Advertisement

ಪಡುಕರೆ: ವಿಶ್ವದರ್ಜೆ ಮರೀನಾ ನಿರ್ಮಾಣಕ್ಕೆ ಸ್ಥಳ ಗುರುತು

02:48 AM Jan 09, 2021 | Team Udayavani |

ಉಡುಪಿ: ಮಲ್ಪೆ- ಪಡುಕರೆ ತೀರದಲ್ಲಿ ದೇಶ-ವಿದೇಶಗಳ ಪ್ರವಾಸಿ ನೌಕೆಗಳ ನಿಲುಗಡೆಗೆ ಅನುಕೂಲವಾಗುವಂತಹ ವಿಶ್ವ ದರ್ಜೆಯ ಮರೀನಾದ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದು, ಇದರ ಸಾಧಕ- ಬಾಧಕ ವರದಿಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನೀಡಲಿದೆ.

Advertisement

ಕೇಂದ್ರ ಸರಕಾರ ಸಾಗರ ಮಾಲಾ ಕಾರ್ಯಕ್ರಮದಡಿ ಮರೀನಾ ಯೋಜನೆಯನ್ನು ಅನುಷ್ಠಾನಗೊಳಿಸಲು 800 ಕೋ.ರೂ. ಅನುದಾನವನ್ನು ಕಾಯ್ದಿರಿಸಿದೆ. ಪಡುಕರೆಯಲ್ಲಿ ಬಹದ್ದೂರ್‌ ಗಢ ದ್ವೀಪ ಸೇರಿದಂತೆ ಒಟ್ಟು 3 ನೈಸರ್ಗಿಕ ದ್ವೀಪಗಳು ಈ ಯೋಜನೆಯನ್ನು ಜಾರಿಗೊಳಿಸಲು ಸೂಕ್ತವಾಗಿವೆ. ಮರೀನಾದ ಮಾನದಂಡ ತೇರ್ಗಡೆಯಾದರೆ ದೇಶ ಅತ್ಯುತ್ತಮ ಮರೀನಾ ಹೊಂದಿರುವ ಹೆಗ್ಗಳಿಕೆ ಉಡುಪಿ ಜಿಲ್ಲೆಯದ್ದಾಗಲಿದೆ.

1 ಕೋ.ರೂ. ವೆಚ್ಚದಲ್ಲಿ ಸರ್ವೇ :

ಕರಾವಳಿ ಅಭಿವೃದ್ಧಿ ಪ್ರಾಧಿಕಾರವು 1 ಕೋ.ರೂ. ವೆಚ್ಚದಲ್ಲಿ ವರದಿಯನ್ನು ಸಿದ್ಧಪಡಿಸಲಿದೆ. ಪುಣೆಯ ಸಿಡಬ್ಲ್ಯುಪಿಆರ್‌ಎಸ್‌ ಸಂಸ್ಥೆಯ ಮೂಲಕ ಬೆಥಮೆಟಿಕ್‌ ಸರ್ವೇ, ತಾಂತ್ರಿಕ ಸಾಧ್ಯತೆ ಸೇರಿದಂತೆ ಇತರ ಸಾಧ್ಯತೆಗಳ ಕುರಿತ ತಜ್ಞರೊಳಗೊಂಡ ತಂಡ ವರದಿಯನ್ನು ಮುಂದಿನ 10 ತಿಂಗಳೊಳಗೆ ಸಿದ್ಧಪಡಿಸುತ್ತದೆ. ಇದರಲ್ಲಿ ಯಾವುದೇ ಬಾಧಕಗಳು ಇಲ್ಲವಾದರೆ ಮಾತ್ರ ಪ್ರಾಧಿಕಾರವು ಡಿಪಿಆರ್‌ ಸಿದ್ಧಪಡಿಸಲಿದೆ. ಇಲ್ಲಿ 1.66 ಕಿ.ಮೀ ನಿಂದ 2 ಕಿ.ಮೀ ವರೆಗೆ ಬ್ರೇಕ್‌ ವಾಟರ್‌ ನಿರ್ಮಿಸಿ ಹಿನ್ನೀರಿನ ಸುಮಾರು 3.69 ಕಿ.ಮೀ. ಜಾಗದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ.

