ಐತಿಹಾಸಿಕ ಹಿನ್ನೆಲೆಯ ಶ್ರೀ ಕ್ಷೇತ್ರ ಪಡುಮಲೆಯಲ್ಲಿ ಗ್ರಾಮದ ದೇವಾಲಯ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಸಾನ್ನಿಧ್ಯದ ಪುನಃ ನಿರ್ಮಾಣ ನಡೆಯುತ್ತಿದೆ. ದೇವಾಲಯದ ಮೂಲಸ್ಥಾನವಾಗಿರುವ ಮದಕದಲ್ಲಿರುವ ದೇವಿಯ ಸಾನ್ನಿಧ್ಯದ ಅಭಿವೃದ್ಧಿಯೂ ಆಗುತ್ತಿದ್ದು ಈ ಸಂದರ್ಭದಲ್ಲಿ ಘಟಿಸಿದ ವಿಸ್ಮಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಕೌತುಕಕ್ಕೆ ಕಾರಣವಾಗಿದೆ.
ಶಾಸ್ತಾರ ವಿಷ್ಣುಮೂರ್ತಿ ದೇವರ ಮೂಲವು 2 ಕಿ.ಮೀ. ದೂರದ ಪಡುಮಲೆ ಕ್ಷೇತ್ರದ ಮದಕದಲ್ಲಿರುವ ರಾಜರಾಜೇಶ್ವರೀ ದೇವಿ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದು, ಅಲ್ಲಿರುವ ರಾಜರಾಜೇಶ್ವರೀ ಗುಡಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಾನ್ನಿಧ್ಯದ ಬಳಕೆಗೆ ಬಾವಿ ತೋಡುವ ನಿಟ್ಟಿನಲ್ಲಿ ಅರ್ಚಕರು ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆದಾಗ ಚಿಮ್ಮಿದ ತೆಂಗಿನ ನೀರು ಆರತಿ ತಟ್ಟೆಗೆ ಬಿದ್ದಿತು.
ಸಾಮಾನ್ಯವಾಗಿ ನೀರು ಬಿದ್ದಾಗ ಆರುವ ಬೆಳಕು ಇಲ್ಲಿ ಪ್ರಖರವಾಗಿ ಉರಿಯಲಾರಂಭಿಸಿತು. ಇದು ದೇವಿಯ ಸಾನ್ನಿಧ್ಯ ಬೆಳಗುವ ಸೂಚನೆ ಎಂಬ ಅಭಿಪ್ರಾಯ ಭಕ್ತರಲ್ಲಿ ಮೂಡಿದೆ. ಆರತಿಯ ಬೆಂಕಿ ಪ್ರಜ್ವಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮದಕದಿಂದ ನೀರು ತಂದು ಶುದ್ಧೀಕರಣ ಮಾಡಬೇಕೆಂದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ. ದೇವಾಲಯಕ್ಕೆ ಸಂಬಂಧಿಸಿದ ನಾಗನ ಕಲ್ಲು ಸೇರಿದಂತೆ ದೇವರ ವಿಗ್ರಹಗಳನ್ನು ಮದಕದಲ್ಲೇ ಜಲಸ್ತಂಭನ ಮಾಡಲಾಗಿದೆ. ದೇವಿಯ ಸಾನ್ನಿಧ್ಯದಲ್ಲಿ ತೋಡಿರುವ ಬಾವಿಯಲ್ಲಿ ಕೇವಲ 6 ಅಡಿಯಲ್ಲಿ ನೀರು ಲಭಿಸಿರುವುದೂ ಇಲ್ಲಿನ ಇನ್ನೊಂದು ವೈಶಿಷ್ಟ್ಯ.