4,000 ನೌಕೆ! :

Advertisement

ಸಮುದ್ರದಲ್ಲಿ ಹಾದು ಹೋಗುವ ದೇಶ ವಿದೇಶಗಳ ವಿಹಾರ ನೌಕೆಗಳು, ಬೋಟುಗಳು ತಂಗುವುದಕ್ಕೆ, ದುರಸ್ತಿಗೆ ಇರುವ ತಂಗುದಾಣವೇ ಮರೀನಾ. ಮಲ್ಪೆ- ಪಡುಕರೆ ಮಾರ್ಗದಲ್ಲಿ ವರ್ಷಕ್ಕೆ 4,000 ನೌಕೆಗಳು ಹಾದು ಹೋಗುತ್ತವೆ. ಆದರೆ ಅವುಗಳಿಗೆ ತಂಗುವುದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಮರೀನಾ ಇಲ್ಲ.

ಸ್ಥಳೀಯರಿಗೆ ಪ್ರಯೋಜನವೇನು? :

ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಾಣವಾಗುವ ಈ ಮರೀನಾದಿಂದ ಸರಕಾರಕ್ಕೆ ಭಾರೀ ಆದಾಯ ಬರಲಿದೆ. ಜತೆಗೆ ಮಲ್ಪೆ-ಪಡುಕರೆ ಬೀಚ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಜತೆಗೆ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕತೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಯೋಜನೆಯಲ್ಲಿ ಏನಿರಲಿದೆ? :

ಮರೀನಾ ಯೋಜನೆಯಡಿ ಆಯ್ಕೆಯಾದರೆ ಆ ಪ್ರದೇಶವು ಪ್ರವಾಸೋದ್ಯಮದ ಮುಖ್ಯ ತಾಣವಾಗಿ ಪರಿವರ್ತನೆಯಾಗಲಿದೆ. ಇಲ್ಲಿ ವಿವಿಧ ಮಾದರಿಯ ದೋಣಿಗಳು, ವಿಹಾರ ನೌಕೆಗಳು ಮತ್ತು ಮನೋರಂಜನ ವಿಹಾರ ದೋಣಿಗಳಿಗೆ, ತೇಲುವ ಸೇತುವೆ, ಹೊಟೇಲು, ರೆಸ್ಟೋರೆಂಟ್‌, ಇಂಧನ ಸೌಲಭ್ಯ, ಹಡಗುಗಳನ್ನು ತೊಳೆಯುವ, ದುರಸ್ತಿ ಸೌಲಭ್ಯಗಳು  ಹಾಗೂ  ಮನೆ ನಿರ್ಮಾಣಕ್ಕೆ ಅವಕಾಶವಿದೆ.

ಕೇಂದ್ರವು ಪಡುಕರೆಯಲ್ಲಿ ವಿಶ್ವದರ್ಜೆ ಮರೀನಾ ನಿರ್ಮಾಣಕ್ಕೆ ಚಿಂತನೆ ಇದೆ. ಆದರೆ ಸಾಧಕ-ಬಾಧಕ ವರದಿಯ ಬಂದ ಬಳಿಕ ಮುಂದಿನ ಕೆಲಸಗಳು ನಡೆಯಲಿವೆ. ಮರೀನಾದಿಂದ ಸ್ಥಳೀಯವಾಗಿ ಉದ್ಯೋಗಾವಕಾಶ ಹಾಗೂ ಆರ್ಥಿಕತೆ ಹೆಚ್ಚಾಗಲಿದೆ.-ರಘುಪತಿ ಭಟ್‌, ಶಾಸಕರು, ಉಡುಪಿ. 

 

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next